ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

​ಶಿರಾ: ಮದಲೂರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಜೆಡಿಎಸ್‌ನಿಂದ ಪಾದಯಾತ್ರೆ

Last Updated 16 ಆಗಸ್ಟ್ 2021, 9:08 IST
ಅಕ್ಷರ ಗಾತ್ರ

ಶಿರಾ: ಮದಲೂರು ಕೆರೆಗೆ ಹೇಮಾವತಿ ನಾಲೆಯಿಂದ ನೀರು ಹರಿಸುವಂತೆ ಒತ್ತಾಯಿಸಿ ಜೆಡಿಎಸ್ ನೇತೃತ್ವದಲ್ಲಿ ಸೋಮವಾರ ಪಾದಯಾತ್ರೆ ಆರಂಭವಾಯಿತು.

ಮದಲೂರು ಕೆರೆಯಿಂದ ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭಿಸಿದ್ದು, ಮದಲೂರು ಕೆರೆಯಿಂದ ಶಿರಾ ತಾಲ್ಲೂಕು ಕಚೇರಿಯವರೆಗೆ ಪಾದಯಾತ್ರೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸುವರು.

ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ ‘ಕುಡಿಯುವ ನೀರಿನ ವಿಚಾರದಲ್ಲಿ ಯಾರು ಸಹ ರಾಜಕಾರಣ ಮಾಡಬಾರದು. ಶಿರಾದ ಒಂದು ಹೋಬಳಿಯನ್ನು ಪ್ರತಿನಿಧಿಸುವ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ನಮ್ಮ ತಾಲ್ಲೂಕಿನ ಬಗ್ಗೆ ಮಲತಾಯಿ ಧೋರಣೆ ಹೊಂದಿದ್ದಾರೆ. ಮಾಧುಸ್ವಾಮಿ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ರಾಜಕಾರಣ ಬಿಟ್ಟು ಜನತೆಯ ನೋವಿಗೆ ಸ್ವಂದಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್ ಪಕ್ಷ ಮದಲೂರು ಕೆರೆ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿಲ್ಲ. ಶಿರಾ ಜೆಡಿಎಸ್ ಭದ್ರಕೋಟೆ. ಉಪ ಚುನಾವಣೆಯಲ್ಲಿ ನಮ್ಮ ಸೋಲಿಗೆ ಬೇರೆ ಕಾರಣಗಳಿವೆ. ತಾಲ್ಲೂಕಿನ ಹಿತಕ್ಕಾಗಿ ಹೋರಾಟ ನಡೆಸುತ್ತಿದ್ದು ನೀರಿನ ವಿಚಾರದಲ್ಲಿ ಯಾರೇ ಕರೆದರು ಸಹ ಅವರ ಜತೆಯಲ್ಲಿ ಹೋರಾಟಕ್ಕೆ ಹೋಗುವುದಾಗಿ ಹೇಳಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ‘ಮದಲೂರು ಕೆರೆಗೆ ನೀರು ಬರುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನೀರಿನ ರಾಜಕಾರಣ ಮಾಡುತ್ತಿವೆ. ಅವರಿಗೆ ನೀರಿನ ಬಗ್ಗೆ ಯಾವುದೇ ಬದ್ಧತೆ ಇಲ್ಲ. ಮುಂದಿನ ಚುನಾವಣೆಗಾಗಿ ಜನತೆಗೆ ಮಂಕುಬೂದಿ ಎರಚುವ ಕೆಲಸವನ್ನು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ. ಸಚಿವ ಮಾಧುಸ್ವಾಮಿ ನೀರು ಬಿಡುವುದಿಲ್ಲ ಎಂದರೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ನೀರು ತರುವುದಾಗಿ ಹೇಳುತ್ತಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತನ್ನು ಅವರದೇ ಪಕ್ಷ ತಪ್ಪುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ’ ಎಂದರು.

ಪಾದಯಾತ್ರೆಯಲ್ಲಿ ಜೆಡಿಎಸ್ ಮುಖಂಡರಾದ ಮುಡಿಮಡು ರಂಗಶಾಮಯ್ಯ, ಸಿ.ಆರ್.ಉಮೇಶ್, ಎಸ್.ರಾಮಕೃಷ್ಣ, ಟಿ.ಡಿ.ಮಲ್ಲೇಶ್, ಸತ್ಯಪ್ರಕಾಶ್, ಆರ್.ರಾಮು, ಲಿಂಗದಹಳ್ಳಿ ಚೇತನ್ ಕುಮಾರ್, ಅಂಜಿನಪ್ಪ, ಮಹದೇವ್, ಸೋಮಣ್ಣ, ಸುನೀಲ್, ಹುಂಜನಾಳು ರಾಜಣ್ಣ ಇದ್ದರು.

ಮದಲೂರು ಕೆರೆಗೆ ನೀರು ಹರಿಸಬೇಕು ಎಂಬುದು ಶಿರಾ ಉಪಚುನಾವಣೆ ಸಮಯದಲ್ಲಿ ಪ್ರಮುಖ ವಿಚಾರವಾಗಿತ್ತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇದೇ ವಿಚಾರ ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದವು. ಪ್ರಚಾರಕ್ಕೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆಗೆ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಒಂದೆರಡು ದಿನಗಳ ಕಾಲ ನೀರು ಹರಿಸಿ, ನಂತರ ನಿಲ್ಲಿಸಲಾಗಿತ್ತು.

ಈಗ ಹೇಮಾವತಿ ನಾಲೆಗೆ ನೀರು ಹರಿಯಲು ಬಿಟ್ಟಿದ್ದು, ಕೆರೆ ತುಂಬಿಸುವಂತೆ ತಾಲ್ಲೂಕಿನ ಜನರು ಒತ್ತಾಯಿಸುತ್ತಿದ್ದಾರೆ. ಮದಲೂರು ಕೆರೆಗೆ ನೀರು ಹಂಚಿಕೆಯಾಗಿಲ್ಲ. ಹಾಗಾಗಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT