ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ; ಅಭ್ಯರ್ಥಿಗಳ ಹುಡುಕಾಟ

Last Updated 9 ನವೆಂಬರ್ 2021, 19:31 IST
ಅಕ್ಷರ ಗಾತ್ರ

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯುವ ದಿನಾಂಕ ಹೊರ ಬಿದ್ದಿದ್ದು, ರಾಜಕೀಯ ಪಕ್ಷಗಳು ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿವೆ.

ಚುನಾವಣೆಗೆ ಸಮಯ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ– ಮೂರು ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಆಕಾಂಕ್ಷಿಗಳು ಟಿಕೆಟ್‌ಗೆ ಪ್ರಯತ್ನ ಆರಂಭಿಸಿದ್ದಾರೆ. ತಮ್ಮ ಮುಖಂಡರ ಮೂಲಕ ಒತ್ತಡ ತರುವ ಕೆಲಸದಲ್ಲಿ ನಿರತರಾಗಿದ್ದಾರೆ.

ಕಾಂಗ್ರೆಸ್ ಸಿದ್ಧತೆ: ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿರುವ ಕಾಂಗ್ರೆಸ್ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದು, ಒಂದು ತಿಂಗಳ ಹಿಂದೆಯೇ ಸ್ಪರ್ಧೆ ಮಾಡಲು ಬಯಸುವವರಿಂದ ಅರ್ಜಿ ಕರೆದಿತ್ತು. ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಕೆಂಚಮಾರಯ್ಯ, ಪರಿಶಿಷ್ಟ ವರ್ಗದ ಆರ್.ರಾಜೇಂದ್ರ, ಒಕ್ಕಲಿಗ ಸಮುದಾಯದ ಯಲಚವಾಡಿ ನಾಗರಾಜ್, ಮುಸ್ಲಿಂ ಸಮುದಾಯದ ಇಮ್ತಿಯಾಜ್ ಅಹಮದ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದವರಿಗೆ ಟಿಕೆಟ್ ನೀಡಬೇಕೆ, ಅರ್ಜಿ ಸಲ್ಲಿಸದವರನ್ನೂ ಪರಿಗಣಿಸಬೇಕೆ ಎಂಬ ಬಗ್ಗೆ ಪಕ್ಷದ ವರಿಷ್ಠರು ಇನ್ನೂ ನಿರ್ಧರಿಸಿಲ್ಲ. ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವ ಭರವಸೆಯೊಂದಿಗೆ ಈಗಾಗಲೇ ಆಕಾಂಕ್ಷಿಯೊಬ್ಬರು ಪ್ರಚಾರ ನಡೆಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ದೀಪಾವಳಿ ಹಬ್ಬದ ಸಮಯದಲ್ಲಿ ಪಂಚೆ, ಶರ್ಟ್ ಇತರೆ ಉಡುಗೊರೆ ಕೊಟ್ಟು ಮತ ಹಾಕುವಂತೆ ಕೇಳಿಕೊಂಡಿದ್ದಾರೆ.

ಜೆಡಿಎಸ್ ಲೆಕ್ಕಾಚಾರ: ಇನ್ನೂ ಜೆಡಿಎಸ್ ಮುಖಂಡರು ಅಭ್ಯರ್ಥಿಗಳಿಗೆ ಹುಡುಕಾಟ ನಡೆಸಿದ್ದಾರೆ. ಪಕ್ಷದಿಂದ ಕಳೆದ ಬಾರಿ ಆಯ್ಕೆ ಆಗಿದ್ದ ಬೆಮಲ್ ಕಾಂತರಾಜು ಪಕ್ಷದಿಂದ ಹೊರ ನಡೆದಿದ್ದು, ಹೊಸಬರ ಹೆಸರು ಚರ್ಚೆಗೆ ಬಂದಿವೆ. ಮಾಜಿ ಶಾಸಕ ಎಚ್.ನಿಂಗಪ್ಪ, ಕೊರಟಗೆರೆ ತಾಲ್ಲೂಕಿನ ಶಿವರಾಮಯ್ಯ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರೇಮಾ ಪತಿ ಮಹಾಲಿಂಗಪ್ಪ ಹೆಸರು ಚಾಲ್ತಿಗೆ ಬಂದಿವೆ. ಇವರಲ್ಲಿ ಒಬ್ಬರಿಗೆ ಟಿಕೆಟ್ ಸಿಗಬಹುದೇ, ಅನಿರೀಕ್ಷತವಾಗಿ ಹೊಸ ಹೆಸರು ಸೇರ್ಪಡೆಯಾಗಬಹುದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬಂದಿವೆ. ಎಚ್.ನಿಂಗಪ್ಪ ಜತೆಗೆ
ವರಿಷ್ಠರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚಿಸಲು ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಜೆಡಿಎಸ್ ವರಿಷ್ಠರು ಸಭೆ ನಡೆಸಿದರು. ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮುಖಂಡರು ಭಾಗವಹಿಸಿದ್ದರು. ಈ ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಅಧ್ಯಕ್ಷರಿಲ್ಲದ ಬಿಜೆಪಿ: ಬಿಜೆಪಿಗೆ ಸಾರಥಿಯೇ ಇಲ್ಲವಾಗಿದ್ದು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ಸುರೇಶ್‌ಗೌಡ ರಾಜೀನಾಮೆ ನೀಡಿ ಒಂದೂವರೆ ತಿಂಗಳು ಕಳೆದಿದೆ. ಹೊಸದಾಗಿ ಅಧ್ಯಕ್ಷರನ್ನು ಈವರೆಗೂ ನೇಮಕ ಮಾಡಿಲ್ಲ. ಈಗಿನ ಪರಿಸ್ಥಿತಿ ಗಮನಿಸಿದರೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ರಾಜ್ಯ ಘಟಕದ ಅಧ್ಯಕ್ಷರು ಯಾವುದೇ ನಿರ್ಧಾರವನ್ನೂ ಕೈಗೊಂಡಿಲ್ಲ. ಸಾರಥಿ ಇಲ್ಲದೆ ಚುನಾವಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಚುನಾವಣೆಗೆ ಮುನ್ನ ಅಧ್ಯಕ್ಷರನ್ನು ನೇಮಿಸುವ ಸಾಧ್ಯತೆಗಳಿವೆ ಎಂದು
ಹೇಳಲಾಗುತ್ತಿದೆ.

ಕಳೆದ ತಿಂಗಳು ಜಿಲ್ಲಾ ಮಟ್ಟದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ವಿಧಾನ ಪರಿಷತ್ ಚುನಾವಣೆ ಬಗ್ಗೆಯೂ ಚರ್ಚೆ ನಡೆದಿದ್ದು, ಸ್ಪರ್ಧಿಸಲು ಯಾರೊಬ್ಬರೂ ಮುಂದೆ ಬಂದಿಲ್ಲ. ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಅವರನ್ನು ಸ್ಪರ್ಧಿಸುವಂತೆ ಸಲಹೆ ಮಾಡಲಾಯಿತು. ಈ ಆಹ್ವಾನಕ್ಕೆ ಅವರು ಒಪ್ಪಿಗೆ ನೀಡಿಲ್ಲ. ಯೋಚಿಸಲು ಸ್ವಲ್ಪ ಸಮಯಾವಕಾಶ ಬೇಕು ಎಂದು ಕೇಳಿಕೊಂಡಿದ್ದರು. ನಂತರದ ಬೆಳವಣಿಗೆಯಲ್ಲೂ ಅವರು ಸ್ಪರ್ಧೆಗೆ ಒಲವು ತೋರಿಸಿಲ್ಲ ಎಂದು ಹೇಳಲಾಗುತ್ತಿದ್ದು, ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.

ವೆಚ್ಚ ಹೆಚ್ಚು: ಪರಿಷತ್ ಚುನಾವಣೆ ಹಣದ ಮೇಲೆ ನಿಂತಿರುತ್ತದೆ. ಸಾಮಾನ್ಯ ಚುನಾವಣೆಗಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಮತದಾರ ಸದಸ್ಯರನ್ನು ‘ಸರಿಯಾಗಿ’ ನೋಡಿಕೊಳ್ಳದಿದ್ದರೆ ಗೆಲುವು ಕಷ್ಟಕರವಾಗುತ್ತದೆ ಎಂಬ ಕಾರಣಕ್ಕೆ ಸಿರಿವಂತರನ್ನೇ ಕಣಕ್ಕಿಳಿಸಲು ಮೂರು ರಾಜಕೀಯ ಪಕ್ಷಗಳು ಮುಂದಾಗಿವೆ.

ಗ್ರಾ.ಪಂ ಸದಸ್ಯರೇ ಮುಖ್ಯ

ಗ್ರಾಮ ಪಂಚಾಯಿತಿ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರು ಮತದಾರರು. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗೆ ಚುನಾವಣೆ ನಡೆದಿಲ್ಲ. ಈ ಎರಡೂ ಸಂಸ್ಥೆಯ ಅಧಿಕಾರ ಅವಧಿ ಮುಗಿದಿದ್ದು, ಸದಸ್ಯರಾಗಿದ್ದವರು ಈಗ ಮಾಜಿಗಳಾಗಿದ್ದಾರೆ. ಈ ಬಾರಿ ಪ್ರಮುಖವಾಗಿ ಗ್ರಾ.ಪಂ ಸದಸ್ಯರನ್ನು ಕೇಂದ್ರೀಕರಿಸಿ ಚುನಾವಣೆ ನಡೆಯಲಿದೆ.

ಜಿಲ್ಲೆಯಲ್ಲಿ ಸುಮಾರು 5,200 ಮತದಾರರು ಇದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆಯುವುದಿಲ್ಲ. ಪಕ್ಷದ ಬೆಂಬಲಿಗರಾಗಿ ಗುರುತಿಸಿಕೊಂಡಿರುತ್ತಾರೆ. ಈ ಲೆಕ್ಕಾಚಾರದ ಆಧಾರದ ಮೇಲೆ ಮೂರು ಪಕ್ಷಗಳು ತಮ್ಮ ಮತದಾರರ ಸಂಖ್ಯೆಯನ್ನು ಹೇಳಿಕೊಳ್ಳುತ್ತಿವೆ. ಕಾಂಗ್ರೆಸ್ ಬೆಂಬಲಿಗ ಸದಸ್ಯರು 2 ಸಾವಿರ, ಜೆಡಿಎಸ್ ಬೆಂಬಲಿಗರು 2 ಸಾವಿರ, ಬಿಜೆಪಿ ಬೆಂಬಲಿಗರು 800ರಿಂದ 1 ಸಾವಿರ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT