ಕುಣಿಗಲ್: ಹತ್ತು ದಿನದ ಹಿಂದೆ ಅಡುಗೆ ಭಟ್ಟರೊಬ್ಬರ ಶಂಕಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣವನ್ನು ಭೇದಿಸಿರುವ ಕುಣಿಗಲ್ ಪೊಲೀಸರು, ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿದಂತೆ ಎಂಟು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ತಾಲ್ಲೂಕಿನ ಸೀನಪ್ಪನಹಳ್ಳಿಯ ಮಂಜುನಾಥ (25) ಎಂಬುವರ ಶವ ಫೆ. 4ರಂದು ಕೆರೆಯಲ್ಲಿ ಪತ್ತೆಯಾಗಿತ್ತು. ಪತ್ನಿ ಹರ್ಷಿತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಕುಣಿಗಲ್ ಪೊಲೀಸರು ತನಿಖೆ ನಡೆಸಿದ್ದರು.
ಒಂಬತ್ತು ದಿನದೊಳಗೆ ಪ್ರಕರಣ ಭೇದಿಸಿರುವ ಪೊಲೀಸರು ಮೃತ ಮಂಜುನಾಥ್ ಪತ್ನಿ ಹರ್ಷಿತಾ (21), ಆಕೆಯ ದೊಡ್ಡಮ್ಮನ ಮಗ ಬೆಂಗಳೂರಿನ ಸುಂಕದಕಟ್ಟೆಯ ರಘು (29), ಆತನ ಸಹೋದರ ರವಿಕಿರಣ್ ಹಾಗೂ ಸ್ನೇಹಿತರಾದ ಕಿತ್ತನಾಮಂಗಲದ ಅರುಣ, ಕೇಶವ, ನಟರಾಜ, ಸಂತೆಮಾವತ್ತೂರಿನ ಶ್ರೀಧರ್, ಮಾಗಡಿಯ ಉಮೇಶ್ ಎಂಬುವರನ್ನು ಬಂಧಿಸಿದ್ದಾರೆ.
ಫೆ.3ರಂದು ಸ್ನೇಹಿತರೊಂದಿಗೆ ಜನ್ಮದಿನ ಆಚರಿಸಿಕೊಂಡ ಮಂಜುನಾಥ ರಾತ್ರಿ ಮನೆಗೆ ತೆರಳಿದ್ದರು. ಫೆ 4ರಂದು ಬೆಳಿಗ್ಗೆ ಆತನ ಶವ ಮತ್ತು ಬೈಕ್ ಕಿತ್ತನಾಮಂಗಲ ಕೆರೆಯಲ್ಲಿ ಪತ್ತೆಯಾಗಿತ್ತು. ಅದನ್ನು ಅಪಘಾತ ಪ್ರಕರಣ ಎಂದು ಬಿಂಬಿಸಲಾಗಿತ್ತು.
ಅನೈತಿಕ ಸಂಬಂಧ
ಮಾಗಡಿ ತಾಲ್ಲೂಕಿನ ಒಂಭತ್ತುಗುಂಟೆ ಗ್ರಾಮದ ಹರ್ಷಿತಾ ವರ್ಷದ ಹಿಂದೆ ಮಂಜುನಾಥ ಅವರನ್ನು ಮದುವೆಯಾಗಿದ್ದರು. ಸಂಬಂಧದಲ್ಲಿ ಸಹೋದರನಾಗುವ ತನ್ನ ದೊಡ್ಡಮನ ಮಗ ರಘು ಜತೆ ಹರ್ಷಿತಾ ಅನೈತಿಕ ಸಂಬಂಧ ಹೊಂದಿದ್ದಳು. ರಘು ಜೊತೆ ಸೇರಿ ಆತನ ಸ್ನೇಹಿತ ಅರುಣ್ ಹಾಗೂ ಸಂಗಡಿಗರಿಗೆ ₹5 ಲಕ್ಷಕ್ಕೆ ಗಂಡನ ಹತ್ಯೆಗೆ ಸುಪಾರಿ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.3ರಂದು ರಾತ್ರಿ ಮನೆಯಲ್ಲಿಯೇ ಮಂಜುನಾಥಗೆ ಕುತ್ತಿಗೆ ಬಿಗಿದು ಕೊಲೆ ಮಾಡಿ ಕಿತ್ತನಾಮಂಗಲ ಕೆರೆಯಲ್ಲಿ ಬೈಕ್ ಜತೆ ಶವ ಎಸೆದು ಬಂದಿದ್ದರು ಎಂದು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ಪಂಚನಾಮೆ ವೇಳೆ ಗಲಾಟೆ
ಪೊಲೀಸರು ಸೋಮವಾರ ಸ್ಥಳ ಪಂಚನಾಮೆಗೆ ಆರೋಪಿಗಳನ್ನು ಕರೆತಂದಾಗ ಕಿತ್ತಾನಾಮಂಗಲ, ಗಂಟಗಾನಹಳ್ಳಿ, ಹೊಸಕೆರೆ, ಗುಜ್ಜೆನಹಳ್ಳಿ, ಕಾಡಮತ್ತಿಕೆರೆ, ಮುನಿಯನಪಾಳ್ಯದ ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿಯನ್ನು ತಮ್ಮ ವಶಕ್ಕೆ ನೀಡಲು ಗ್ರಾಮಸ್ಥರು ಆಗ್ರಹಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಪಂಚನಾಮೆಯನ್ನು ಮುಂದೂಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.