ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ಹೊನ್ನಾರು ಹೂಡಿ ಕೃಷಿ ಪ್ರಾರಂಭಿಸಿದ ರೈತ

Published 16 ಮೇ 2023, 19:35 IST
Last Updated 16 ಮೇ 2023, 19:35 IST
ಅಕ್ಷರ ಗಾತ್ರ

ಶಾಂತರಾಜು ಎಚ್.ಜಿ.

ಗುಬ್ಬಿ: ಈ ಬಾರಿಯ ಚುನಾವಣೆ ಕಾವು ತಾಲ್ಲೂಕಿನ ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರಿತ್ತು.

ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಮಳೆಗಳಾದ ಭರಣಿ, ಕೃತಿಕಾ ಹದವಾಗಿ ಬಿದ್ದರೂ ಚುನಾವಣೆ ಕಾರಣದಿಂದಲೇ ರೈತರು ಕೃಷಿ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಇದೀಗ ಫಲಿತಾಂಶ ಪ್ರಕಟಗೊಂಡು ಎಲ್ಲರೂ ನಿರಾಳರಾಗಿದ್ದಾರೆ. ಇತ್ತೀಚೆಗೆ ಬಿದ್ದಿರುವ ಹದ ಮಳೆಯಿಂದ ರೈತರು ಕೃಷಿ ಚಟುವಟಿಕೆಯತ್ತ ಗಮನಹರಿಸಲು ಮುಂದಾಗಿದ್ದಾರೆ.

ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಪೂರ್ವ ಮುಂಗಾರು ಕೃಷಿ ಪ್ರಾರಂಭಿಸುವ ಮೊದಲು ಹೊನ್ನಾರು ಹೂಡುವುದನ್ನು ಸಂಪ್ರದಾಯದಂತೆ ರೂಢಿಸಿಕೊಂಡಿದ್ದಾರೆ. ಇದನ್ನು ಗ್ರಾಮದ ಎಲ್ಲರೂ ಸೇರಿಕೊಂಡು ಒಗ್ಗಟ್ಟಿನಿಂದ ಮಾಡುವುದು ವಿಶೇಷ. ಪೂಜೆ ಸಲ್ಲಿಸಿ ಹೊನ್ನಾರು ಹೂಡಿ ಕೃಷಿ ಚಟುವಟಿಕೆ ಪ್ರಾರಂಭಿಸಿದರೆ ರೈತರಿಗೆ ಒಳ್ಳೆಯದಾಗುವುದು ಎಂಬ ನಂಬಿಕೆ ಗ್ರಾಮೀಣ ಭಾಗದ ಜನರ ನಂಬಿಕೆ.

ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್. ನಂದಿಹಳ್ಳಿ ಗ್ರಾಮದಲ್ಲಿ ಸಂಪ್ರದಾಯದಂತೆ ಮುಂಗಾರು ಪ್ರಾರಂಭದಲ್ಲಿ ಹೊನ್ನಾರು ಹೂಡುವುದನ್ನು ಅನೇಕ ತಲೆಮಾರುಗಳಿಂದ ನಡೆದು ಬಂದಿದೆ. ಯುಗಾದಿ ನಂತರ ಮೊದಲು ಹೊನ್ನಾರು ಹೂಡಿ ನಂತರ ಮುಂದಿನ ಕೃಷಿ ಚಟುವಟಿಕೆಯತ್ತ ಗಮನ ಹರಿಸುವುದು ರೂಢಿಯಲ್ಲಿದೆ. ಈ ಭಾಗದ ಸಂಪ್ರದಾಯದಂತೆ ಗ್ರಾಮದ ಮುಖಂಡರು ಪೂರ್ವ ಮುಂಗಾರು ಹದ ಮಳೆ ಬಿದ್ದ ನಂತರ ಜ್ಯೋತಿಷಿಗಳನ್ನು ಕೇಳಿ ಅವರ ಸಲಹೆಯಂತೆ ಯಾವ ಹೆಸರಿನವರು ಹೊನ್ನಾರು ಹೂಡಬೇಕು ಹಾಗೂ ಯಾವ ಬಣ್ಣದ ಎತ್ತುಗಳು ಬೇಕು ಎನ್ನುವುದನ್ನು ತಿಳಿದುಕೊಳ್ಳುವರು. ಗ್ರಾಮದ ಕೆಲವರು ಸೇರಿಕೊಂಡು ಎತ್ತುಗಳ ಮೈತೊಳೆದು, ನೇಗಿಲು-ನೊಗ ತೊಳೆದು ಸ್ನಾನ ಮಾಡಿ ಮೊದಲು ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಗ್ರಾಮದ ಸಮೀಪದ ಕೃಷಿ ಭೂಮಿಯಲ್ಲಿ ಎತ್ತು, ನೇಗಿಲು-ನೊಗ ಪೂಜಿಸಿ ಹೊನ್ನಾರು ಹೂಡುವರು.

ಇತ್ತೀಚೆಗೆ ಸಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ನಂತರ ಟ್ರ್ಯಾಕ್ಟರ್‌ನಿಂದಲೇ ಉಳುಮೆ ಮಾಡಿ ಮೊದಲಿಗೆ ರಾಸುಗಳ ಮೇವಿಗೆ ಜೋಳ, ನಂತರ ಹೆಸರು, ಉದ್ದು, ಅಲಸಂದೆ, ಎಳ್ಳು, ಹರಳು ಬಿತ್ತನೆಗೆ ಗಮನಹರಿಸುತ್ತಾರೆ. ತೋಟಗಳಿಗೆ ಹುರಳಿ, ಅಪ್ಪ ಸೆಣೆಬು ಬಿತ್ತಿ ಗೊಬ್ಬರಕ್ಕೆ ಸಹಕಾರಿಯಾಗುವಂತೆ ಮಾಡಿಕೊಳ್ಳುತ್ತಾರೆ.

ಈ ಹಿಂದೆ ಹೊನ್ನಾರು ಹೂಡಿ ಗ್ರಾಮದ ಸುತ್ತ ನೇಗಿಲ ಗೆರೆ ಹೊಡೆಯುತ್ತಿದ್ದೆವು. ಇತ್ತೀಚೆಗೆ ತೋಟ ಹೆಚ್ಚಾಗಿರುವುದರಿಂದ ಅದು ಸಾಧ್ಯವಾಗದೆ ಗ್ರಾಮದ ಸಮೀಪವಿರುವ ಖಾಲಿ ಕೃಷಿ ಭೂಮಿಯಲ್ಲಿ ಸ್ವಲ್ಪ ಹೊತ್ತು ಉಳಿಮೆ ಮಾಡುತ್ತೇವೆ
-ಪ್ರಕಾಶಪ್ಪ, ರೈತ
ಇತ್ತೀಚೆಗೆ ಎತ್ತು ಕಡಿಮೆಯಾಗಿ ಟ್ರ್ಯಾಕ್ಟರ್‌ನಲ್ಲಿಯೇ ಉಳಿಮೆ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಹೊನ್ನಾರು ಹೂಡಲು ಎತ್ತುಗಳನ್ನೇ ಬಳಸುವ ಸಂಪ್ರದಾಯವನ್ನು ತಲೆಮಾರುಗಳಿಂದ ಊರಿನ ಹಿರಿಯರು ರೂಢಿಸಿಕೊಂಡು ಬಂದಿದ್ದಾರೆ. ಅದನ್ನೇ ಮುಂದುವರೆಸಿದ್ದೇವೆ
-ಮಧು, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT