ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ | ಆರೋಗ್ಯ ಸಿಬ್ಬಂದಿ ಕೊರತೆ: ಕುಸಿದ ಗುಣಮಟ್ಟ

ಜಯಸಿಂಹ ಕೆ.ಆರ್.
Published 4 ಮಾರ್ಚ್ 2024, 6:57 IST
Last Updated 4 ಮಾರ್ಚ್ 2024, 6:57 IST
ಅಕ್ಷರ ಗಾತ್ರ

ಪಾವಗಡ: ವೈದ್ಯರು, ಸಿಬ್ಬಂದಿ ಕೊರತೆಯಿಂದಾಗಿ ತಾಲ್ಲೂಕಿನ ಬಹುತೇಕ ಆರೋಗ್ಯ ಕೇಂದ್ರಗಳು ಇದ್ದೂ ಪ್ರಯೋಜನವಿಲ್ಲದಂತಾಗಿದೆ.  ಆರೋಗ್ಯ ಕೇಂದ್ರಗಳು ಕಟ್ಟಡಗಳಿಗೆ ಸೀಮಿತವಾಗಿವೆ.

ಗ್ರಾಮೀಣ ಭಾಗದ ಜನರಿಗೆ ತುರ್ತು ಆರೋಗ್ಯ ಸೇವೆ, ಪ್ರಥಮ ಚಿಕಿತ್ಸೆ, ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ಸಿಗದೆ ಪಟ್ಟಣದ ಆಸ್ಪತ್ರೆಗಳಿಗೆ ಬರಬೇಕಾದ ಅನಿವಾರ್ಯವಿದೆ.

ತಾಲ್ಲೂಕಿನಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ತಾಲ್ಲೂಕು ಆಸ್ಪತ್ರೆ ಸೇರಿದಂತೆ 13 ಆರೋಗ್ಯ ಕೇಂದ್ರಗಳಿವೆ.

ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರಗಳಿವೆ. ಆದರೆ ತಾಲ್ಲೂಕಿನಲ್ಲಿ ಆರೋಗ್ಯ ಕೇಂದ್ರಗಳ ಸಂಖ್ಯೆಯೂ ಕಡಿಮೆ ಇದೆ.

ತಾಲ್ಲೂಕಿನ ನಾಗಲಮಡಿಕೆ, ಪಳವಳ್ಳಿ, ಬಿ.ಹೊಸಹಳ್ಳಿ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇನ್ನೂ ಆರಂಭವಾಗಿಲ್ಲ. ನಾಗಲಮಡಿಕೆ, ಪಳವಳ್ಳಿಯಲ್ಲಿ ಕೇಂದ್ರ ಪ್ರಾರಂಭಕ್ಕೆ ನಿವೇಶನ, ಅನುದಾನ ಸಿದ್ಧವಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಲಾರ್ ಪಾರ್ಕ್‌ ಕೇಂದ್ರವಾಗಿರುವ ತಿರುಮಣಿಯಲ್ಲಿ ಒಬ್ಬರೂ ತಜ್ಞ ವೈದ್ಯರಿಲ್ಲ. ಸುಮಾರು 27 ಕಿ.ಮೀ. ದೂರ ಕ್ರಮಿಸಿ ಚಿಕಿತ್ಸೆ ಪಡೆಯಬೇಕಿದೆ. ತುರ್ತು ಚಿಕಿತ್ಸಾ ವೈದ್ಯರು, ಸ್ತ್ರೀರೋಗ ತಜ್ಞ, ಶುಶ್ರೂಷಕರು, ‘ಡಿ’ ಗ್ರೂಪ್ ನೌಕರರ ಹುದ್ದೆ ಖಾಲಿ ಇವೆ.

ವೆಂಕಟಾಪುರ, ಮಂಗಳವಾಡ, ಪಳವಳ್ಳಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಆಸ್ಪತ್ರೆ ಕಟ್ಟಡ, ಸಲಕರಣೆ ಇದ್ದರೂ ಈ ಭಾಗದ ಜನರಿಗೆ ವೈದ್ಯರಿಲ್ಲದ ಕಾರಣ ಆರೋಗ್ಯ ಸೇವೆ ಸಿಗುತ್ತಿಲ್ಲ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರ ಹೆಚ್ಚಿನ ಜನಸಂಖ್ಯೆ ಹೊಂದಿರುವ ವೈ.ಎನ್. ಹೊಸಕೋಟೆ, ಲಿಂಗದಹಳ್ಳಿ ಆರೋಗ್ಯ ಕೇಂದ್ರಗಳಲ್ಲಿಯೂ ವೈದ್ಯರು, ಸಿಬ್ಬಂದಿ ಕೊರತೆಯಿಂದ ಜನತೆ ಬೇಸತ್ತಿದ್ದಾರೆ. ವೈ.ಎನ್. ಹೊಸಕೋಟೆಯಲ್ಲಿ ಶಸ್ತ್ರ ಚಿಕಿತ್ಸಾ ಕೊಠಡಿ ಇದ್ದರೂ ಉಪಕರಣಗಳ ಕೊರತೆ ಇದೆ. ನೂತನ ಕಟ್ಟಡ ಗ್ರಾಮದಿಂದ ದೂರ ಇದೆ. ಗ್ರಾಮದಲ್ಲಿರುವ ಹಳೆಯ ಕಟ್ಟಡದಲ್ಲಿ ಪ್ರಥಮ ಚಿಕಿತ್ಸೆ ಸೇರಿದಂತೆ ತುರ್ತು ಸ್ಥಿತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ನಿಯೋಜಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.

ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಕೊರತೆ ಸರ್ವೆ ಸಾಮಾನ್ಯ. ರಕ್ತ ಪರೀಕ್ಷೆ, ಎಕ್ಸ್‌ರೇ, ಸ್ಕ್ಯಾನಿಂಗ್ ಸೇರಿದಂತೆ ಪ್ರಮುಖ ಆರೋಗ್ಯ ಸಮಸ್ಯೆಗಳಿದ್ದಲ್ಲಿ 30ರಿಂದ 40 ಕಿ.ಮೀ. ಕ್ರಮಿಸಿ ಪಟ್ಟಣದ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯವಿದೆ.

11 ವಾಹನ ಚಾಲಕರ ಹುದ್ದೆಗಳಲ್ಲಿ 9 ಹುದ್ದೆಗಳು ಖಾಲಿ ಇವೆ. 3 ಮಂದಿ ಕ್ಷ ಕಿರಣ ತಜ್ಞರ ಹುದ್ದೆಗಳಿವೆ. ಆದರೆ ಒಬ್ಬರು ಮಾತ್ರ ಇದ್ದಾರೆ. ತಿರುಮಣಿ, ವೈ.ಎನ್ ಹೊಸಕೋಟೆ ಆಸ್ಪತ್ರೆಗೆ ತುರ್ತಾಗಿ ಕ್ಷ ಕಿರಣ ತಜ್ಞರ ಅವಶ್ಯಕತೆ ಇದೆ.

ಫ್ಲೋರೈಡ್, ಬರದಿಂದ ತತ್ತರಿಸುವ ತಾಲ್ಲೂಕಿಗೆ ವೈದ್ಯರು, ಸಿಬ್ಬಂದಿ ಬರವೂ ಕಾಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸವಲತ್ತು ಸಿಗದೆ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲಾಗದೆ ಗ್ರಾಮೀಣ ಭಾಗದ ಜನರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

73 ‘ಡಿ’ ಗ್ರೂಪ್ ನೌಕರರ ಹುದ್ದೆ ಖಾಲಿ

ತಾಲ್ಲೂಕಿನಾದ್ಯಂತ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಅತಿ ಹೆಚ್ಚು ‘ಡಿ’ ಗ್ರೂಪ್ ನೌಕರರ ಹುದ್ದೆ ಖಾಲಿ ಇವೆ. ಸ್ವಚ್ಛತೆ ಸೇರಿದಂತೆ ರೋಗಿಗಳ ಸೇವೆಗೆ ಮಹತ್ತರ ಪಾತ್ರ ನಿರ್ವಹಿಸುವ ‘ಡಿ’ ಗ್ರೂಪ್ ನೌಕರರೇ ಇಲ್ಲದ ಕಾರಣ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. 80 ‘ಡಿ’ ಗ್ರೂಪ್ ನೌಕರರ ಹುದ್ದೆಗಳಲ್ಲಿ ಕೇವಲ ಏಳು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 73 ಹುದ್ದೆಗಳು ಖಾಲಿ ಇವೆ. ವ್ಯಾಕ್ಸಿನ್ ಲಸಿಕಾ ಅಭಿಯಾನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಕಿರಿಯ ಮಹಿಳಾ ಆರೋಗ್ಯ ಸಹಾಯಕರು (ಎಎನ್‌ಎಂ) ತಾಲ್ಲೂಕಿನಾದ್ಯಂತ ಕೇವಲ 9 ಮಂದಿ ಇದ್ದಾರೆ. 49 ಎಎನ್‌ಎಂ ಹುದ್ದೆ ಖಾಲಿ ಇವೆ.

ತಜ್ಞರಿಲ್ಲದೆ ಪರದಾಟ

ಏಳು ಕಿರಿಯ ಫಾರ್ಮಾಸಿಸ್ಟ್ ಆರು ಕಿರಿಯ ಪ್ರಯೋಗ ಶಾಲಾ ತಜ್ಞರು 9 ಶುಶ್ರೂಷಕರು ಮೂರು ಆರೋಗ್ಯ ಶಿಕ್ಷಣಾಧಿಕಾರಿ ಮೂರು ತುರ್ತು ಚಿಕಿತ್ಸಾ ವೈದ್ಯರು ನಾಲ್ಕು ಮಕ್ಕಳ ತಜ್ಞ ಮೂರು ಸ್ತ್ರೀ ರೋಗ ನೇತ್ರ ಚರ್ಮ ಅರವಳಿಕೆ ತಜ್ಞ ಕೀಲು ಮತ್ತು ಮೂಳೆ ಜನರಲ್ ಸರ್ಜನ್ ಜನರಲ್ ಮೆಡಿಸಿನ್ ಇಎನ್‌ಟಿ ತಜ್ಞರ ಹುದ್ದೆಗಳು ತಾಲ್ಲೂಕಿನಾದ್ಯಂತ ಖಾಲಿ ಇವೆ.

ಪಾವಗಡ ತಾಲ್ಲೂಕು ಪಳವಳ್ಳಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ
ಪಾವಗಡ ತಾಲ್ಲೂಕು ಪಳವಳ್ಳಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT