ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಕ್ಕೆ ತಿರುವು ನೀಡಿದ ಸಿದ್ಧಗಂಗಾ ಮಠ: ಹಳೆಯ ವಿದ್ಯಾರ್ಥಿಗಳ ಅಭಿಮತ

ಪ್ರಶಸ್ತಿ ಪ್ರದಾನ ಸಮಾರಂಭ
Last Updated 22 ಡಿಸೆಂಬರ್ 2019, 13:50 IST
ಅಕ್ಷರ ಗಾತ್ರ

ತುಮಕೂರು: ಸಿದ್ಧಗಂಗಾ ಮಠದ ಆವರಣದಲ್ಲಿ ಭಾನುವಾರ ‘ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ’ದಿಂದ ಆಯೋಜಿಸಿದ್ದ ಸರ್ವ ಸದಸ್ಯರ 65ನೇ ಮಹಾಧಿವೇಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳು ತಾವು ಓದಿದ, ಆಟವಾಡಿದ ಸ್ಥಳ, ದಿನಗಳನ್ನು ನೆನಪಿಸಿಕೊಂಡರು.

ಕೆಲವರು ಶಿವಕುಮಾರ ಸ್ವಾಮೀಜಿ ಅವರನ್ನು ನೆನೆದು ಭಾವುಕರಾದರು. ನಮ್ಮ ಜೀವನಕ್ಕೆ ತಿರುವು ನೀಡಿದ ನೆಲೆ ಸಿದ್ಧಗಂಗಾ ಮಠ ಎಂದು ಸ್ಮರಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಎಲ್ಲರನ್ನೂ ಸಮಾನವಾಗಿ ಕಾಣುವವರು ನಿಜವಾದ ಜ್ಞಾನಿಗಳು’ ಎಂದರು.

ಪ್ರತಿವರ್ಷ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮದಲ್ಲಿ ಹಿರಿಯ ಸ್ವಾಮೀಜಿ ಭಾಗವಹಿಸಿ ಸಂತೋಷ ಪಡುತ್ತಿದ್ದರು. ಹಳೆಯ ವಿದ್ಯಾರ್ಥಿಗಳನ್ನು ನೋಡಿ ಮಠದ ಸೇವೆಯ ಫಲ ಎಂದು ನೆನಪಿಸಿಕೊಳ್ಳುತ್ತಿದ್ದರು. ಕಷ್ಟಕಾಲದಲ್ಲಿ ವಿದ್ಯಾರ್ಥಿಗಳನ್ನು ಹೇಗೆ ಪೊರೆದೆ ಎಂಬುದನ್ನು ಶ್ರೀಗಳು ನೆನಪಿಸಿಕೊಳ್ಳುತ್ತಿದ್ದರು. ಅವರ ಸೇವೆಯ ಫಲವಾಗಿ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಉತ್ತಮ ಶಿಕ್ಷಣ ಪಡೆದು ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.

‘ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿ ಸ್ವೀಕರಿಸಿದ ಹಳೆಯ ವಿದ್ಯಾರ್ಥಿ ಮೈಸೂರಿನ ಎಸ್.ಮಲ್ಲಣ್ಣ, ‘1956ರಲ್ಲಿ 5ನೇ ತರಗತಿಗೆ ಸಿದ್ಧಗಂಗಾ ಮಠಕ್ಕೆ ಬಂದೆ. ಇಲ್ಲಿ ನಡೆಯುತ್ತಿದ್ದ ಚರ್ಚಾಸ್ಪರ್ಧೆ, ನಾಟಕದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೆ. ಒಮ್ಮೆ ಒಂದು ನಾಟಕಕ್ಕೆ ಹಿನ್ನೆಲೆ ಗಾಯಕನಾಗಿದ್ದೆ. ಶ್ರೀಗಳು ನನ್ನ ಹಾಡನ್ನು ಇಷ್ಟ ಪಟ್ಟು ತಮ್ಮ ಬಳಿ ಕರೆಸಿಕೊಂಡಿದ್ದರು’ ಎಂದು ನೆನಪಿಸಿಕೊಂಡರು.

ಸಂಘಸಿರಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಲಕ್ಷ್ಮಣದಾಸ್, ‘ನನಗೆ ಅನೇಕ ಪ್ರಶಸ್ತಿಗಳು ಬಂದಿವೆ. ಆದರೆ, ಸರ್ಕಾರಗಳು, ಸಂಘ ಸಂಸ್ಥೆ, ಇಲಾಖೆಗಳು ಕೊಡುವ ಪ್ರಶಸ್ತಿಗಳಿಗಿಂತ ಮಠ ನೀಡಿದ ಪ್ರಶಸ್ತಿ ಹೆಚ್ಚು ಮೌಲ್ಯಯುತವಾದುದು. ಪ್ರಶಸ್ತಿ ಪಡೆದಿದ್ದಕ್ಕೆ ನನ್ನ ಜನ್ಮ ಸಾರ್ಥಕವಾಗಿದೆ’ ಎಂದರು.

ಸಾಹಿತಿ ದಿ.ಟಿ.ಆರ್.ಮಹಾದೇವಯ್ಯ ಅವರ ಪರವಾಗಿ ಪತ್ನಿ ಬಿ.ರಾಜಮ್ಮ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ ಸ್ವೀಕರಿಸಿದರು. ಬೆಂಗಳೂರಿನ ಎಂ.ಮಧುರ ಅಶೋಕ್‌ ಕುಮಾರ್ ಅವರಿಗೆ ‘ಸಿದ್ಧಗಂಗಾ ಶಿವಕುಮಾರಶ್ರೀ’, ತುಮಕೂರಿನ ಪ್ರೊ.ಎಚ್.ವಿ.ವೀರಭದ್ರಯ್ಯ ಅವರಿಗೆ ‘ಕಾಯಕಯೋಗಿ’ ಪ್ರಶಸ್ತಿ, ಮೇದಿನಮಠದ ಶಿವಲಿಂಗ ಸ್ವಾಮೀಜಿ, ಬಿ.ಎನ್.ಚನ್ನಪ್ಪ, ಎಚ್‌.ಗಂಗಪ್ಪ, ಶಿವಕುಮಾರ ಪಾಟೀಲ್ ತೆಗಂಪೂರ್, ಕೆ.ಬಸವಯ್ಯ ಅವರಿಗೆ ‘ಸಂಘಸಿರಿ’ ಪ್ರಶಸ್ತಿ ನೀಡಲಾಯಿತು.

ಸಮಾಜ ಸೇವಕಿ ಶಕುಂತಲಾ ಜಯದೇವ್, ಮಂಡ್ಯ ಕಾಯಕಯೋಗಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT