ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಒತ್ತಡದಿಂದ ಸಾವರ್ಕರ್ ಪೀಠ: ಪರಮೇಶ್ವರ

Last Updated 27 ಆಗಸ್ಟ್ 2022, 12:55 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅಧ್ಯಯನ ಪೀಠ ಸ್ಥಾಪಿಸಲು ರಾಜಕೀಯ ಒತ್ತಡಕ್ಕೆ ಮಣಿದು ನಿರ್ಧರಿಸಲಾಗಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ಇಲ್ಲಿ ಶನಿವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಸರ್ಕಾರ ಸೂಚನೆ ಕೊಡದೆ, ರಾಜಕೀಯ ಒತ್ತಡ ಇಲ್ಲದೆ ಪೀಠ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ವಿ.ವಿ ಕುಲಪತಿ, ಸಿಂಡಿಕೇಟ್ ಸದಸ್ಯರಿಗೆ ನಿರ್ದೇಶನ ಕೊಡದೆ ಯಾರೂ ಏಕಾಏಕಿ ತೀರ್ಮಾನಿಸುವುದಿಲ್ಲ. ಬಿಜೆಪಿ ಮುಖ್ಯಸ್ಥರು, ಸರ್ಕಾರದ ಕಡೆಯಿಂದ ಸಿಂಡಿಕೇಟ್ ಸದಸ್ಯರಿಗೆ ನಿರ್ದೇಶನ ಕೊಟ್ಟಿರಬಹುದು. ಅದನ್ನು ಸಭೆಯಲ್ಲಿ ಒಪ್ಪಿಕೊಂಡಿರಬಹುದು’ ಎಂದು ಆರೋಪಿಸಿದರು.

ಇದೆಲ್ಲವನ್ನೂ ರಾಜ್ಯದ ಜನರು ಗಮನಿಸುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಜನರು ಪ್ರತ್ಯುತ್ತರ ಕೊಡುತ್ತಾರೆ ಎಂದರು.

‘ನಾನೇ ವಿ.ವಿ ಸ್ಥಾಪಿಸಿದ್ದು. ಆದರೆ ಎಲ್ಲಾ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ. ಹೆಚ್ಚು ಅನುದಾನ ಕೊಡುವಂತೆ ಹೋರಾಟ ಮಾಡಿದ್ದೆ. ಈಗಲೂ ಹೆಚ್ಚು ಅನುದಾನ ಕೊಡಬೇಕು. ಹೊಸ ಕ್ಯಾಂಪಸ್ ನಿರ್ಮಾಣದ ಕೆಲಸ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸುತ್ತೇನೆ’ ಎಂದು ಹೇಳಿದರು.

ಮುಖಂಡ ಕೆ.ಎಚ್.ಮುನಿಯಪ್ಪ ಅವರಿಗೆ ಪಕ್ಷದಲ್ಲಿ ಗೌರವ ಸಿಗುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಯಾವ ಅರ್ಥದಲ್ಲಿ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರು ನಮ್ಮ ಹಿರಿಯ ನಾಯಕರು. 7 ಬಾರಿ ಸಂಸದರಾಗಿದ್ದರು. ಈಗಲೂ ಅಷ್ಟೇ ಗೌರವದಿಂದ ಕಾಣುತ್ತಿದ್ದೇವೆ’ ಎಂದರು.

ಶೇ 40ರಷ್ಟು ಕಮೀಷನ್ ಬಗ್ಗೆ ಪ್ರಧಾನಿಗೆ ಗುತ್ತಿಗೆದಾರರ ಸಂಘದವರು ಪತ್ರ ಬರೆದಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ವಿವಾದ: ಮಹಾತ್ಮ ಗಾಂಧೀಜಿ ಕೊಂದವನ ಪೀಠ ಸ್ಥಾಪಿಸಲು ಹೊರಟವರಿಗೆ ಸಾವರ್ಕರ್ ಅಧ್ಯಯನ ಪೀಠ ಸ್ಥಾಪಿಸುವುದು ದೊಡ್ಡ ಕೆಲಸವೇನಲ್ಲ. ಕೇವಲ ವಿವಾದ ಮಾಡುವುದೇ ಬಿಜೆಪಿಯವರ ಕೆಲಸವಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT