ಶುಕ್ರವಾರ, ಡಿಸೆಂಬರ್ 3, 2021
26 °C

ಎಲ್ಲೆಡೆ ವಾಲ್ಮೀಕಿ ಜಯಂತಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರಾಮಾಯಣದಂತಹ ಮಹಾಕಾವ್ಯವನ್ನು ಜಗತ್ತಿಗೆ ನೀಡಿದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ನಗರದಲ್ಲಿ ಬುಧವಾರ ಆಚರಿಸಲಾಯಿತು.

ವಾಲ್ಮೀಕಿ ಸಮುದಾಯದ ಮುಖಂಡರು ವಿವಿಧೆಡೆ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಸಿದರು. ಪ್ರಮುಖ ವೃತ್ತಗಳಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಗರದ ಬಿಜಿಎಸ್ ವೃತ್ತದಿಂದ ಜಿಲ್ಲಾ ಆಡಳಿತ ಕಾರ್ಯಕ್ರಮ ಹಮ್ಮಿಕೊಂಡಿದ್ದ ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ
ನಡೆಯಿತು.

ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಸಂಸದ ಜಿ.ಎಸ್.ಬಸವರಾಜು ಪುಷ್ಪ ನಮನ ಸಲ್ಲಿಸುವ ಮೂಲಕ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ ವಾಲ್ಮೀಕಿ ಇಡೀ ಜಗತ್ತಿಗೆ ಆದರ್ಶ ಕವಿಯಾಗಿದ್ದಾರೆ. ಕವಿಗಳಲ್ಲಿ ಆದಿಕವಿಯಾಗಿ ನಿಲ್ಲುತ್ತಾರೆ. ರಾಮಾಯಣ ವಿಶ್ವದಲ್ಲೇ ಪುರಾತನವಾಗಿದ್ದು, ಜ್ಞಾನೋದಯಕ್ಕೆ ದಾರಿದೀಪವಾಗಿದೆ ಎಂದು ಸಂಸದರು ಸ್ಮರಿಸಿದರು.

ಮಹಾಗ್ರಂಥಗಳಾದ ‘ರಾಮಾಯಣ’, ‘ಮಹಾಭಾರತ’ವನ್ನು ಬರೆದವರು ಶೂದ್ರರೇ ಆಗಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ. ವಾಲ್ಮೀಕಿ ಜಯಂತಿಯನ್ನು ರಾಷ್ಟ್ರ ವ್ಯಾಪ್ತಿಯಾಗಿ ಆಚರಣೆ ಮಾಡುತ್ತಿದ್ದು, ಇಂದಿನ ಪೀಳಿಗೆ ಅವರನ್ನು ಆದರ್ಶ ಗುರುವಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ಸಲಹೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ‘ವಾಲ್ಮೀಕಿ ಬರೆದ ರಾಮಾಯಣವು ಗಿರಿ-ಶಿಖರ, ಸೂರ್ಯ- ಚಂದ್ರ- ಭೂಮಿ ಇರುವಷ್ಟು ದಿನ ಇರುತ್ತದೆ. ರಾಮಾಯಣ ಕೃತಿ ಸಾಹಿತ್ಯಾತ್ಮಕವಾಗಿದ್ದು, ಎಲ್ಲಾ ರೀತಿಯಲ್ಲೂ ಪರಿಪೂರ್ಣವಾಗಿದೆ’ ಎಂದರು.

ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯದ ನೈಜ ಘಟನೆಗಳು ನಮ್ಮ ಕಣ್ಣು ಮುಂದೆ ನಡೆಯುತ್ತಿವೆ ಎನ್ನುವ ರೀತಿಯಲ್ಲೇ ಮಹಾಕಾವ್ಯವನ್ನು ವಾಲ್ಮೀಕಿ ವರ್ಣನೆ ಮಾಡಿದ್ದಾರೆ. ಸಾಹಿತ್ಯವಷ್ಟೇ ಅಲ್ಲದೆ ಪ್ರಚಲಿತದಲ್ಲಿರುವ ಎಲ್ಲಾ ಘಟನೆಗಳನ್ನೂ ಒಳಗೊಂಡಂತೆ ಭಾಸವಾಗುತ್ತದೆ. ಜಗತ್ತಿನಲ್ಲಿ ಯಾವ ಕವಿಯೂ ಹೇಳದ್ದನ್ನು ವಾಲ್ಮೀಕಿ ತಮ್ಮ ಕೃತಿಯಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದು ನೆನಪು ಮಾಡಿಕೊಂಡರು.

ಕರ್ನಾಟಕ ವಾಲ್ಮೀಕಿ ಸೇನೆ ಅಧ್ಯಕ್ಷ ಪ್ರತಾಪ್ ಮದಕರಿ, ‘ಜಗತ್ತಿನಲ್ಲಿ ಏನಿಲ್ಲ ಇದೆಯೋ ಅದೆಲ್ಲವೂ ರಾಮಾಯಣದಲ್ಲಿದೆ. ಜಗತ್ತಿನಲ್ಲಿ ಏನಿಲ್ಲವೋ ಅದು ರಾಮಾಯಣದಲ್ಲೂ ಇಲ್ಲ. ಇಂತಹ ಕೃತಿಯನ್ನು ಕೊಡುಗೆಯಾಗಿ ಕೊಟ್ಟ ವಾಲ್ಮೀಕಿ ಅವರಂತಹ ಕವಿ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ’ ಎಂದು ಹೇಳಿದರು.

ನಗರದಲ್ಲಿ ನಿರ್ಮಾಣವಾಗಿರುವ ವಾಲ್ಮೀಕಿ ಭವನವನ್ನು ಶೀಘ್ರ ಉದ್ಘಾಟನೆ ಮಾಡಬೇಕು. ಭವನದ ಪಕ್ಕದಲ್ಲಿ ಇರುವ ಖಾಲಿ ಜಾಗವನ್ನು ಭವನಕ್ಕೆ ಮಂಜೂರು ಮಾಡಿಕೊಡಬೇಕು. ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ನಾಗಭೂಷನ್ ಬಗ್ಗನಡು, ‘ಮಹರ್ಷಿ ವಾಲ್ಮೀಕಿ ಮತ್ತು ರಾಮಾಯಣ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಉದೇಶ್, ತಹಶೀಲ್ದಾರ್ ಮೋಹನ್ ಕುಮಾರ್, ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆ ಅಧಿಕಾರಿ ತ್ಯಾಗರಾಜ್, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.