ಗುರುವಾರ , ಅಕ್ಟೋಬರ್ 21, 2021
24 °C

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಅರ್ಜಿ: ಕೆಪಿಸಿಸಿಗೆ ರವಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನಾಲ್ವರು ಮಾತ್ರ ಅರ್ಜಿ ಸಲ್ಲಿಸಿದ್ದು, ಅವುಗಳನ್ನು ಸೋಮವಾರ ಕೆಪಿಸಿಸಿ ಅಧ್ಯಕ್ಷರಿಗೆ ಹಸ್ತಾಂತರ ಮಾಡಲಾಯಿತು.

ಕಾಂಗ್ರೆಸ್‌ನಿಂದ ಪರಿಷತ್‌ಗೆ ಸ್ಪರ್ಧಿಸ ಬಯಸುವವರಿಂದ ಅರ್ಜಿ ಆಹ್ವಾನಿಸಿದ್ದು, ಪರಿಶಿಷ್ಟ ಜಾತಿ ಎಡಗೈ ಸಮುದಾಯದ ಕೆಂಚಮಾರಯ್ಯ, ಒಕ್ಕಲಿಗ ಸಮುದಾಯದ ಯಲಚವಾಡಿ ನಾಗರಾಜ್, ಮುಸ್ಲಿಂ ಸಮುದಾಯದ ಇಮ್ತಿಯಾಜ್ ಅಹಮದ್, ಪರಿಶಿಷ್ಟ ವರ್ಗದ ಆರ್. ರಾಜೇಂದ್ರ ಅರ್ಜಿ ಸಲ್ಲಿಸಿದ್ದರು. ಅನಗತ್ಯವಾಗಿ ಅರ್ಜಿ ಸಲ್ಲಿಸುವುದನ್ನು ನಿಯಂತ್ರಿಸುವ ಸಲುವಾಗಿ ಅರ್ಜಿ ಜತೆಗೆ ₹ 1 ಲಕ್ಷ ಮೊತ್ತದ ಡಿ.ಡಿ ಕೊಡುವಂತೆ ಆಕಾಂಕ್ಷಿಗಳಿಗೆ ಸೂಚಿಸಲಾಗಿತ್ತು. ಹಾಗಾಗಿ ನಾಲ್ವರು ಮಾತ್ರ ಅರ್ಜಿ ಸಲ್ಲಿಸಿದ್ದು, ಈ ಎಲ್ಲಾ ಅರ್ಜಿಗಳನ್ನು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ರಾಮಕೃಷ್ಣ ಕೆಪಿಸಿಸಿಗೆ ಸಲ್ಲಿಸಿದ್ದಾರೆ.

ಅರ್ಜಿ ಹಾಕಿರುವ ಆಕಾಂಕ್ಷಿಗಳಲ್ಲಿ ಒಬ್ಬರನ್ನು ಪರಿಗಣಿಸಬಹುದು. ಇಲ್ಲವೆ ಅಂತಿಮ ಹಂತದಲ್ಲಿ ಹಾಗೂ ಪರಿಸ್ಥಿತಿ ನೋಡಿಕೊಂಡು ಅರ್ಜಿ ಸಲ್ಲಿಸದವರನ್ನೂ ಪರಿಗಣಿಸಿ ಟಿಕೆಟ್ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಜೆಡಿಎಸ್, ಬಿಜೆಪಿಯಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬುದನ್ನು ನೋಡಿಕೊಂಡು ಪ್ರತಿ ತಂತ್ರವನ್ನು ಕಾಂಗ್ರೆಸ್ ರೂಪಿಸಲಿದೆ.

ಇತರೆ ಪಕ್ಷಗಳು ‘ಹಣ– ಜಾತಿ’ಗೆ ಮಣೆ ಹಾಕಿದರೆ ನಮ್ಮಲ್ಲೂ ಲೆಕ್ಕಾಚಾರ ನಡೆಸಬೇಕಾಗುತ್ತದೆ. ಎಲ್ಲಾ ರೀತಿಯಲ್ಲೂ ಪೈಪೋಟಿ ನೀಡುವಂತಹ ಅಭ್ಯರ್ಥಿಯನ್ನು ಸ್ಪರ್ಧೆಗೆ ಆಯ್ಕೆ ಮಾಡಬೇಕಾಗುತ್ತದೆ. ಅಂತಹ ಸಂದರ್ಭ ಎದುರಾದರೆ ಅರ್ಜಿ ಹಾಕಿದವರು, ಅರ್ಜಿ ಹಾಕದವರು ಎಂಬ ವಿಚಾರ ಮುಖ್ಯವಾಗುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸುಮಾರು 5,200 ಸದಸ್ಯರು ಆಯ್ಕೆಯಾಗಿದ್ದಾರೆ. ಇನ್ನೂ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗೆ ಚುನಾವಣೆ ನಡೆದಿಲ್ಲ. ಕಾಂಗ್ರೆಸ್ ಬೆಂಬಲಿತ ಸುಮಾರು 2 ಸಾವಿರ ಸದಸ್ಯರು ಇದ್ದಾರೆ ಎಂದು ಆ ಪಕ್ಷದ ಮುಖಂಡರು ಹೇಳುತ್ತಿದ್ದಾರೆ.

ಬಿಜೆಪಿ ಬೆಂಬಲದ 1,700 ಹಾಗೂ ಜೆಡಿಎಸ್ ಬೆಂಬಲದ 1,500 ಸದಸ್ಯರು ಇದ್ದಾರೆ ಎಂದು ಹೇಳಲಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿದರೆ ಗ್ರಾಮ ಪಂಚಾಯಿತಿಗಳಿಗೆ ಪಕ್ಷದ ಆಧಾರದ ಮೇಲೆ ಚುನಾವಣೆ ನಡೆಯುವುದಿಲ್ಲ. ಒಂದು ಅಂದಾಜಿನ ಮೇಲೆ ಇವರು ತಮ್ಮ ಪಕ್ಷದ ಬೆಂಬಲಿಗರು ಎಂದು ಆಯಾ ಪಕ್ಷದ ನಾಯಕರು ಪಟ್ಟಿ ನೀಡುತ್ತಿದ್ದಾರೆ.

ವಿಧಾನ ಪರಿಷತ್‌ ಚುನಾವಣೆಗೆ ದಿನಾಂಕ ನಿಗದಿಯಾಗಿಲ್ಲ. ಬಿಜೆಪಿಯಲ್ಲೂ ಸಾಕಷ್ಟು ಗೊಂದಲಗಳು ಮುಂದುವರಿದಿದ್ದು, ಜಿಲ್ಲಾ ಘಟಕದ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಇನ್ನೂ ಹೊಸ ಅಧ್ಯಕ್ಷರ ನೇಮಕವಾಗಿಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇದ್ದು, ಇಂತಹ ಅವಕಾಶವನ್ನು ಬಳಸಿಕೊಂಡು ಚುನಾವಣೆ ಎದುರಿಸಲು ನಾಯಕರು ಸಜ್ಜಾಗುತ್ತಿದ್ದಾರೆ. ಸದಸ್ಯರು ಯಾವ ಪಕ್ಷಕ್ಕೇ ಸೇರಿರಲಿ, ಯಾವ ಪಕ್ಷವನ್ನೇ ಬೆಂಬಲಿಸಲಿ. ಅವರನ್ನು ‘ಒಲಿಸಿಕೊಳ್ಳುವುದು’ ಗೊತ್ತಿದೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿವೆ.

ಜೆಡಿಎಸ್‌ನಲ್ಲೂ ಗೊಂದಲಗಳು ಕಾಡುತ್ತಿದ್ದು, ಕಳೆದ ಬಾರಿ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಆಯ್ಕೆ ಆಗಿದ್ದ ಬೆಮಲ್ ಕಾಂತರಾಜು ಪಕ್ಷ ತೊರೆಯುವುದಾಗಿ ಪ್ರಕಟಿಸಿದ್ದಾರೆ. ಈಗ ಹೊಸಬರಿಗೆ ಹುಡುಕಾಟ ನಡೆದಿದೆ. ಬಂಡಾಯ ತೋರಿದ್ದ ಗುಬ್ಬಿ ಶಾಸಕ ಶ್ರೀನಿವಾಸ್ ಸದ್ಯಕ್ಕೆ ತಣ್ಣಗಾಗಿದ್ದಾರೆ. ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸುರೇಶ್ ಬಾಬು ನಡೆ ಇನ್ನೂ ನಿಗೂಢವಾಗಿದೆ. ಕೊರಟಗೆರೆ ಮಾಜಿ ಶಾಸಕ ಸುಧಾಕರ್ ಲಾಲ್ ‘ಸಂದರ್ಭ’ ಎದುರು ನೋಡುತ್ತಿದ್ದಾರೆ.

ಜಿಲ್ಲೆಯಲ್ಲಿ ಬಲಿಷ್ಠವಾಗಿದ್ದ ಜೆಡಿಎಸ್‌ ಪಕ್ಷದ ಬೇರುಗಳು ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ನಂತರ ಸಡಿಲಗೊಂಡಿವೆ. ಜಿಲ್ಲೆಯಲ್ಲಿ ಪಕ್ಷ ಮುನ್ನಡೆಸುವ ಗಟ್ಟಿಯಾದ ನಾಯಕತ್ವವೇ ಕಾಣುತ್ತಿಲ್ಲ. ಒಂದೊಂದೇ ಭಾಗ ಕಳಚಿ ಬೀಳುತ್ತಿರುವುದು ದಳಪತಿಗಳಿಗೆ ನುಂಗಲಾರದ ತುತ್ತಾಗಿದೆ. ನಾಯಕರು ಹಾಗೂ ಕಾರ್ಯಕರ್ತರ ವಲಸೆ ಹೆಚ್ಚಾಗುತ್ತಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ತಿಣುಕಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು