ಶುಕ್ರವಾರ, ಡಿಸೆಂಬರ್ 4, 2020
24 °C

PV Web Exclusive | ಶಿರಾ ಸೋಲು: ಜೆಡಿಎಸ್ ಅಸ್ತಿತ್ವಕ್ಕೆ ಪೆಟ್ಟು

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತನ್ನ ತೆಕ್ಕೆಯಲ್ಲೇ ಇದ್ದ ಶಿರಾ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳನ್ನು ಕಳೆದುಕೊಂಡು ಜೆಡಿಎಸ್ ಒಂದು ರೀತಿಯಲ್ಲಿ ಬರಿಗೈಯಲ್ಲಿ ನಿಂತಿದೆ. ಜಿಲ್ಲೆಯ ಮಟ್ಟಿಗೆ ಪಕ್ಷ ದುಬಾರಿ ಬೆಲೆ ತೆರಬೇಕಾಗಿ ಬಂದಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿಯನ್ನು ತಂದುಕೊಂಡಿದೆ.

ಒಂದು ಕೈಯಲ್ಲಿ ಚಪ್ಪಾಳೆ ತಟ್ಟುವ ಅಸಹಾಯಕತೆಯನ್ನು ತನ್ನ ಕೈಯ್ಯಾರೆ ತಾನೇ ನಿರ್ಮಿಸಿಕೊಂಡಿದೆ. ತನ್ನ ಸ್ವಯಂಕೃತ ಅಪರಾಧಕ್ಕಾಗಿ ಪಕ್ಷದ ನೆಲೆ ಗಟ್ಟಿಯಾಗಿದ್ದ ಕ್ಷೇತ್ರಗಳನ್ನು ಕಳೆದುಕೊಳ್ಳುತ್ತಾ ಸಾಗಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 11 ಕ್ಷೇತ್ರಗಳನ್ನೂ ಗೆಲ್ಲುವ ಶಕ್ತಿ ಪಕ್ಷಕ್ಕೆ ಇತ್ತು. ಇಷ್ಟೊಂದು ಗಟ್ಟಿಯಾಗಿದ್ದ ಪಕ್ಷದ ಬೇರುಗಳು ಸಡಿಲವಾಗುತ್ತಿದ್ದು, ಒಂದೊಂದೇ ಬೇರುಗಳು ಮರೆಯಾಗುತ್ತಿರುವುದು ಮರದ ಬುಡವನ್ನೇ ಅಲುಗಾಡಿಸುತ್ತಿದೆ.

ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಪಾಠ ಕಲಿತಿದ್ದರೆ ಪಕ್ಷ ಇಷ್ಟೊಂದು ಬೆಲೆ ತೆರಬೇಕಾಗಿ ಬರುತ್ತಿರಲಿಲ್ಲ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ನಂತರ ಲೋಕಸಭೆಯಲ್ಲೂ ಎಚ್.ಡಿ.ದೇವೇಗೌಡ ಅವರು ಸೋಲು ಕಂಡರು. ಪಕ್ಷ ಗಟ್ಟಿ ನೆಲೆಯಲ್ಲಿ ಇದ್ದ ಸಂದರ್ಭದಲ್ಲೇ ಸೋಲು ಅನುಭವಿಸಿದ ನಂತರವಾದರೂ ಸರಿಪಡಿಸುವ ಪ್ರಯತ್ನ ನಡೆಯಲಿಲ್ಲ. ಸೋಲು ಪಾಠ ಕಲಿಸುತ್ತಲೇ ಇಲ್ಲ.

ಚುನಾವಣೆಯಿಂದ ಚುನಾವಣೆಗೆ, ದಿನಗಳು ಉರುಳಿದಂತೆ ಜಿಲ್ಲೆಯಲ್ಲಿ ಜೆಡಿಎಸ್ ಹಿಮ್ಮುಖವಾಗಿ ಚಲಿಸುತ್ತಿರುವುದು ಪಕ್ಷದ ನಾಯಕರು, ಕಾರ್ಯಕರ್ತರನ್ನು ಜರ್ಜಿರಿತರನ್ನಾಗಿ ಮಾಡಿದೆ. ಪ್ರತಿ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿ ಗಳಿಸುವ ಮತಗಳ ಶೇಖಡ ಪ್ರಮಾಣವೂ ಕಡಿಮೆಯಾಗುತ್ತಾ ಬಂದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೇನು? ಎಂಬ ಆತಂಕ ಕಾರ್ಯಕರ್ತರಲ್ಲಿ ಮನೆಮಾಡಿದೆ.

ಪಕ್ಷದ ಶಾಸಕರಿದ್ದ ಶಿರಾ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಸೋಲನ್ನು ಜೀರ್ಣಿಸಿಕೊಳ್ಳಲು ನಾಯಕರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ತಕ್ಷಣಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಎದುರಾಗಲಿದೆ. ಅದು ಮುಗಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಸಾಲು ಸಾಲು ಚುನಾವಣೆಗಳು ಬರಲಿವೆ. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದು ಉಸಿರುಬಿಟ್ಟುಕೊಳ್ಳುವುದರ ಒಳಗೆ ವಿಧಾನಸಭೆ ಚುನಾವಣೆಗೆ ಸಜ್ಜಾಗಬೇಕಿದೆ. ಪಕ್ಷದ ಸ್ಥಿತಿ ಸುಧಾರಿಸದಿದ್ದರೆ ಏನು ಮಾಡುವುದು ಎಂಬ ಪ್ರಶ್ನೆ ಜಿಲ್ಲೆಯ ನಾಯಕರಲ್ಲಿ ಎದುರಾಗಿದೆ.

ಜೆಡಿಎಸ್ ಗ್ರಾಮೀಣ ಭಾಗದಲ್ಲಿ ಬಲಿಷ್ಠವಾಗಿದೆ ಎಂಬ ಭಾವನೆ ಇದೆ. ಅದು ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯಂತಹ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಾಭೀತಾಗಬೇಕಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಂಡರೆ ವಿಧಾನಸಭೆ ಚುನಾವಣೆಗೆ ಸಜ್ಜಾಗಬಹುದು. ಆಗ ಮತ್ತಷ್ಟು ಹುರುಪಿನಿಂದ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಇಲ್ಲವಾದರೆ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲೆಯ ನಾಯಕರೊಬ್ಬರು ತಿಳಿಸಿದರು.

ಜಿಲ್ಲೆಯಲ್ಲಿ ನಾಯಕರು, ಶಾಸಕರು, ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು, ಪಕ್ಷ ಮುನ್ನಡೆಸಿಕೊಂಡು ಹೋಗುವ ನಾಯಕತ್ವದ ಕೊರತೆಯನ್ನೂ ಜೆಡಿಎಸ್ ಎದುರಿಸುತ್ತಿದೆ. ಯಾರೊಬ್ಬರೂ ಮುಂದಾಳತ್ವ ವಹಿಸಿಕೊಳ್ಳುತ್ತಿಲ್ಲ. ಅಂತಹ ನಾಯಕರನ್ನು ಗುರುತಿಸಿ ಜವಾಬ್ದಾರಿ ಕೊಡುವ ಕೆಲಸವನ್ನೂ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಮಾಡುತ್ತಿಲ್ಲ. ಪಕ್ಷ ಕಟ್ಟುವ, ಸಂಘಟನಾ ಶಕ್ತಿ ಇರುವ ನಾಯಕರಿಗೆ ಜವಾಬ್ದಾರಿ ನೀಡಿ ಮುನ್ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಸ್ಥಿತಿಯನ್ನು ನೋಡಬೇಕಾಗುತ್ತದೆ ಎಂದು ಹೆಸರು ಹೇಳಲು ಬಯಸದ ನಾಯಕರೊಬ್ಬರು ಸ್ಪಷ್ಟಪಡಿಸಿದರು.

2013ರಲ್ಲಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ 6ರಲ್ಲಿ ಜೆಡಿಎಸ್ ಶಾಸಕರು ಇದ್ದರು. 2018ರ ಚುನಾವಣೆ ವೇಳೆಗೆ ಈ ಸಂಖ್ಯೆ 4ಕ್ಕೆ ಇಳಿಯಿತು. ಶಿರಾ ಉಪಚುನಾವಣೆ ನಂತರ ಮೂರಕ್ಕೆ ಕುಸಿದಿದೆ. ತುಮಕೂರು ಗ್ರಾಮಾಂತರ, ಮಧುಗಿರಿ, ಗುಬ್ಬಿಯಲ್ಲಿ ಮಾತ್ರ ಪಕ್ಷದ ಶಾಸಕರು ಇದ್ದಾರೆ.

ಫಲ ನೀಡದ ಸಂಧಾನ

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಲಿಲ್ಲ ಎಂದು ಜೆಡಿಎಸ್ ವರಿಷ್ಠರ ಮೇಲೆ ಕೋಪಗೊಂಡಿದ್ದರು. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರಿಂದ ಅಂತರ ಕಾಯ್ದುಕೊಂಡಿದ್ದರು.

ಶಿರಾ ಚುನಾವಣೆ ಸಂದರ್ಭದಲ್ಲಿ ದೊಡ್ಡ ಗೌಡರು ಶ್ರೀನಿವಾಸ್ ಅವರನ್ನು ಕರೆಸಿ ಮಾತುಕತೆ ನಡೆಸಿ ಕೋಪ ಶಮನಮಾಡುವ ಪ್ರಯತ್ನ ನಡೆಸಿದ್ದರು. ಎಲ್ಲವನ್ನೂ ಮರೆತು ಚುನಾವಣೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ಮಾಡಿದ್ದರು. ಅದಕ್ಕೆ ಅವರು ಸಹ ತಲೆದೂಗಿದ್ದರು. ಗೌಡರ ಮೇಲಿನ ಗೌರವಕ್ಕೆ ಒಂದೆರಡು ದಿನ ಪ್ರಚಾರದ ಶಾಸ್ತ್ರ ಮಾಡಿದ್ದರು.

ಚುನಾವಣೆ ನಂತರ ಮತ್ತೆ ಅದೇ ಅಂತರ ಮುಂದುವರಿದಿದೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಒಂದು ನಿರ್ಧಾರ ಕೈಗೊಳ್ಳಬಹುದು. ಗೌಡರು ಮತ್ತೊಮ್ಮೆ ಮನವೊಲಿಸಿದರೆ ಉಳಿಯಬಹುದು. ಇಲ್ಲವಾದರೆ ಪಕ್ಷದಲ್ಲಿರುವುದು ಕಷ್ಟಕರ. ಸದ್ಯಕ್ಕೆ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದು, ಗುಬ್ಬಿಗೆ ಸೀಮಿತಗೊಳಿಸಲು ನಿರ್ಧರಿಸಿದ್ದಾರೆ ಎಂದು ಶ್ರೀನಿವಾಸ್ ಆಪ್ತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು