ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು : ಸ್ಮಶಾನ ಭೂಮಿಗೆ ಪರಿಶಿಷ್ಟರ ಆಗ್ರಹ

Published 15 ಜುಲೈ 2023, 15:25 IST
Last Updated 15 ಜುಲೈ 2023, 15:25 IST
ಅಕ್ಷರ ಗಾತ್ರ

ತುಮಕೂರು: ಪರಿಶಿಷ್ಟರ ಅಂತ್ಯ ಸಂಸ್ಕಾರಕ್ಕೆ ಪ್ರತ್ಯೇಕವಾದ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಪರಿಶಿಷ್ಟ ಸಮುದಾಯಗಳ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರದಲ್ಲಿ ಶನಿವಾರ ನಡೆದ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹಿತರಕ್ಷಣಾ ಸಭೆಯಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದವು. ತುಮಕೂರು, ಗುಬ್ಬಿ ಹಾಗೂ ಕುಣಿಗಲ್ ತಾಲ್ಲೂಕಿನ ಪರಿಶಿಷ್ಟ ಸಮುದಾಯಗಳ ಮುಖಂಡರು ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು.

ಸಾರ್ವಜನಿಕ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ಸವರ್ಣೀಯರು ಅವಕಾಶ ನೀಡುತ್ತಿಲ್ಲ. ಈ ವಿಚಾರದಲ್ಲಿ ಅಧಿಕಾರಿಗಳು ಸಹ ತಾರತಮ್ಯ ಎಸಗುತ್ತಿದ್ದಾರೆ. ಪರಿಶಿಷ್ಟರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರು ಮಾಡುವಲ್ಲಿ ಅಧಿಕಾರಿಗಳಿಗೆ ಕಾನೂನು ಅರಿವಿನ ಕೊರತೆ ಇದೆ. ಕೆಲವು ಅಧಿಕಾರಿ, ಸಿಬ್ಬಂದಿಗೆ ಇಚ್ಛಾಶಕ್ತಿಯೇ ಇಲ್ಲ. ಇದರಿಂದ ಸಭೆಗಳು ಭಾಷಣಕ್ಕೆ ಮಾತ್ರ ಸೀಮಿತವಾಗುತ್ತಿದ್ದು, ಅರ್ಹರಿಗೆ ಪರಿಹಾರ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿತರಕ್ಷಣಾ ಸಭೆ ನಡೆದು ವರ್ಷ ಕಳೆದರೂ ಹಿಂದಿನ ಸಭೆಯಲ್ಲಿ ಚರ್ಚಿಸಿದ ವಿಷಯಗಳಿಗೆ ಪರಿಹಾರ ದೊರೆತಿಲ್ಲ. ಹಲವು ವರ್ಷಗಳಿಂದ ಪರಿಶಿಷ್ಟರು ಶವ ಸಂಸ್ಕಾರ ಮಾಡುತ್ತಿದ್ದ ಜಾಗಗಳು ಒತ್ತುವರಿಯಾಗಿವೆ. ಅದನ್ನು ಕೂಡಲೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟರು ಉಳುಮೆ ಮಾಡುತ್ತಿರುವ ಜಮೀನನ್ನು ಸ್ಮಶಾನ ಭೂಮಿಯನ್ನಾಗಿ ಗುರುತಿಸಬಾರದು ಎಂದು ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಗೌರವ್‌ಕುಮಾರ್‌ ಶೆಟ್ಟಿ, ‘ಪರಿಶಿಷ್ಟರ ಹಿತ ಕಾಯುವ ಸಲುವಾಗಿಯೇ ಸಭೆ ನಡೆಸಲಾಗುತ್ತಿದೆ. ಪ್ರತ್ಯೇಕ ಸ್ಮಶಾನ ಭೂಮಿ ಮೀಸಲಿಡಲು ಮೂರು ತಾಲ್ಲೂಕುಗಳ ತಹಶೀಲ್ದಾರರು ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಬೇಕು. ಸಾರ್ವಜನಿಕ ರುದ್ರಭೂಮಿಯಲ್ಲಿ ಪರಿಶಿಷ್ಟರು ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕೆ ಅಡ್ಡಿ ಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್, ತಹಶೀಲ್ದಾರರಾದ ಸಿದ್ದೇಶ್‌, ಮಹಾಬಲೇಶ್ವರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಯಪಾಲ್, ಪರಮೇಶ್, ಗ್ರೇಡ್-2 ತಹಶೀಲ್ದಾರ್ ಶಶಿಕಲಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT