ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾಂತಕ್ಕೆ ಬದ್ಧರಾಗಿದ್ದ ರಾಜಕಾರಣಿ ಸತ್ಯನಾರಾಯಣ

ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ ಅಭಿಪ್ರಾಯ
Last Updated 17 ಆಗಸ್ಟ್ 2020, 5:11 IST
ಅಕ್ಷರ ಗಾತ್ರ

ಶಿರಾ: ರಾಜಕಾರಣದಲ್ಲಿ ಪ್ರಾಮಾಣಿಕತೆ ಉಳಿಸಿಕೊಳ್ಳುವುದು ದೊಡ್ಡ ತಪಸ್ಸು. ಶಾಸಕ ಬಿ.ಸತ್ಯನಾರಾಯಣ ಜೀವನದ ಕೊನೆಯ ಕ್ಷಣದವರೆಗೂ ನಂಬಿಕೆ, ತತ್ವ, ಸಿದ್ಧಾಂತ ಬಿಟ್ಟುಕೊಡದ ಅಪರೂಪದ ರಾಜಕಾರಣಿಯಾಗಿದ್ದರು ಎಂದು ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ ಹೇಳಿದರು.

ನಗರದ ಜೆಡಿಎಸ್ ಕಚೇರಿ ಮುಂಭಾಗ ಭಾನುವಾರ ಜೆಡಿಎಸ್ ಪಕ್ಷ ಹಾಗೂ ಬಿಎಸ್ ಅಭಿಮಾನಿ ಬಳಗ ಆಯೋಜಿಸಿದ್ದ ಬಿ. ಸತ್ಯನಾರಾಯಣ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸತ್ಯನಾರಾಯಣ ಅವರ ಜೀವನ ತೆರೆದ ಪುಸ್ತಕದಂತೆ. ಸರಳ ಸಜ್ಜನಿಕೆ ವ್ಯಕ್ತಿಯಾದ ಇವರು ಯಾರೊಂದಿಗೂ ವಿರೋಧ ಕಟ್ಟಿಕೊಳ್ಳುತ್ತಿರಲಿಲ್ಲ. ತಾಲ್ಲೂಕಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಮಠದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ನಾನು ಪೀಠಾಧ್ಯಕ್ಷರಾದ ಸಮಯದಲ್ಲಿ ಅವರ ಕಾರನ್ನು ಕೊಡುಗೆಯಾಗಿ ನೀಡಿದ್ದರು. ಒಂದು ಘಟನೆಯಲ್ಲಿ ಇಡೀ ವ್ಯವಸ್ಥೆ ಮಠದ ವಿರುದ್ಧ ನಿಂತು ಡಿಸಿ, ಎಸ್‌.ಪಿ ಮೂರು ದಿನ ಸ್ಥಳದಲ್ಲೇ ಮೊಕ್ಕಾಂ ಹೂಡಿ ನಮಗೆ ಕಾನೂನಿನ ಪಾಠ ಹೇಳುತ್ತಿದ್ದರು. ಆಗ ಸತ್ಯನಾರಾಯಣ ಅವರು ಕಾನೂನು ಎಲ್ಲರಿಗೂ ಒಂದೇ ನಿಮ್ಮ ಪರವಾಗಿ ಕಾನೂನು ಇದೆ ಎದೆಗುಂದಬೇಡಿ ಎಂದು ಧೈರ್ಯ ತುಂಬಿದ್ದರು ಎಂದು ಸ್ಮರಿಸಿಕೊಂಡರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್ ಮಾತನಾಡಿ, ‘ಬಿ.ಸತ್ಯನಾರಾಯಣ ನಮ್ಮನ್ನು ಬಿಟ್ಟು ಹೋಗಿದ್ದರೂ, ಪ್ರತಿ ಗ್ರಾಮದಲ್ಲಿ ತನ್ನ ಅನುಯಾಯಿಗಳನ್ನು ಹುಟ್ಟು ಹಾಕುವ ಮೂಲಕ ಪಕ್ಷವನ್ನು ಸದೃಢಗೊಳಿಸಿದ್ದಾರೆ’ ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್ ಮಾತನಾಡಿ, ‘ರಾಜಕೀಯ ಶಕ್ತಿ ಇಲ್ಲದ ಹಿಂದುಳಿದ ಜಾತಿಗಳನ್ನು ಗುರುತಿಸಿ ಅವರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಹಿಂದುಳಿದ ಸಮುದಾಯದ ಧ್ವನಿಯಾಗಿದ್ದರು’ ಎಂದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ‘ಹೇಮಾವತಿ ಶಾಶ್ವತ ಯೋಜನೆಯಲ್ಲ ಎಂದು ಅರಿತ ಸತ್ಯಣ್ಣ ಶಿರಾ ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಹಾಗೂ ಎತ್ತಿನ ಹೊಳೆ ಯೋಜನೆಗಳನ್ನು ತರಲು ಶ್ರಮಿಸಿದ್ದರು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜಿನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ರಾಮಕೃಷ್ಣ, ಬಿ.ಎಸ್.ಸತ್ಯಪ್ರಕಾಶ್, ಜೆ.ಎನ್.ರಾಜಸಿಂಹ, ಮದಲೂರು ನರಸಿಂಹಮೂರ್ತಿ, ತಿಪ್ಪೇಸ್ವಾಮಿ, ಕೃಷ್ಣೇಗೌಡ ಅವರು ಶಾಸಕ ಬಿ.ಸತ್ಯನಾರಾಯಣ ಅವರ ಗುಣಗಾನ ಮಾಡಿದರು.

ಎಪಿಎಂಸಿ ಅಧ್ಯಕ್ಷ ಚಂದ್ರೇಗೌಡ, ಮುಡಿಮಡು ರಂಗಶ್ವಾಮಯ್ಯ, ನರಸಿಂಹೇಗೌಡ, ಮುಡಿಮಡು ಮಂಜುನಾಥ್, ಚಂಗಾವರ ಮಾರಣ್ಣ, ಆರ್.ರಾಘವೇಂದ್ರ, ಆರ್.ರಾಮು, ಕೆ‌. ರವಿಶಂಕರ್, ಟಿ.ಡಿ. ಮಲ್ಲೇಶ್, ಪಿ.ಬಿ. ಸತ್ಯನಾರಾಯಣ, ಕೋಟೆ ಮಹದೇವ್, ಪ್ರಕಾಶ್ ಗೌಡ, ಹೊನ್ನೇನಹಳ್ಳಿ ನಾಗರಾಜು, ಸುಧಾಕರ್ ಗೌಡ, ಅರೇಹಳ್ಳಿ ಬಾಬು, ಪರಮೇಶ್ ಗೌಡ, ಉದಯಶಂಕರ್, ಗೋವಿಂದರಾಜು, ಶ್ರೀರಂಗ, ವೀರೇಂದ್ರ ಇದ್ದರು.

ಪ್ರತಿ ಮಂಗಳವಾರ ಅಹವಾಲು ಸ್ವೀಕಾರ

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಿ.ಆರ್. ಉಮೇಶ್ ಮಾತನಾಡಿ, ‘ಸತ್ಯನಾರಾಯಣ ಅವರ ಸಾವಿನಿಂದ ನಷ್ಟವಾಗಿದೆ. ಬೇರೆಯವರು ಶಾಸಕರಾಗಿ ಆಯ್ಕೆಯಾಗುವವರೆಗೆ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಅವರು ಜವಾಬ್ದಾರಿ ತೆಗೆದುಕೊಂಡು ಕಾರ್ಯಕರ್ತರ ನೋವಿಗೆ ಸ್ವಂದಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸೂಚಿಸಿದ್ದಾರೆ. ಪ್ರತಿ ಮಂಗಳವಾರ ತಿಪ್ಪೇಸ್ವಾಮಿ ಅವರು ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT