ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬಸ್‌ಗಾಗಿ ವಿದ್ಯಾರ್ಥಿಗಳ ಪರದಾಟ

Last Updated 18 ನವೆಂಬರ್ 2021, 3:49 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ನಗರ ಸಾರಿಗೆ ಬಸ್‌ಗಳ ಸುಗಮ ಸಂಚಾರ ವ್ಯವಸ್ಥೆ ಇಲ್ಲವಾಗಿದ್ದು, ಪ್ರತಿನಿತ್ಯವೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಸಂಚರಿಸುತ್ತಿರುವ ಕೆಲವೇ ಕೆಲವು ಬಸ್‌ಗಳಲ್ಲಿ ಸ್ಥಳಾವಕಾಶವಿಲ್ಲದೆ ಬಸ್ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಕೆಲವರು ಬಾಗಿಲಿನಲ್ಲೇ ಜೋತಾಡಿಕೊಂಡು ಪ್ರಯಾಣಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಮತ್ತೆ ಕೆಲವರು ಬಸ್ ಹತ್ತಲು ಸಾಧ್ಯವಾಗದೆ ಶಾಲಾ, ಕಾಲೇಜುಗಳಿಗೆ ಸಕಾಲಕ್ಕೆ ತೆರಳು ಆಗುತ್ತಿಲ್ಲ. ನಿತ್ಯವೂ ಇದೇ ಪರದಾಟವಾಗಿದ್ದು, ಪಾಠದಿಂದ ವಂಚಿತರಾಗುತ್ತಿದ್ದಾರೆ.

ಕಾಲೇಜುಗಳಿಗೆ ತೆರಳುವ ಸಮಯದಲ್ಲಿ, ಮಧ್ಯಾಹ್ನ ಹಾಗೂ ಸಂಜೆ ಮನೆಗೆ ಮರಳುವ ಹೊತ್ತಿನಲ್ಲಿ ಬಸ್‌ಗಳ ಸಂಚಾರ ಇರುವುದಿಲ್ಲ. ಇದೇ ವೇಳೆ ಸಾರ್ವಜನಿಕರ ಓಡಾಟವೂ ಹೆಚ್ಚಿರುತ್ತದೆ. ಇಂತಹ ಸಮಯದಲ್ಲೇ ಬಸ್‌ಗಳ ಕೊರತೆ ಎದುರಾಗುತ್ತದೆ. ಅಲ್ಲದೆ ನಿಗದಿತ ಸಮಯಕ್ಕೆ ಬಸ್‌ಗಳು ಸಂಚರಿಸುತ್ತಿಲ್ಲ. ಬಂದರೆ ಒಂದರ ಹಿಂದೆ ಒಂದು ಬರುತ್ತವೆ. ಇಲ್ಲವಾದರೆ ಬಸ್‌ಗಳೇ ಇರುವುದಿಲ್ಲ ಎಂದು ವಿದ್ಯಾರ್ಥಿ ಕಿಶೋರ್ ಹೇಳುತ್ತಾರೆ.

ನಗರ ಸಾರಿಗೆ ಬಸ್‌ಗಳು ಹಿಂದಿನಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಿಲ್ಲ. ಕೆಲವು ಮಾರ್ಗಗಳಲ್ಲಿ ಮಾತ್ರ ಓಡಾಡುತ್ತಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚು ಮಾಡಿಲ್ಲ. ವಿದ್ಯಾರ್ಥಿಗಳ ಜತೆಗೆ ಸಾರ್ವಜನಿಕರೂ ಇದೇ ರೀತಿಯ ಪರಿಪಾಟಲು ಪಡುತ್ತಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಆಟೊಗಳಿಗೆ ದುಪ್ಪಟ್ಟು ಹಣ ಕೊಟ್ಟು ತೆರಳುವಂತಾಗಿದೆ.

ಕೋವಿಡ್ ನಂತರ ಶಾಲಾ, ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿವೆ. ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಇತರ ಚಟುವಟಿಕೆಗಳು ತೆರೆದುಕೊಂಡಿದ್ದು, ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಇದರಿಂದಾಗಿ ಜನರ ಓಡಾಟ ಹೆಚ್ಚಿದ್ದು, ಸಾರ್ವಜನಿಕ ಸಾರಿಗೆ ಆಶ್ರಯಿಸುವುದು ಅನಿವಾರ್ಯವಾಗಿದೆ. ಕಾಲೇಜುಗಳು ಆರಂಭವಾಗಿದ್ದರೂ, ಪೂರ್ಣ ಪ್ರಮಾಣದಲ್ಲಿ ಹಾಸ್ಟೆಲ್‌ಗಳು ಪ್ರಾರಂಭವಾಗಿಲ್ಲ. ಹೊರಗಿನಿಂದ ಬಂದ ವಿದ್ಯಾರ್ಥಿಗಳು ಹಾಸ್ಟೆಲ್ ವ್ಯವಸ್ಥೆ ಆಗುವವರೆಗೂ ತಾತ್ಕಾಲಿಕವಾಗಿ ಅಲ್ಲಲ್ಲಿ ಆಶ್ರಯ ಪಡೆದುಕೊಂಡಿದ್ದು, ಬಸ್ ಮೂಲಕ ಕಾಲೇಜು ತಲುಪಬೇಕಿದೆ. ಕೆಲವರು ಊರುಗಳಿಂದ ಬಂದು, ಸಂಜೆಗೆ ವಾಪಸಾಗುತ್ತಿದ್ದಾರೆ. ಉಳಿದುಕೊಳ್ಳಲು ಪರದಾಡುತ್ತಿದ್ದವರು ಈಗ ಆಟೊಗಳಿಗೆ ದುಬಾರಿ ಹಣ ಕೊಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಕುಣಿಗಲ್ ರಸ್ತೆಯ ಎಸ್‌ಎಸ್‌ಐಟಿಯಿಂದ ಶಿರಾ ಗೇಟ್, ಗುಬ್ಬಿ ಗೇಟ್‌ನಿಂದ ಕ್ಯಾತ್ಸಂದ್ರ, ರಿಂಗ್ ರಸ್ತೆಯಿಂದ ಉಪ್ಪಾರಹಳ್ಳಿ– ಭದ್ರಮ್ಮ ವೃತ್ತದ ನಡುವೆ ಸಾಕಷ್ಟು ಶಾಲಾ ಕಾಲೇಜುಗಳು ಇವೆ. ಬಿಜಿಎಸ್ ವೃತ್ತ (ಟೌನ್‌ಹಾಲ್), ಕುಣಿಗಲ್ ಸರ್ಕಲ್, ಭದ್ರಮ್ಮ ವೃತ್ತ, ವಿಶ್ವವಿದ್ಯಾನಿಲಯ, ಎಸ್‌ಐಟಿ ಭಾಗದಲ್ಲಿ ವಿದ್ಯಾರ್ಥಿಗಳ ಸಂಚಾರ ಹೆಚ್ಚಿರುತ್ತದೆ.

ಬೆಂಗಳೂರಿನ ಉಪನಗರವಾಗಿ ತುಮಕೂರು ನಗರ ಪ್ರಗತಿ ಕಾಣುತ್ತಿದ್ದು, ವರ್ಷದಿಂದ ವರ್ಷಕ್ಕೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದೆ. ಹೊಸಹೊಸ ಶಿಕ್ಷಣ ಸಂಸ್ಥೆಗಳು ಆರಂಭವಾಗುತ್ತಲೇ ಇವೆ. ಶಿಕ್ಷಣ ಅರಸಿ ಬರುವ ಮಕ್ಕಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಜತೆಗೆ ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳು ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ಉದ್ಯಮ ಕ್ಷೇತ್ರವೂ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದೆ. ಈ ಎಲ್ಲಾ ಕಾರಣಗಳಿಗೆ ಜನಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ
ಕೋವಿಡ್‌ನಿಂದಾಗಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ. ಒಮ್ಮೆಲೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಬಸ್ ಸೌಲಭ್ಯ ಒದಗಿಸುವುದು ಸ್ವಲ್ಪಮಟ್ಟಿಗೆ ನಮಗೂ ಕಷ್ಟಕರವಾಗಿದೆ. ಅದರ ನಡುವೆಯೂ ನಿರ್ವಹಣೆ ಮಾಡಲಾಗುತ್ತಿದೆ.

ನಗರದಲ್ಲಿ ನಿತ್ಯ 35 ಬಸ್‌ಗಳು 50 ಟ್ರಿಪ್‌ಗಳಲ್ಲಿ ಸಂಚರಿಸುತ್ತಿವೆ. ಕೋವಿಡ್‌ಗೂ ಮುಂಚೆ ಜಿಲ್ಲೆಯಲ್ಲಿ 619 ಬಸ್‌ಗಳು ಇದ್ದವು. ಕೋವಿಡ್ ಸಮಯದಲ್ಲಿ ಸಂಚರಿಸದೆ 24 ಬಸ್‌ಗಳು ಹಾಳಾಗಿದ್ದು, 643ಕ್ಕೆ ಇಳಿದಿದೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸಂಚಾರ ಆರಂಭಿಸಲು ಬಸ್‌ಗಳ ಕೊರತೆ ಇದೆ. ಆದರೂ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಲಾಗುವುದು.
-ಬಸವರಾಜು, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ಊರಿಗೆ ತಲುಪಲು ರಾತ್ರಿಯಾಗುತ್ತಿದೆ
ಸಕಾಲಕ್ಕೆ ಬಸ್‌ಗಳು ಸಂಚರಿಸುತ್ತಿಲ್ಲ. ಬಸ್‌ಗಳಿಗೆ ಹತ್ತಲು ಜಾಗವೇ ಇರುವುದಿಲ್ಲ. ಬಾಗಿಲಿನಲ್ಲಿ ಕಷ್ಟಪಟ್ಟು ನಿಂತುಕೊಂಡು ಪ್ರಯಾಣಿಸುವ ಸಮಯದಲ್ಲಿ ಕೆಳಕ್ಕೆ ಬೀಳುವ ಆತಂಕ ಕಾಡುತ್ತಿದೆ. ಗಂಟೆಗಟ್ಟಲೆ ಬಸ್‌ಗೆ ಕಾಯುವುದರಿಂದ ಊರಿಗೆ ತಲುಪಲು ರಾತ್ರಿಯಾಗುತ್ತಿದೆ. ಹೆಣ್ಣು ಮಕ್ಕಳಿಗಂತೂ ಹೆಚ್ಚು ಸಮಸ್ಯೆಯಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
-ಕೃಷ್ಣ, ವಿದ್ಯಾರ್ಥಿ

ಹೆಚ್ಚು ಬಸ್ ಬಿಡಬೇಕು
ಸರಿಯಾದ ವೇಳೆಗೆ ಬಸ್ ಸಿಗದೆ ತರಗತಿಗೆ ಸಕಾಲಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಾಠ ತಪ್ಪಿ ಹೋಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸುವಂತೆ ಮಾಡಿದರೆ ಅನುಕೂಲವಾಗುತ್ತದೆ.
-ಯೋಗೇಶ್, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT