ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್ ವಿಸ್ತರಣೆ; ಅನುಮಾನಕ್ಕೆ ಎಡೆ

ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆಯಲು ಪ್ರಯತ್ನ
Last Updated 4 ಜನವರಿ 2021, 3:29 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ವಿಶ್ವವಿದ್ಯಾಲಯಕ್ಕೆ ಸ್ವಚ್ಛತಾ ಕಾರ್ಯ ನಿರ್ವಹಣೆಯ ಸೇವೆ ಒದಗಿಸುತ್ತಿರುವ ಮೇ.ಮಾರ್ಸ್ ಸೆಕ್ಯುರಿಟಿ ಆ್ಯಂಡ್ ಅಲೈಡ್ ಸರ್ವಿಸ್ ಮತ್ತು ಭದ್ರತಾ ಕಾರ್ಯ ಒದಗಿಸುತ್ತಿರುವ ಮೇ. ಅಪ್ಪು ಡಿಟೇಕ್ಟಿವ್ ಆ್ಯಂಡ್ ಸೆಕ್ಯೂರಿಟಿ ಸರ್ವಿಸ್ ಅವರ ಟೆಂಡರ್ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಲು ಮುಂದಾಗಿರುವುದು ಅಕ್ರಮ ನಡೆಯುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಪ್ರಕಾರ ₹ 5 ಲಕ್ಷಕ್ಕಿಂತ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಇ–ಟೆಂಡರ್ ಕರೆಯಬೇಕು. ಒಂದು ವೇಳೆ ತುರ್ತು ಇದ್ದರೆ ಅಲ್ಪಾವಧಿ ಟೆಂಡರ್ ಕರೆಯಬೇಕು. ಆದರೆ ಈ ಪ್ರಕ್ರಿಯೆಗಳನ್ನು ಗಾಳಿಗೆ ತೂರಲಾಗಿದೆ. ಈ ನಡೆಗಳು ವಿಶ್ವವಿದ್ಯಾಲಯದ ಆಂತರಿಕ ವಲಯದಲ್ಲಿಯೇ ಅನುಮಾನಕ್ಕೆ ಕಾರಣವಾಗಿದೆ.

ಮಂಗಳವಾರ ನಡೆಯಲಿರುವ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ವಿಸ್ತರಣೆಗೆ ಅನುಮೋದನೆ ಪಡೆಯಲು ಪ್ರಯತ್ನಗಳು ನಡೆಯುತ್ತಿವೆ. ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆಯುವ ಪಟ್ಟಿಯಲ್ಲಿ ಈ ವಿಷಯ ಸಹ ಇದೆ‌.

2020ರ ನವೆಂಬರ್ 7ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ನಿಯಮಾನುಸಾರ ಟೆಂಡರ್ ಸಮಿತಿಯ ಗಮನಕ್ಕೆ ತಂದು ಕ್ರಮಕೈಗೊಳ್ಳುವಂತೆ ತೀರ್ಮಾನಿಸಲಾಗಿತ್ತು. 2020ರ ನವೆಂಬರ್ 25ರಂದು ನಡೆದ ಟೆಂಡರ್ ಸಮಿತಿ ಸಭೆಯಲ್ಲಿ ಎರಡೂ ಸಂಸ್ಥೆಗಳ ಟೆಂಡರ್ ಅವಧಿಯನ್ನು 2020ರ ಡಿಸೆಂಬರ್ 7ರಿಂದ ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸಲು ಶಿಫಾರಸು ಮಾಡಲಾಗಿದೆ.

ಲಾಕ್‌ಡೌನ್ ತೆರವಾದ ತರುವಾಯ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳು ವಿವಿಧ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಟೆಂಡರ್‌ಗಳನ್ನು ಕರೆದಿವೆ. ಈ ಸಮಯಕ್ಕೆ ಟೆಂಡರ್ ಮುಗಿಯುತ್ತದೆ ಎನ್ನುವುದು ತಿಳಿದಿದ್ದರೂ ತುಮಕೂರು ವಿವಿ ವಿಳಂಬ ಮಾಡಿದ್ದು ಏಕೆ, ವಿಸ್ತರಣೆಗೆ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆಯುವುದು ಕಾನೂನು ಬದ್ಧವೇ, ಒಂದು ವೇಳೆ ಅನುಮೋದನೆ ಪಡೆದರೆ ಅದು ಊರ್ಜಿತವಾಗುತ್ತದೆಯೇ ಎನ್ನುವ ಪ್ರಶ್ನೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT