ಮಂಗಳವಾರ, ಮೇ 17, 2022
26 °C
ಆದಿಚುಂಚನಗಿರಿಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅಭಿಮತ

ಪ್ರತಿಭೆ ಪ್ರೋತ್ಸಾಹ ಸಮಾಜದ ಕರ್ತವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಗುರುತಿಸಿಕೊಂಡಾಗ ಉತ್ತಮ ಸಾಧನೆ ಸಾಧ್ಯ. ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಮುಖ್ಯ ಕರ್ತವ್ಯವಾಗಿದೆ’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.

ಶನಿವಾರ ಭೈರವೇಶ್ವರ ಸಹಕಾರ ಬ್ಯಾಂಕ್ ಆವರಣದಲ್ಲಿ ಭೈರವಿ ಮಹಿಳಾ ಸಂಘ ಮತ್ತು  ಭೈರವಿ ಮಹಿಳಾ ವಿವಿದೋದ್ಧೇಶ ಸಹಕಾರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ಧ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜಕ್ಕೆ, ದೇಶಕ್ಕೆ ಕೀರ್ತಿ ತರುವಂತೆ ಆಗಬೇಕು. ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡಲು ಪೋಷಕರು ಪ್ರೋತ್ಸಾಹಿಸಬೇಕು ಎಂದರು.

ಮಹಾನಗರಪಾಲಿಕೆ ಮೇಯರ್ ಲಲಿತಾ ರವೀಶ್, ‘ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಂಡು ಸಮಾಜ ಸೇವಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಭೈರವಿ ಮಹಿಳಾ ಸಂಘದ ಅಧ್ಯಕ್ಷೆ ಸುಜಾತಾ ನಂಜೇಗೌಡ ಮಾತನಾಡಿ, ‘ಇಂದಿನ ಆಧುನಿಕ ಕಾಲದಲ್ಲಿ ವಿದ್ಯಾರ್ಥಿಗಳು ಪಠ್ಯ ಪುಸ್ತಕ ಓದಿ ಅಭ್ಯಾಸ ಮಾಡುವುದನ್ನು ಬಿಟ್ಟು ಮೊಬೈಲ್‌ನಲ್ಲಿ ಕಾಲ ಕಳೆದು ಮಾನಸಿಕ ಒತ್ತಡಗಳಿಗೆ ಕಾರಣವಾಗಿದೆ. ಪೋಷಕರು ಈ ಬಗ್ಗೆ ಹೆಚ್ಚು ಗಮನಹರಿಸಿಬೇಕು’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಬಾ.ಹ.ರಮಾಕುಮಾರಿ , ‘ಮಕ್ಕಳು ಓದುವುದರ ಜೊತೆಗೆ ಉತ್ತಮ ನಡತೆ, ಸಂಸ್ಕೃತಿ, ಸಂಸ್ಕಾರ ರೂಢಿಸಿಕೊಳ್ಳಬೇಕು’ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ಹಿತ ರಕ್ಷಣಾ ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಶ್ರೀಹರಿ ಜೆ.ಗೌಡ ಉಪನ್ಯಾಸ ನೀಡಿದರು. ಬೆಂಗಳೂರಿನ ಹನುಮೇಗೌಡರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಭೈರವಿ ಮಹಿಳಾ ಸಂಘದಿಂದ ಪುಸ್ತಕ ಬಿಡುಗಡೆ ಮಾಡಲಾಯಿತು.

ಭೈರವಿ ಮಹಿಳಾ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷೆ ಸುಧಾಕುಮಾರ್, ಭೈರವಿ ಮಹಿಳಾ ಸಂಘದ ಕಾರ್ಯಾಧ್ಯಕ್ಷೆ ಸುನಂದಾ ಎಲ್.ಗೌಡ, ಉಪಾಧ್ಯಕ್ಷೆ ನೇತ್ರಾ ಜಗದೀಶ್, ಕಾರ್ಯದರ್ಶಿ ಸುಮಂಗಲಾ ಅಪ್ಪಣ್ಣ, ಸಹಕಾರ್ಯದರ್ಶಿ ಪಾರ್ವತಿ ನಂಜುಂಡಯ್ಯ, ಖಜಾಂಚಿ ಶಿವಲಕ್ಷ್ಮಮ್ಮ, ಸಂಘಟನಾ ಕಾರ್ಯದರ್ಶಿ ರತ್ನನಾಗರಾಜು, ಮಂಜುಳಾ ಲೋಕೇಶ್, ಮಹಾನಗರಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್, ಕುಮಾರ್, ದೇವು ಪ್ರಕಾಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಕಮಲ ಕೃಷ್ಣಮೂರ್ತಿ, ಲಲಿತಾ ಹನುಮಂತರಾಯಪ್ಪ, ಬೆಳ್ಳಿ ರಕ್ತನಿಧಿ ಕೇಂದ್ರದ ಬೆಳ್ಳಿ ಲೋಕೇಶ್, ಎಸ್‌ಎಸ್‌ಐಟಿ ಪ್ರಾಂಶುಪಾಲ ಡಾ.ವೀರಯ್ಯ, ನಳಿನಾ ಲೋಕೇಶ್, ತಾರಾದೇವಿ, ನರಸಿಂಹಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು