ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀನಿವಾಸ್‌ಗೆ ಶೋಷಿತ ಸಮುದಾಯ ಬೆಂಬಲ

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ
Published 1 ಜೂನ್ 2024, 6:14 IST
Last Updated 1 ಜೂನ್ 2024, 6:14 IST
ಅಕ್ಷರ ಗಾತ್ರ

ತುಮಕೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‌ ಅವರನ್ನು ಬೆಂಬಲಿಸುವುದಾಗಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪದಾಧಿಕಾರಿಗಳು ಇಲ್ಲಿ ಶುಕ್ರವಾರ ತಿಳಿಸಿದರು.

‘ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯಕ್ಕೆ ಅವಕಾಶ ಸಿಕ್ಕಿದ್ದು, ಶ್ರೀನಿವಾಸ್‌ ಅವರೊಂದಿಗೆ ನಿಲ್ಲುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲ ಶೋಷಿತ ಸಮುದಾಯಗಳು ಅವರನ್ನು ಬೆಂಬಲಿಸಬೇಕು’ ಎಂದು ಒಕ್ಕೂಟದ ಸಂಚಾಲಕ ಅನಂತ್ ನಾಯಕ ಮನವಿ ಮಾಡಿದರು.

ಹಿಂದೆ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ದಿವಾಳಿ ಮಾಡಿದೆ. ತರಾತುರಿಯಲ್ಲಿ ಎನ್ಇಪಿ ಜಾರಿಗೊಳಿಸಿತು. ಇದು ದಮನಿತ ಸಮುದಾಯಗಳನ್ನು ಶಿಕ್ಷಣದಿಂದ ದೂರು ಇಡುವ ನೀತಿಯಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣ ಎಚ್ಚೆತ್ತುಕೊಂಡು ಎನ್‌ಇಪಿ ರದ್ದುಗೊಳಿಸಿದೆ. ಇದು ಸ್ವಾಗತಾರ್ಹ ಹೆಜ್ಜೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸ್ಪಂದಿಸಿ ವೇತನ ಹೆಚ್ಚಳ ಮಾಡಿದೆ. ಉಪನ್ಯಾಸಕರಿಗೆ ರಜೆ, ಹೆರಿಗೆ ರಜೆಯ ಸೌಲಭ್ಯ ಕಲ್ಪಿಸಿದೆ. ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಸಾಮರ್ಥ್ಯ ಇರುವ ಶ್ರೀನಿವಾಸ್‌ ಅವರನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡರು.

ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ, ‘ಶಿಕ್ಷಕರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚರ್ಚಿಸಲಾಗಿದೆ. ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ಭದ್ರತೆ ಒದಗಿಸಲಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.

ಮುಖಂಡ ಕೊಟ್ಟ ಶಂಕರ್, ‘ಶಿಕ್ಷಣ ಸಂಸ್ಥೆಗಳಲ್ಲಿ, ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ಜೀತದಾರರಿಗಿಂತ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಅವರಿಗೆ ಸಲ್ಲಬೇಕಾದ ಗೌರವ ಸಿಗುತ್ತಿಲ್ಲ. ಜಿಲ್ಲೆಯ ಶಿಕ್ಷಕ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ’ ಎಂದು ತಿಳಿಸಿದರು.

ಮುಖಂಡರಾದ ವೆಂಕಟರಾಮ್‌, ರಾಮಕೃಷ್ಣ, ಯಲ್ಲಪ್ಪ, ಕೆಂಪರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT