ಬುಧವಾರ, ಫೆಬ್ರವರಿ 19, 2020
17 °C
ಸಾವಿರಾರು ಕೋಟಿ ಮೊತ್ತದ ಕಾಮಗಾರಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಸಭೆ ಕರೆಯಲು ಒತ್ತಾಯ

ಸ್ಮಾರ್ಟ್ ಸಿಟಿ: ಕಾಮಗಾರಿ ಅವೈಜ್ಞಾನಿಕ, ಒಡೆದ ಆಕ್ರೋಶ ಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಗುರುವಾರ ನಡೆದ ಮಹಾನಗರ ಪಾಲಿಕೆಯ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿಗಳ ವಿರುದ್ಧ ಪಾಲಿಕೆ ಸದಸ್ಯರ ಆಕ್ರೋಶದ ಕಟ್ಟೆ ಒಡೆಯಿತು.

ಮೇಯರ್ ಲಲಿತಾ ರವೀಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಮೇಯರ್ ಅವರೇ ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ಸದಸ್ಯ ಕುಮಾರ್ ಮಾತನಾಡಿ, ‘ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ಮೊತ್ತದ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ಬಹುತೇಕ ಕಾಮಗಾರಿ ಜನಸಾಮಾನ್ಯರಿಗೆ ಉಪಯುಕ್ತವಲ್ಲದ ಕಾಮಗಾರಿಗಳನ್ನೇ ಕೈಗೆತ್ತಿಕೊಳ್ಳಲಾಗಿದೆ’ ಎಂದರು.

ಅಮಾನಿಕೆರೆ ಪಕ್ಕ ರಾಜಗಾಲುವೆ ಸ್ವಚ್ಛತೆ, ಒತ್ತುವರಿ ತೆರವಿಗಾಗಿಯೇ 2017ರಲ್ಲಿ ಒಂದು ಬಾರಿ ₹38 ಲಕ್ಷ, ಮತ್ತೊಂದು ಬಾರಿ ₹18 ಲಕ್ಷ ವೆಚ್ಚ ಮಾಡಲಾಗಿದೆ. ಈಗ ನೋಡಿದರೆ ಮತ್ತೆ ಅದೇ ಸ್ಥಿತಿಯಲ್ಲಿದೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಅಧಿಕಾರಿ ರಶ್ಮಿ ಮಾತನಾಡಿ,‘2017ರಲ್ಲಿ ಪಾಲಿಕೆ ಪರಿಸರ ಎಂಜಿನಿಯರ್, ಸರ್ವೆ ಅಧಿಕಾರಿಗಳ ವರದಿ ಆಧರಿಸಿ ಕಾಮಗಾರಿ ಕೈಗೊಳ್ಳಲಾಗಿದೆ. ವೈಜ್ಞಾನಿಕ ರೀತಿಯಲ್ಲಿಯೇ ಕೈಗೊಳ್ಳಲಾಗಿದೆ’ ಎಂದರು.

ಸದಸ್ಯೆ ಗಿರಿಜಾ ಧನಿಯಾ ಕುಮಾರ್ ಮಾತನಾಡಿ, ‘ವಾರ್ಡಿನಲ್ಲಿ ಕಂಡಲ್ಲೆಲ್ಲ ಗುಂಡಿ ಅಗೆದಿದ್ದೀರಿ. ಅನಾಹುತ ಆದರೆ ಯಾರು ಹೊಣೆ? ಏನೇ ಕಾಮಗಾರಿ ಕೈಗೊಂಡರೂ ನನ್ನ ಗಮನಕ್ಕೆ ತಂದೆ ಮಾಡಬೇಕು’ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.

ಸದಸ್ಯ ಇನಾಯತ್ ಮಾತನಾಡಿ,‘ ಚಾಮುಂಡೇಶ್ವರಿ ರಸ್ತೆಯ 12 ಅಡಿ ಮಾತ್ರ ಇದ್ದು, ವಿಸ್ತರಣೆ ಅಗತ್ಯವಿದೆ. ವ್ಯಾಪಾರಿ ಮಳಿಗೆ ಕಟ್ಟಡ, ಮನೆಗಳ ಮಾಲೀಕರಿಗೆ ಪರಿಹಾರ ಕೊಟ್ಟು ಇನ್ನಷ್ಟು  ವಿಸ್ತರಣೆ ಕಾಮಗಾರಿ ಕೈಗೊಳ್ಳಬೇಕು’ ಎಂದು ಒತ್ತಾಯ ಮಾಡಿದರು.

ಸದಸ್ಯ ಕುಮಾರ್ ಮಾತನಾಡಿ,‘ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಳ್ಳಲು ಮಹಾನಗರ ಪಾಲಿಕೆಯು  ಇನ್ನು ಮುಂದೆ ಯಾವುದೇ ರೀತಿ ಒಪ್ಪಿಗೆ ಪತ್ರ ಕೊಡಬಾರದು‘ ಎಂದು ಒತ್ತಾಯ ಮಾಡಿದರು.

ಚರ್ಚೆ ತಾರಕ್ಕಕ್ಕೇರುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಪ್ರಭಾರ ಆಯುಕ್ತ ಯೋಗಾನಂದ್ ಮಾತನಾಡಿ,‘ ಸ್ಮಾರ್ಟ್ ಸಿಟಿ ಲಿಮಿಟೆಡ್‌ಗೆ ನೂತನ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರ ವಹಿಸಿಕೊಂಡ ಬಳಿಕ ಅವರೊಂದಿಗೆ ಚರ್ಚಿಸಲಾಗುವುದು’ ಎಂದರು.

’ಸ್ಮಾರ್ಟ್ ಸಿಟಿ ಕಾಮಗಾರಿ’ ಕುರಿತಾಗಿಯೇ ಮಹಾನಗರ ಪಾಲಿಕೆ ಸದಸ್ಯರು ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ಸಭೆ ದಿನಾಂಕ ನಿಗದಿಪಡಿಸಲಾಗುವುದು’ ಎಂದು ಹೇಳಿದ ಬಳಿಕ ಸದಸ್ಯರು ಸಮ್ಮತಿ ಸೂಚಿಸಿದರು.

ನಗರದ ಹೊರವಲಯದಲ್ಲಿ ಕಸಾಯಿಖಾನೆ ನಿರ್ಮಾಣ, ಸ್ಮಾರ್ಟ್ ಸಿಟಿಯಿಂದ ಅಳವಡಿಸಿದ ಟ್ವಿನ್ ಬಿನ್ಸ್ ಸೂಕ್ತ ಸ್ಥಳದಲ್ಲಿ ಅಳವಡಿಕೆ ಮಾಡುವುದು ಸೇರಿದಂತೆ ಕೆಲ ವಿಷಯಗಳ ಬಗ್ಗೆ ಸದಸ್ಯರು ಚರ್ಚೆ ನಡೆಸಿದರು.

ವಿರೋಧ ಪಕ್ಷದ ನಾಯಕ ಸಿ.ಎನ್.ರಮೇಶ್, ಲಕ್ಷ್ಮಿನರಸಿಂಹರಾಜು, ಮಂಜುನಾಥ್, ಶ್ರೀನಿವಾಸ್, ಸೈಯದ್ ನಯಾಜ್ ಮಾತನಾಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು