ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯಿಂದ ದಿಲ್ಲಿವರೆಗೆ ಶಾಲೆ ಗರಿಮೆ, ಕಂಪ್ಯೂಟರ್ ಶಿಕ್ಷಣದ ಕೊರತೆ

1958ರಲ್ಲಿ ಆರಂಭವಾದ ಶಾಲೆ l ಇಂಗ್ಲಿಷ್ ಕಲಿಕೆಗೆ ಹೆಚ್ಚು ಒತ್ತು
Last Updated 30 ನವೆಂಬರ್ 2021, 5:34 IST
ಅಕ್ಷರ ಗಾತ್ರ

ವೈ.ಎನ್. ಹೊಸಕೋಟೆ: ಹಳ್ಳಿಯಿಂದ ದಿಲ್ಲಿಯವರೆಗೆ ಹೋಬಳಿಯ ಓಬಳಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗರಿಮೆ ಪಸರಿಸಿದೆ. ಪ್ರಧಾನಮಂತ್ರಿಯವರ ಛಾಯಾಗ್ರಾಹಕ ಲೋಕನಾಥ ಎನ್ನುವ ಪ್ರತಿಭೆ ಅರಳಿರುವುದು ಇದೇ ಶಾಲೆಯಿಂದ.

ಬೆಟ್ಟಗುಡ್ಡಗಳ ನಡುವೆ ಇರುವ ಗ್ರಾಮದಲ್ಲಿ ಹಚ್ಚ ಹಸಿರಿನಿಂದ ಶಾಲೆ ಕಂಗೊಳಿಸುತ್ತಿದೆ. ಗ್ರಾಮಸ್ಥರ ಸಹಕಾರ, ಪೋಷಕರ ಪ್ರೋತ್ಸಾಹ ಮತ್ತು ಶಿಕ್ಷಕರ ಶ್ರಮದ ಫಲವಾಗಿ ಒಂದು ಮಾದರಿ ಶಾಲೆಯಾಗಿ ರೂಪುಗೊಳ್ಳುತ್ತಿದೆ.

ವಿಶಾಲವಾದ ಆಟದ ಮೈದಾನ, ವ್ಯವಸ್ಥಿತ ಕೊಠಡಿಗಳು, ಉತ್ತಮ ಪೀಠೋಪಕರಣ ವ್ಯವಸ್ಥೆ ಇದೆ. ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣದ ಜೊತೆಗೆ ಪ್ರೊಜೆಕ್ಟರ್ ಆಧಾರಿತ ಆಧುನಿಕ ಬೋಧನಾ ವ್ಯವಸ್ಥೆಯೂ ಲಭ್ಯವಿದೆ.

ಶೆಟಲ್ ಬ್ಯಾಡ್ಮಿಂಟನ್‌ ಮತ್ತು ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಮತ್ತು ವಿಜ್ಞಾನ ಮೇಳಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮತ್ತು ವಿಭಾಗ ಮಟ್ಟದವೆರೆಗೆ ಸಾಧನೆ ಮಾಡಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

ಪ್ರತಿವರ್ಷ ವಸತಿ ಶಾಲೆಗಳ ಪರೀಕ್ಷೆಗಳಲ್ಲಿ ಸುಮಾರು 20-30 ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿ ದಾಖಲಾತಿ ಪಡೆಯುತ್ತಿದ್ದಾರೆ. ಇದಕ್ಕೆಲ್ಲಾ ಶಿಕ್ಷಕರ ಶ್ರಮ ಮತ್ತು ಗ್ರಾಮಸ್ಥರ ಸಹಕಾರ ಕಾರಣವಾಗಿದೆ.

ವಿಷಯವಾರು ಶಿಕ್ಷಕರ ಮತ್ತು ಕಂಪ್ಯೂಟರ್ ಶಿಕ್ಷಣದ ಕೊರತೆಯ ಹೊರತಾಗಿಯೂ ವಿದ್ಯಾರ್ಥಿಗಳ ಕಲಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಪಠ್ಯೇತರ ಚಟುವಟಿಕೆಗಳೊಂದಿಗೆ ಇಂಗ್ಲಿಷ್ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿರುವುದು ಪೋಷಕರ ವಲಯದ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಲೆಯಲ್ಲಿ ದೊರೆಯುತ್ತಿರುವ ಆಶಾದಾಯಕ ಶಿಕ್ಷಣದಿಂದಾಗಿ ಒಬ್ಬಿಬ್ಬರನ್ನು ಹೊರತುಪಡಿಸಿ ಗ್ರಾಮದಲ್ಲಿ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಉತ್ಸಾಹದಿಂದ ಇದೇ ಶಾಲೆಗೆ ಕಳುಹಿಸುತ್ತಿದ್ದು, ಮಗುವಿಗೆ ಉತ್ತಮ ಭವಿಷ್ಯ ಸಿಗುತ್ತದೆ ಎಂದು ನಂಬಿಕೆಯಲ್ಲಿದ್ದಾರೆ.

***

ಇಲಾಖೆಯ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ಗ್ರಾಮಸ್ಥರ ಸಹಕಾರ ಮತ್ತು ಶಿಕ್ಷಕರ ಹೊಂದಾಣಿಕೆಯ ಪ್ರಯತ್ನದಿಂದ ಶಾಲೆಯು ಉತ್ತಮವಾಗಿ ನಡೆಯುತ್ತಿದೆ. ಆದಾಗ್ಯೂ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಅಗತ್ಯವಾಗಿ ಕಂಪ್ಯೂಟರ್ ಶಿಕ್ಷಣ ಬೇಕಾಗಿದ್ದು, ಹಳೇ ವಿದ್ಯಾರ್ಥಿಗಳು ಗಮನ ಹರಿಸಬೇಕಾಗಿದೆ.

ಟಿ. ವೆಂಕಟರಮಣಪ್ಪ, ಮುಖ್ಯಶಿಕ್ಷಕರು

***

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳನ್ನು ಸಿದ್ಧಗೊಳಿಸುವುದು ಮುಖ್ಯವಾಗಿದೆ. ಲಭ್ಯವಿರುವ ಸಂಪನ್ಮೂಲಗಳನ್ನು ದಕ್ಷವಾಗಿ ಬಳಸಿಕೊಂಡು ಎಲ್ಲರ ಸಹಕಾರದೊಂದಿಗೆ ವಿದ್ಯಾರ್ಥಿಗಳನ್ನು ಮಾದರಿಯಾಗಿ ರೂಪಿಸುವಲ್ಲಿ ಶ್ರಮ ವಹಿಸುತ್ತಿದ್ದೇವೆ.

ಬಿ.ವಿ. ದೇವಿಕ, ಶಿಕ್ಷಕಿ

***

ನಗರ ಪ್ರದೇಶದಿಂದ ದೂರ ಇರುವ ನಮ್ಮ ಗ್ರಾಮದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಇರುವುದು ಏಕೈಕ ಸರ್ಕಾರಿ ಕನ್ನಡ ಶಾಲೆ ಇದಾಗಿದೆ. ಟ್ಯೂಷನ್ ಸೌಲಭ್ಯವೂ ಇಲ್ಲ. ರೈತಾಪಿವರ್ಗದ ನಮಗೆ ಮಕ್ಕಳಿಗೆ ಓದಿಸಿಕೊಡುವಷ್ಟು ಸಮಯ ಮತ್ತು ಶಿಕ್ಷಣ ಇಲ್ಲ. ಆದಾಗ್ಯೂ ಇಲ್ಲಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿರುವುದು ನಮ್ಮ ಶಾಲೆಯ ಹೆಮ್ಮೆಯಾಗಿದೆ.

ರಘು, ಪೋಷಕ, ಓಬಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT