ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ‘ಪಾಂಡಿತ್ಯಕ್ಕಿಂತ ಸಂವೇದನೆಯೇ ಮುಖ್ಯ’

ನಿತ್ಯಾನಂದ ಬಿ.ಶೆಟ್ಟಿ ಅವರ ‘ಮಾರ್ಗಾನ್ವೇಷಣೆ’ ಕೃತಿ ಬಿಡುಗಡೆ
Last Updated 8 ಆಗಸ್ಟ್ 2021, 3:54 IST
ಅಕ್ಷರ ಗಾತ್ರ

ತುಮಕೂರು: ‘ನವ್ಯ ಕಾಲದ ಸಾಹಿತ್ಯ ವಿಮರ್ಶಕರು ಸಂವೇದನೆಯನ್ನು ದೂರ ತಳ್ಳಿ, ಪಾಂಡಿತ್ಯವನ್ನೇ ದೊಡ್ಡದು ಮಾಡಿದರು. ಆದರೆ ನನ್ನ ಪ್ರಕಾರ ಸಂವೇದನೆಯೇದೊಡ್ಡದು’ ಎಂದು ಇಂಟೆಲ್ ದಕ್ಷಿಣ ಏಷಿಯಾ ಸಲಹೆಗಾರ, ವಿಮರ್ಶಕ ಎಸ್.ಆರ್.ವಿಜಯಶಂಕರ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ, ಬೆಸುಗೆ ಟ್ರಸ್ಟ್ ಸಹಯೋಗದಲ್ಲಿ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ನಿತ್ಯಾನಂದ ಬಿ ಶೆಟ್ಟಿ ಅವರ ‘ಮಾರ್ಗಾನ್ವೇಷಣೆ’– ಸಾಹಿತ್ಯ ಸಂಶೋಧನೆಯ ರೀತಿ–ನೀತಿ ಕೃತಿಯನ್ನು ಬಿಡುಗಡೆಮಾಡಿ ಮಾತನಾಡಿದರು.

ಮಾರ್ಗಾನ್ವೇಷಣೆ ಕೃತಿಯು ಪಾಂಡಿತ್ಯವನ್ನು ಒಳಗೊಂಡಿದೆ. ಪ್ರಾಮಾಣಿಕವಾಗಿ ಅಧ್ಯಾಪನ, ಸಂಶೋಧನೆಯಲ್ಲಿ ತೊಡಗಿಸಿಕೊಂಡವರಿಗೆ ಮಾರ್ಗದರ್ಶನ ಮಾಡುತ್ತದೆ. ವಿದ್ಯಾರ್ಥಿಗಳನ್ನು ಸಂಶೋಧನೆಗೆ ಅಣಿಗೊಳಿಸಿ, ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡದಿದ್ದರೆ ಇಂತಹ ಪುಸ್ತಕ ರಚಿಸಲು ಸಾಧ್ಯವಿಲ್ಲ. ಅಂತಹ ಕೆಲಸವನ್ನು ನಿತ್ಯಾನಂದ ಶೆಟ್ಟಿ ಅವರು ಮಾಡಿದ್ದಾರೆ.ಇದೊಂದು ಸಾಂದರ್ಭಿಕವಾದ ವಿದ್ವತ್ ಕೃತಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿಮರ್ಶೆ, ಪಾಂಡಿತ್ಯ, ಸಂವೇದನೆ ಇದ್ದರೆ ಸಂಶೋಧನೆಗೆ ಒಂದು ಅರ್ಥ ಬರುತ್ತದೆ. ಸತ್ಯ ಶೋಧನೆಗಿಂತ ಚಿಂತನೆ, ವಿಚಾರದ ಕಡೆಗೆ ಸಂಶೋಧನೆಗಳು ಸಾಗಬೇಕು. ಆಗ ಅದಕ್ಕೊಂದು ಮಹತ್ವ ರೂಪುಗೊಳ್ಳುತ್ತದೆ. ಸಂಶೋಧನೆ ಒಂದು ಹಂತಕ್ಕೆ ನಿಲ್ಲುತ್ತದೆ. ಆದರೆ ಅನ್ವೇಷಣೆ ನಿರಂತರವಾಗಿರುತ್ತದೆ. ಈ ಕೃತಿಯೂ ಅದನ್ನೇ ಧ್ವನಿಸುತ್ತದೆ ಎಂದು ಹೇಳಿದರು.

ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ, ‘ಗುಣಾತ್ಮಕ ಸಂಶೋಧನೆಗಳು ಹೆಚ್ಚಾಗಬೇಕು. ಹೊಸ ಚಿಂತನೆಯ ಅಲೆಗಳು ಮೂಡಿಬರಬೇಕು. ಜ್ಞಾನ ಪಡೆಯಲು, ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅನ್ವೇಷಣೆಗಳು ಬಹಳ ಮುಖ್ಯವಾಗುತ್ತವೆ’ ಎಂದು ತಿಳಿಸಿದರು.

ಸಮಾಜ ನಿರಂತರವಾಗಿ ಬದಲಾವಣೆ ಕಾಣುತ್ತಿರುತ್ತದೆ. ಅದಕ್ಕೆ ಪೂರಕವಾಗಿ ನಮ್ಮ ಚಿಂತನಾಲಹರಿ ಸಾಗಬೇಕು. ಬದಲಾವಣೆಗೆ ತಕ್ಕಂತೆ ಜ್ಞಾನದ ಮಟ್ಟವನ್ನು ವೃದ್ಧಿಸಿಕೊಂಡು ಸ್ಪಂದಿಸುವ ಕೆಲಸವಾಗಬೇಕು ಎಂದು ಸಲಹೆ ಮಾಡಿದರು.

ಕವಿ ರಘುನಂದನ, ‘ಗ್ರೀಕ್ ಕಾಲದಿಂದ ಆರಂಭಿಸಿ ಇಂದಿನವರೆಗಿನ ಎಲ್ಲ ಮುಖ್ಯ ವಿದ್ಯಮಾನಗಳನ್ನು ವಿಮರ್ಶಿಸುವ ಪುಸ್ತಕ ಬರೆದು ನಿತ್ಯಾನಂದ ಶೆಟ್ಟಿ ಅವರು ಕನ್ನಡ ಸಂಶೋಧನಾ ಲೋಕಕ್ಕೆ ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ‘ವಿಶ್ವವಿದ್ಯಾಲಯಗಳು ಏನು ಮಾಡಬೇಕಾಗಿದೆ ಎಂಬ ಪ್ರಶ್ನೆಗೆ ಮಾರ್ಗಾನ್ವೇಷಣೆ ಒಂದು ಉತ್ತರವಾಗಿದೆ’ ಎಂದರು.

ಮಾರ್ಗಾನ್ವೇಷಣೆ ಲೇಖಕ ನಿತ್ಯಾನಂದ ಬಿ.ಶೆಟ್ಟಿ, ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT