ಗುರುವಾರ , ಮಾರ್ಚ್ 23, 2023
30 °C

ತುಮಕೂರು: ಇಡೀ ದಿನ ಸೋನೆ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಈವರೆಗೆ ತನ್ನ ಪ್ರತಾಪ ತೋರಿದ್ದ ನೇಸರ ಮಂಗಳವಾರ ಮುಖ ತೋರಿಸಲಿಲ್ಲ. ಕಳೆದ ಕೆಲ ದಿನಗಳಿಂದ ಏರಿಕೆ ಕಂಡಿದ್ದ ತಾಪಮಾನ ಇದ್ದಕ್ಕಿಂದ್ದಂತೆ ಕುಸಿತ ಕಂಡಿತು. ಇಡೀ ದಿನ ಸೋನೆ ಮಳೆ ಸುರಿಯಿತು. ಒಮ್ಮೆಲೆ ಎದುರಾದ ಚಳಿ, ಮಳೆಗೆ ಜನರು ಬೆಚ್ಚನೆಯ ಉಡುಪಿಗೆ ಮೊರೆ ಹೋದರು.

ಆಷಾಢ ಮಾಸ ಕಾಲಿಟ್ಟು, ಅಮಾವಾಸ್ಯೆ ಮುಗಿಯುತ್ತಿದ್ದಂತೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತದೆ. ಈ ಸಮಯದಲ್ಲಿ ಗಾಳಿ ಜೋರಾಗಿ ಬೀಸಿ, ಸೋನೆ ಮಳೆ ಬೀಳುವುದು ಸಾಮಾನ್ಯ. ಆದರೆ ಕಳೆದ ಕೆಲ ವರ್ಷಗಳಲ್ಲಿ ಇಂತಹ ಅನುಭವ ಆಗಿರಲಿಲ್ಲ. ಆಷಾಢ ಮಾಸದಲ್ಲೂ ಸೂರ್ಯನ ಕಿರಣದ ಮೊನಚು ತಗ್ಗುತ್ತಿರಲಿಲ್ಲ. ಈ ಸಲ ಮಾತ್ರ ಅಂತಹ ವಾತಾವರಣ ಕಂಡುಬರುತ್ತಿಲ್ಲ.

ಮುಂಗಾರು ಆರಂಭದಲ್ಲಿ ಅಲ್ಲಲ್ಲಿ ಸ್ವಲ್ಪ ಮಳೆ ಬಿತ್ತು. ನಂತರ ಮತ್ತೆ ತಾಪಮಾನ ಹೆಚ್ಚಳವಾಗಿ ಜೂನ್ ಕೊನೆಯ ವೇಳೆಗೆ ವಾತಾವರಣದಲ್ಲಿ ತೇವಾಂಶದ ಪ್ರಮಾಣ ಕಡಿಮೆಯಾಗಿ ಬಿಸಿಲು ತೀವ್ರತೆ ಪಡೆದುಕೊಂಡಿತ್ತು. ಆಷಾಢ ಕಾಲಿಡುತ್ತಿದ್ದಂತೆ ಒಮ್ಮೆಲೆ ತಾಪಮಾನ ಕುಸಿದಿದ್ದು, ಮಂಗಳವಾರ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿದಿತ್ತು.

ಸೋನೆ ಮಳೆ: ಇಡೀ ದಿನ ಸೋನೆ ಮಳೆ ಬಿತ್ತು. ಬಿಟ್ಟುಬಿಟ್ಟು ಸುರಿಯುತ್ತಲೇ ಇತ್ತು. ಬೆಳಿಗ್ಗೆ 8 ಗಂಟೆ ವೇಳೆಗೆ ಸ್ವಲ್ಪ ಮಟ್ಟಿಗೆ ಜೋರಾಗಿಯೇ ಆರಂಭವಾಯಿತು. ಕಚೇರಿ ಕೆಲಸಕ್ಕೆ ಹೋಗುವವರು, ಇತರೆ ಕೆಲಸಗಳಲ್ಲಿ ತೊಡಗಿಸಿಕೊಂಡವರು ಮಳೆಯಲ್ಲೇ ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು. 10 ಗಂಟೆಯ ನಂತರ ಬಿಡುವು ಕೊಟ್ಟಿತ್ತು. ನಂತರ ಆಗಾಗ ಬಿಟ್ಟು
ಬಿಟ್ಟು ಬೀಳುತ್ತಲೇ ಇತ್ತು. ಮಧ್ಯಾಹ್ನದ ವೇಳೆಗೆ ಕಡಿಮೆಯಾದಂತೆ ಕಂಡುಬಂದರೂ ಸಂಜೆ ವೇಳೆಗೆ ಮತ್ತೆ ಬೀಳಲಾರಂಭಿಸಿತು.

ಒಕ್ಕಣೆಗೆ ಅಡ್ಡಿ: ಈ ಬಾರಿ ಮುಂಗಾರು ಮಳೆ ಕೆಲವು ಕಡೆಗಳಲ್ಲಿ ಚೆನ್ನಾಗಿ ಬಿದ್ದಿದ್ದು, ಗ್ರಾಮೀಣ ಭಾಗದಲ್ಲಿ ಹೆಸರು, ಅಲಸಂದೆ, ಎಳ್ಳು ಬಿತ್ತನೆ ಮಾಡಿದ್ದರು. ಈಗ ಕೊಯ್ಲುಮಾಡಿ ಕಾಳು ಬೇರ್ಪಡಿಸಬೇಕಿದೆ. ಕೆಲವು ಕಡೆಗಳಲ್ಲಿ ಕಟಾವು ಮಾಡಿದ್ದು, ಮಳೆಗೆ ಒದ್ದೆಯಾಗಿವೆ. ಯಾವುದೇ ಮುನ್ಸೂಚನೆ ಇಲ್ಲದೆ ಒಮ್ಮೆಲೆ ಮಳೆಯಾಗಿರುವುದು ಕೊಯ್ಲು ಮಾಡುವವರಿಗೆ ಅಡ್ಡಿಯಾಗಿದ್ದರೆ, ಬಿತ್ತನೆಗೆ ಸಹಕಾರಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು