ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ: ದಾರಿ ತೋರಿದ ಗುರುವಿನ ಧ್ಯಾನ

Last Updated 19 ಜನವರಿ 2020, 2:05 IST
ಅಕ್ಷರ ಗಾತ್ರ

ತುಮಕೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಸತ್ಕಾರ್ಯಗಳನ್ನು ಮತ್ತೊಮ್ಮೆ ಸ್ಮರಿಸುವ ಅವಕಾಶ ಮೊದಲ ವರ್ಷದ ಪುಣ್ಯ ಸ್ಮರಣೆಯ ಮೂಲಕ ಭಕ್ತರಿಗೆ ಹಾಗೂ ನಾಡಿನ ಜನರಿಗೆ ಒದಗಿ ಬಂದಿದೆ.

ಶಿವಕುಮಾರ ಸ್ವಾಮೀಜಿ ಅವರು ಭೌತಿಕವಾಗಿ ಭಕ್ತರ ನಡುವೆ ಇಲ್ಲ. ಆದರೆ ಅವರ ಕೆಲಸಗಳು, ಸಮಾಜದ ಪರವಾದ ಕಾಣ್ಕೆ ಮತ್ತು ಮಕ್ಕಳ ಶಿಕ್ಷಣಕ್ಕೆ ಅವರು ನೀಡಿದ ಕೊಡುಗೆಗಳು ಅವರನ್ನು ‘ನಮ್ಮ ನಡುವೆ ಇಲ್ಲ’ ಎನ್ನುವ ಕೊರಗನ್ನು ದೂರ ಮಾಡಿದೆ. ಮಠದ ಅಂಗಳವಷ್ಟೇ ಅಲ್ಲ ನಾಡಿನ ಜನರ ಮನೆ ಮನಗಳಲ್ಲೂ ಸ್ವಾಮೀಜಿ ಸ್ಮರಣೀಯರು.

ಸ್ವಾಮೀಜಿ ಶಿವೈಕ್ಯರಾಗಿ ಒಂದು ವರ್ಷಗಳು ಸಂದಿವೆ. ಸ್ಮರಣೋತ್ಸವಕ್ಕೆ 15ರಿಂದ 20 ದಿನಗಳ ಮುನ್ನವೇ ತಯಾರಿಗಳು ಭರದಿಂದ ನಡೆದಿದ್ದವು. ನಾನಾ ಕಡೆಗಳಿಂದ ಪಡಿ ಪದಾರ್ಥಗಳು ಮಠದ ಉಗ್ರಾಣ ಸೇರಿದ್ದವು. ಸ್ಮರಿಸಿರೆ ಗುರುವನು ಎನ್ನುವಂತೆ ಪುಣ್ಯ ಸ್ಮರಣೆಗೆ ರಾಜ್ಯದ ನಾನಾ ಭಾಗಗಳ ಭಕ್ತರು ಶನಿವಾರ ಮಧ್ಯಾಹ್ನದಿಂದಲೇ ಬಂದರು.

ಹೊಟ್ಟೆ ತುಂಬಾ ಅನ್ನ: ‘ತ್ರಿವಿಧ ದಾಸೋಹಿ’ ಶಿವಕುಮಾರ ಶ್ರೀ ಮಕ್ಕಳಿಗಷ್ಟೇ ಅನ್ನ ಉಣಬಡಿಸಲಿಲ್ಲ. ನಾಡಿನ ಅಸಂಖ್ಯಾತ ಮಂದಿಗೆ ಜಾತಿಯ ತಾರತಮ್ಯ ಇಲ್ಲದೆ ಮಠದಲ್ಲಿ ಅನ್ನವನ್ನಿಟ್ಟವರು.

ಸ್ವಾಮೀಜಿ ಅವರ ಮೊದಲ ಸ್ಮರಣೆಯಲ್ಲಿ ಈ ದಾಸೋಹದ ವಿಚಾರದಲ್ಲಿ ಕೊಂಚವೂ ಕುಂದು ಉಂಟಾಗಬಾರದು ಎನ್ನುವ ಕಳಕಳಿ ಕಾರ್ಯಕ್ರಮ ಸಂಘಟಕರು ಮತ್ತು ಮಠದ ಆಡಳಿತ ವರ್ಗಕ್ಕೆ ಇದೆ.

ಸ್ಮರಣೋತ್ಸವದ ಪ್ರಯುಕ್ತ ಡಿ.ಇಡಿ ಕಾಲೇಜಿನ ಪಕ್ಕದ ವಸ್ತು ಪ್ರದರ್ಶನದ ‘ಬಸವೇಶ್ವರ ಪ್ರಸಾದ ನಿಲಯ’, ವಸ್ತು ಪ್ರದರ್ಶನ 2ರ ರಂಗಮಂದಿರದ ಪಕ್ಕ ‘ಚನ್ನಬಸವೇಶ್ವರ ಪ್ರಸಾದ ನಿಲಯ’, ಸೌದೆ ಕೊಪ್ಪಲಿನಲ್ಲಿ ‘ಅಡವಿ ಸ್ವಾಮಿ ಪ್ರಸಾದ ನಿಲಯ’, ಪ್ರಾರ್ಥನಾ ಮಂದಿರ 1ರಲ್ಲಿ ‘ಅಲ್ಲಮಪ್ರಭುದೇವರ ಪ್ರಸಾದ ನಿಲಯ’, ಹೊಸ ಊಟದ ಮನೆಯಲ್ಲಿ ‘ಶಿವಕುಮಾರ ಸ್ವಾಮೀಜಿ ಪ್ರಸಾದ ನಿಲಯ’, ಹಳೇ ಊಟದ ಮನೆಯಲ್ಲಿ ‘ಸಿದ್ಧಲಿಂಗೇಶ್ವರ ಪ್ರಸಾದ ನಿಲಯ’, ಸಿದ್ಧಾರ್ಥ ಪ್ರವಾಸಿ ಮಂದಿರ ಹಾಗೂ ಕೆಂಪಹೊನ್ನಯ್ಯ ಅತಿಥಿಗೃಹದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಈ ಎಲ್ಲ ಕಡೆಗಳಲ್ಲಿ ಪ್ರಸಾದ ತಯಾರಕರು, ಪ್ರಸಾದ ವ್ಯವಸ್ಥೆಗೆ ಮುಖ್ಯಸ್ಥರನ್ನು ನಿಯೋಜಿಸಿ ಅವರ ಉಸ್ತುವಾರಿಯಲ್ಲಿ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಶನಿವಾರ ಮಧ್ಯಾಹ್ನವೇ ಈ ಸಿಬ್ಬಂದಿ ತಮ್ಮ ಪ್ರಸಾದ ನಿಲಯಕ್ಕೆ ಅಗತ್ಯವಿರುವ ದವಸಧಾನ್ಯ ಇತ್ಯಾದಿ ಪರಿಕರಗಳನ್ನು ಉಗ್ರಾಣದಿಂದ ಕೊಂಡೊಯ್ಯದ್ದರು. ಹೀಗೆ ವಿವಿಧ ಸೂಚನೆಗಳನ್ನು ಕಾರ್ಯಕ್ರಮಕ್ಕೂ ಮುನ್ನವೇ ನೀಡಲಾಗಿತ್ತು. ಅದರಂತೆಯೇ ಊಟ ಬಡಿಸಲು ಮತ್ತು ವ್ಯವಸ್ಥೆ ನಿರ್ವಹಣೆಗೆ ಸಿಬ್ಬಂದಿ ಸಜ್ಜಾಗಿದ್ದಾರೆ.

ಒಂದು ಲಕ್ಷ ಜನರು ಭಾಗಿ: ಸಂಘಟಕರ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗಿಯಾಗುವರು. ಉತ್ತರ ಕರ್ನಾಟಕ ಸೇರಿದಂತೆ ದೂರದ ಜಿಲ್ಲೆಗಳಿಂದ ಶನಿವಾರ ಮಧ್ಯಾಹ್ನವೇ ಬಂದ ಭಕ್ತರಿಗೆ ಎಸ್‌ಐಟಿ ಅತಿಥಿಗೃಹ, ಯಾತ್ರಿ ನಿವಾಸ ಹೀಗೆ ಬೇರೆ ಬೇರೆ ಕಡೆಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಯಿತು. ಶನಿವಾರ ರಾತ್ರಿ ಮಠದ ಆವರಣ ನಿದ್ದೆಯಿಲ್ಲದಂತೆ ಎಚ್ಚರವಾಗಿತ್ತು.

ಗದ್ದುಗೆಯೇ ಕೇಂದ್ರ: ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯೇ ಈಗ ಮಠದಲ್ಲಿನ ಪ್ರಮುಖ ಶ್ರದ್ಧಾ ಕೇಂದ್ರ. ಶನಿವಾರ ಮಧ್ಯಾಹ್ನದಿಂದಲೇ ಗದ್ದುಗೆಯ ಹೊರಭಾಗ ಮತ್ತು ಒಳಭಾಗದಲ್ಲಿ ಅಲಂಕಾರಗಳನ್ನು ಮಾಡಲಾಯಿತು. ನಾನಾ ಹೂವುಗಳಿಂದ ಗದ್ದುಗೆಯನ್ನು ಸಿಂಗರಿಸಲಾಗಿದೆ. ಶನಿವಾರದಿಂದಲೇ ಗದ್ದುಗೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿ ದರ್ಶನ ಪಡೆದರು. ಭಾನುವಾರ ಬೆಳಿಗ್ಗೆಯಿಂದಲೇ ಗದ್ದುಗೆಯ ಮುಂದೆ ಭಕ್ತರು ಸಾಲುಗಟ್ಟಿದ್ದರು. ಕಾರ್ಯಕ್ರಮಕ್ಕೆ ಬರುತ್ತಿದ್ದ ಗಣ್ಯರು ಸಹ ಮೊದಲ ಭೇಟಿ ನೀಡುತ್ತಿದ್ದು ಗದ್ದುಗೆಗೆಯೇ.

ಬೆಳ್ಳಿ ಪುತ್ಥಳಿಯ ವಿಶೇಷ: ಮಠದ ಭಕ್ತರಾದ ನವದೆಹಲಿಯ ಕೈಗಾರಿಕೋದ್ಯಮಿ ಮುಕೇಶ್ ಗರ್ಗ್ ಅವರು ಶಿವಕುಮಾರ ಸ್ವಾಮೀಜಿ ಅವರ ಮೂರು ಅಡಿ ಎತ್ತರದ 50 ಕೆ.ಜಿ ತೂಕದ ಬೆಳ್ಳಿ ಪುತ್ಥಳಿಯನ್ನು ಸ್ಮರಣೋತ್ಸವದಲ್ಲಿ ಮಠಕ್ಕೆ ಅರ್ಪಿಸುತ್ತಿದ್ದಾರೆ. ಇದು ಸ್ಮರಣೋತ್ಸವದ ಪ್ರಮುಖ ವಿಶೇಷ. ಮುಂಬೈನಲ್ಲಿ ಈ ಪ್ರತಿಮೆ ಸಿದ್ಧವಾಗಿದೆ. ಸ್ಮರಣೋತ್ಸವದ ದಿನ ಮಠಕ್ಕೆ ಬರುವ ಈ ಪುತ್ಥಳಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.

ಇಂದು ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ

ಸಿದ್ಧಗಂಗಾ ಮಠದಲ್ಲಿ ಭಾನುವಾರ(ಜ.19) ಡಾ.ಶಿವಕುಮಾರ ಸ್ವಾಮೀಜಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ ನಡೆಯಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರಂಭ ಉದ್ಘಾಟಿಸಲಿದ್ದು, ಸಿದ್ಧಲಿಂಗ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರ ಸ್ವಾಮಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಕೈಗಾರಿಕೋದ್ಯಮಿ ದೆಹಲಿಯ ಮುಖೇಶ್ ಗರ್ಗ್ ಹಾಗೂ ನವದೆಹಲಿಯ ಉಗ್ರನಿಗ್ರಹ ದಳದ ಅಧ್ಯಕ್ಷ ಮಣಿಂದರ್‌ಜೀತ್ ಸಿಂಗ್ ಬಿಟ್ಟ ಅವರನ್ನು ಸನ್ಮಾನಿಸಲಾಗುವುದು. ಬೆಂಗಳೂರಿನ ಶಿವಕುಮಾರ ಸ್ವಾಮೀಜಿ ಅನ್ನದಾನ ಟ್ರಸ್ಟ್‌ನಿಂದ ಕಾರ್ಯಸೂಚಿ ಕೈಪಿಡಿ ಹಾಗೂ ವೆಬ್ ಸೈಟ್ ಬಿಡುಗಡೆಯಾಗಲಿದೆ. ಸಿ.ಎನ್.ಸದಾಶಿವಯ್ಯ ವಿರಚಿತ ‘ಗುರು ಕರುಣೆ ಮತ್ತು ನಿಷ್ಠೆ’ ಬ್ಯಾಲಕೆರೆ ಶಿವಣ್ಣ ರಚಿತ ‘ಯೋಗಾಂಗ ತ್ರಿವಿಧಿ’, ಮುದ್ದೇನಹಳ್ಳಿ ನಂಜಯ್ಯ ಅವರ ‘ಶಿವಕುಮಾರ ಚರಿತ’ ಪುಸ್ತಕ ಬಿಡುಗಡೆ ಆಗಲಿವೆ.

ಅಂದು ಬೆಳಿಗ್ಗೆ 9.30ಕ್ಕೆ ಸುಗಮ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 3ಕ್ಕೆ ಜಾನಪದ ಜಾತ್ರೆ ಜರುಗಲಿದೆ. ಮಠದ ಆವರಣದ 7 ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ‌. ಒಂದು ಕಡೆ 10 ಸಾವಿರ ಜನರು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 11.30 ಊಟ ಆರಂಭವಾಗಲಿದ್ದು, ರಾತ್ರಿ 11.30ರವರೆಗೂ ಊಟ ಇರಲಿದೆ. ಬೂಂದಿ, ಕಿರು, ಅನ್ನ ಸಾಂಬಾರು ಮಜ್ಜಿಗೆ ಭಕ್ತಾದಿಗಳಿಗೆ ನೀಡಲಾಗುವುದು.

ಏನಿರಲಿದೆ ಊಟ

ಬೆಳಿಗ್ಗೆ 7ರಿಂದ ಉಪ್ಪಿಟ್ಟು ಮತ್ತು ಕೇಸರಿ ಬಾತ್ ನೀಡಲಾಗುತ್ತದೆ. ಮಧ್ಯಾಹ್ನ 11.30ರಿಂದ ರಾತ್ರಿ 11.30ರವರೆಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಬೂಂದಿ, ತುಪ್ಪ, ಚಿತ್ರಾನ್ನ, ಅನ್ನ ಸಾಂಬಾರು, ಅನ್ನ ಮಜ್ಜಿಗೆ, ಪಾಯಸ, ಉಪ್ಪಿನಕಾಯಿ, ಉಪ್ಪು ಊಟದ ಮೆನುವಿನಲ್ಲಿ ಇವೆ.

ಮಕ್ಕಳು ಪಾಲ್ಗೊಳ್ಳುವ ಉದ್ದೇಶ

ಶಿವಕುಮಾರ ಸ್ವಾಮೀಜಿ ಜನವರಿ 21ರಂದು ಶಿವೈಕ್ಯರಾದರು. ಕಾರ್ಯಕ್ರಮವನ್ನು ಜನವರಿ 19ರಂದು ನಡೆಸಲಾಗುತ್ತಿದೆ. ಅದಕ್ಕೆ ಕಾರಣ ಸ್ವಾಮೀಜಿ ಮತ್ತು ಮಕ್ಕಳ ನಡುವಿನ ವಾತ್ಸಲ್ಯದ ಸಂಬಂಧ.

ಭಾನುವಾರ ಮಕ್ಕಳಿಗೆ ರಜೆ. ಅವರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು. ಅದಕ್ಕಿಂತಲೂ ಪ್ರಮುಖವಾಗಿ 21ರ ಮಂಗಳವಾರ ಕಾರ್ಯಕ್ರಮ ನಡೆದರೆ ಮಕ್ಕಳಿಗೆ ಶಾಲೆ ಇರುತ್ತದೆ. ಅವರು ಪಾಲ್ಗೊಳ್ಳಲು ಕಷ್ಟಸಾಧ್ಯ. ಸ್ವಾಮೀಜಿ ಮತ್ತು ಮಕ್ಕಳ ನಡುವಿನ ಪ್ರೇಮ, ವಾತ್ಸಲ್ಯ ಅಗಣಿತವಾದುದು. ಈ ದೃಷ್ಟಿಯಿಂದ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳಲಿ ಎನ್ನುವ ಉದ್ದೇಶದಿಂದ ಭಾನುವಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನುವುದು ಮಠದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT