ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅವಶ್ಯ

‘ಸ್ವಾಮಿ ವಿವೇಕಾನಂದ ಯುವ ಸಮ್ಮೇಳನ’ದಲ್ಲಿ ಸ್ವಾಮಿ ದಯಾಧಿಪಾನಂದಜೀ ಮಹಾರಾಜ್‌ ಅಭಿಮತ
Last Updated 8 ಡಿಸೆಂಬರ್ 2018, 16:09 IST
ಅಕ್ಷರ ಗಾತ್ರ

ತುಮಕೂರು: ‘ವಿದ್ಯಾರ್ಥಿಗಳು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಏಕಾಗ್ರತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಾಧನೆಯತ್ತ ದೃಷ್ಟಿ ಹರಿಸಬಹುದು’ ಎಂದು ಹರಿದ್ವಾರದ ರಾಮಕೃಷ್ಣ ಮಿಷನ್‌ ಸೇವಾಶ್ರಮದ ಸ್ವಾಮಿ ದಯಾಧಿಪಾನಂದಜೀ ಮಹಾರಾಜ್‌ ತಿಳಿಸಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಚಿಕಾಗೋ ಉಪನ್ಯಾಸದ 125ನೇ ವರ್ಷದ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ‘ಸ್ವಾಮಿ ವಿವೇಕಾನಂದ ಯುವ ಸಮ್ಮೇಳನ’ದ ಸಾನ್ನಿಧ್ಯವಹಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಜೀವನದ ಬಹುಮುಖ್ಯ ಅಂಶ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಅರಿತು ಬಾಳಬೇಕು. ಏಕೆಂದರೆ ಶ್ರೇಷ್ಠ ವಿದ್ಯಾರ್ಥಿಯೇ ಉತ್ತಮ ಪ್ರಜೆಯಾಗಿ, ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ನುಡಿದರು.

ವಿದ್ಯಾರ್ಥಿಗಳು ಮುಖ್ಯವಾಗಿ ಶ್ರದ್ಧೆ, ಸಮಯ ಪ್ರಜ್ಞೆ, ಕಲಿಯಬೇಕು. ಸತತ ಅಭ್ಯಾಸ ಇಲ್ಲದಿದ್ದರೆ ಯಶ್ಸಸು ಸಾಧ್ಯವಿಲ್ಲ. ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗಳನ್ನು ಜೀವನದಲ್ಲಿ ಕಾರ್ಯರೂಪಕ್ಕೆ ತರುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಉನ್ನತ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಮ್ಮೇಳನ ಉದ್ಘಾಟಿಸಿದ ಬರಹಗಾರ ಡಿ.ಕೆ.ರಾಜೇಂದ್ರ ಮಾತನಾಡಿ, ‘ವಿವೇಕಾನಂದರ ಸಾಹಿತ್ಯವನ್ನು ಹೆಚ್ಚು ಓದಿಕೊಳ್ಳಬೇಕು. ಇದು ಜೀವನದಲ್ಲಿ ಗುರಿ ತಲುಪಲು ಆತ್ಮಸ್ಥೈರ್ಯ ತುಂಬುತ್ತದೆ. ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯಿಂದ ಯಶಸ್ಸು ಸಾಧ್ಯ’ ಎಂದು ಹೇಳಿದರು.

‘ಮನಸ್ಸಿನಲ್ಲಿ ರಾಮತ್ವ ರಾವಣತ್ವ ಎರಡೂ ಇರುತ್ತದೆ. ಯಾವುದನ್ನು ನಾವು ಪ್ರಬಲವಾಗಿ ಬೆಳೆಸುತ್ತೇವೆಯೋ ಅದೇ ನಮ್ಮ ವ್ಯಕ್ತಿತ್ವವಾಗುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ತುಮಕೂರು ಆಶ್ರಮವು ಕೇವಲ ಬೋಧನೆ ಕೇಂದ್ರವಲ್ಲದೇ ಸಮಾಜ ಮುಖಿ ಕಾರ್ಯಗಳ ಮೂಲಕ ಹಿಂದುಳಿದವರಿಗೆ ಶಕ್ತಿ ತುಂಬುವ ಕಾರ್ಯ ಮಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT