ಶನಿವಾರ, ನವೆಂಬರ್ 28, 2020
22 °C

PV Web Exclusive: ಪ್ರಯೋಗ ಶಾಲೆಯಾದ ಶಿರಾ

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪಕ್ಷದ ಅಸ್ತಿತ್ವವೇ ಇಲ್ಲದ ಶಿರಾ ಕ್ಷೇತ್ರವನ್ನು ಬಿಜೆಪಿ ‘ಜಯಿಸುವ’ ಮೂಲಕ ಚುನಾವಣೆ ಗೆಲುವಿನ ತಂತ್ರಗಾರಿಕೆಯ ಪ್ರಯೋಗ ಶಾಲೆ ಮಾಡಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಇದೊಂದು ಮಾದರಿ ‘ಕಾರ್ಯತಂತ್ರ’ ಎಂದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ.

ಶಿರಾದಲ್ಲಿ ಬಿಜೆಪಿ ಗೆಲುವು ಜಿಲ್ಲೆಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಕಾಂಗ್ರೆಸ್ ವಲಯದಲ್ಲಿ ಒಂದು ರೀತಿಯಲ್ಲಿ ಆತಂಕ ಕಂಡುಬಂದಿದ್ದು, ನಾಯಕರು, ಕಾರ್ಯಕರ್ತರ ನಡುವೆ ಶೂನ್ಯ ಆವರಿಸಿದೆ. ಎಷ್ಟೆಲ್ಲ ಪ್ರಯತ್ನಪಟ್ಟರೂ ಗೆಲುವು ಸಾಧ್ಯವಾಗಲಿಲ್ಲ. ಪಕ್ಷದ ಮತಗಳು ಅಷ್ಟಾಗಿ ಚದುರಿ ಹೋಗಿಲ್ಲ. ಆದರೆ ಜಯಚಂದ್ರ ಅವರಿಗೆ ಜಯ ಸಿಗಲಿಲ್ಲ ಎಂಬ ನೋವು ಕಾಡುತ್ತಿದೆ. ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದ್ದರೆ, ಬಿಜೆಪಿ ನಾಯಕರು ಗೆಲುವಿನಿಂದ ಬೀಗುತ್ತಿದ್ದಾರೆ.

ಪ್ರಯೋಗಕ್ಕೆ ಸಿದ್ಧತೆ: ಗೆಲುವಿನ ಉತ್ಸಾಹದಲ್ಲಿ ಬಿಜೆಪಿ ನಾಯಕರು ಮತ್ತಷ್ಟು ತಂತ್ರಗಾರಿಕೆ ಪೋಣಿಸಲು ಅಣಿಯಾಗುತ್ತಿದ್ದಾರೆ. ಜಾತಿ, ಸಮುದಾಯ ಹಾಗೂ ವಿಶೇಷವಾಗಿ ಯುವಕರನ್ನು ಸೆಳೆಯುವುದು ಮತ್ತು ‘ಕಟ್ಟಿಹಾಕುವ’ ಕಾರ್ಯತಂತ್ರವು ಹೊಸ ಪ್ರಯೋಗದಂತೆ ಕಂಡಿದೆ. ನೂತನ ವಿಧಾನಗಳನ್ನು ಪ್ರಯೋಗಿಸಿ ಯಶಸ್ಸು ಕಂಡಿರುವುದು ಮತ್ತೆಮತ್ತೆ ಚಾಲನೆಗೆ ತರಲು ಪ್ರೇರೇಪಿಸಿದಂತಿದೆ. ಪಕ್ಷದ ಅಸ್ತಿತ್ವ ಗಟ್ಟಿಗೊಳಿಸಲು ಹೊಸ ಅನುಭವಗಳು ನೆರವಿಗೆ ಬರಲಿವೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಮುಂಬರುವ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಈವರೆಗೂ ಗೆಲ್ಲಲು ಸಾಧ್ಯವಾಗದ ಕ್ಷೇತ್ರಗಳಿಗೂ ಹೊಸ ‘ಪ್ರಯೋಗ’ ವಿಸ್ತರಿಸಲು ಬಿಜೆಪಿ ನಾಯಕರು ಸಿದ್ಧತೆ ಆರಂಭಿಸಿದ್ದಾರೆ. ಪಾವಗಡ, ಮಧುಗಿರಿ, ಕೊರಟಗೆರೆ ಭಾಗಕ್ಕೂ ‘ಶಿರಾ ಮಾದರಿ’ ಕಾಲಿಡಲಿದೆ. ಶಿರಾದಲ್ಲಿ ಠೇವಣಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಪಕ್ಷವನ್ನು ಗೆಲ್ಲುವ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಪ್ರಯತ್ನಕ್ಕೆ ಜಯ ಸಿಕ್ಕಿದೆ. ಪಕ್ಷದ ಸಾಂಪ್ರದಾಯಿಕ ಮತಗಳ ಜತೆಗೆ ಬಿಜೆಪಿ ಕಡೆಗೆ ಬರಬಹುದಾದ ಜಾತಿ, ಸಮುದಾಯವನ್ನು ಕೇಂದ್ರೀಕರಿಸಿ ಸೆಳೆಯುವ ಪ್ರಯತ್ನ ಈ ಚುನಾವಣೆಯಲ್ಲಿ ಫಲನೀಡಿದೆ. ಅಂತಹ ಪ್ರಯತ್ನ ಮುಂದುವರಿಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಗಾಗಲೇ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳುವುದು. ನಂತರ ನಿಧಾನವಾಗಿ ಇತರ ಕ್ಷೇತ್ರಗಳಿಗೆ ಹೆಜ್ಜೆ ಹಾಕುವುದು. ಈವರೆಗೆ ಗೆಲ್ಲಲು ಸಾಧ್ಯವಾಗದ ಕ್ಷೇತ್ರಗಳನ್ನು ಪಟ್ಟಿಮಾಡಿಕೊಂಡು ಆದ್ಯತೆ ಮೇರೆಗೆ ಏನೆಲ್ಲ ಮಾಡಬಹುದು ಎಂಬ ಸಿದ್ಧತೆಗಳನ್ನು ಚುನಾವಣೆಗೆ ಮುನ್ನವೇ ಆರಂಭಿಸುವುದು. ಚುನಾವಣೆ ಹತ್ತಿರ ಬರುತ್ತಿದ್ದಂತೆ ‘ಪ್ರಯೋಗ’ದ ಬಾಣ ಬಿಡುವುದು ಪ್ರಮುಖ ಕಾರ್ಯತಂತ್ರ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

*****

ಜಯಚಂದ್ರ ರಾಜಕೀಯ ಭವಿಷ್ಯ

ಶಿರಾದಲ್ಲಿ ಸೋಲುವುದರೊಂದಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರ ರಾಜಕೀಯ ಭವಿಷ್ಯವೂ ಮಂಕಾಗಿದೆ. ಈ ಬಾರಿ ಗೆದಿದ್ದರೆ ಮುಂದಿನ ಚುನಾವಣೆ ವೇಳೆಗೆ ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವ ಮನಸ್ಸು ಮಾಡುತ್ತಿದ್ದರು. ಗೌರವಯುತವಾಗಿ ನಿವೃತ್ತಿ ಪಡೆಯುತ್ತಿದ್ದರು.

ಆದರೆ ಈಗ ಸೋತಿರುವುದು ಅವರ ರಾಜಕೀಯ ಭವಿಷ್ಯವನ್ನು ತೂಗುಯ್ಯಾಲೆಗೆ ತಳ್ಳಿದೆ. 70 ವರ್ಷ ದಾಟಿದ್ದು, ವಯಸ್ಸಾದವರಿಗೆ ಪದೇಪದೇ ಏಕೆ ಟಿಕೆಟ್ ಕೊಡಲಾಗುತ್ತಿದೆ ಎಂಬ ಆಕ್ಷೇಪದ ಮಾತುಗಳು ಪಕ್ಷದ ಆಂತರಿಕ ವಲಯದಿಂದಲೇ ಕೇಳಿ ಬರುತ್ತಿವೆ. ಟಿಕೆಟ್ ನೀಡಿದ್ದಕ್ಕೆ ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುವುದೆ? ಇಲ್ಲವೆ ರಾಜಕೀಯ ನಿವೃತ್ತಿ ಘೋಷಿಸುವರೆ? ಅಥವಾ ಇನ್ನೊಂದು ಕೊನೆಯ ಅವಕಾಶ ಕೊಡಿ. ಇದು ಸಾಧ್ಯವಾಗದಿದ್ದರೆ ಮಗನಿಗೆ ಟಿಕೆಟ್ ಕೊಡಿ ಎಂದು ವರಿಷ್ಠರ ಬಳಿ ಬೇಡಿಕೆ ಸಲ್ಲಿಸುವರೆ ಎಂಬ ಪ್ರಶ್ನೆಗಳು ಮೂಡಿವೆ.

ಕಳ್ಳಂಬೆಳ್ಳ, ಶಿರಾ ಕ್ಷೇತ್ರದಲ್ಲಿ ಒಟ್ಟು 10 ಬಾರಿ ಸ್ಪರ್ಧಿಸಿ 6 ಸಲ ಶಾಸಕರಾಗಿದ್ದರು. ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು. ಶಿರಾ ಕ್ಷೇತ್ರದ ಅಭಿವೃದ್ಧಿಗೂ ಸಾಕಷ್ಟು ಶ್ರಮಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು