ಭಾನುವಾರ, ಆಗಸ್ಟ್ 14, 2022
26 °C
ಮೂರು ವರ್ಷದೊಳಗೆ ಚಾಲನೆ: 75 ಸಾವಿರ ಜನರಿಗೆ ಉದ್ಯೋಗ

₹85 ಸಾವಿರ ಕೋಟಿ ವೆಚ್ಚದಲ್ಲಿ ಜವಳಿ ಪಾರ್ಕ್: ಸಂಸದ ಬಸವರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ತಾಲ್ಲೂಕು ಅತ್ಯಂತ ಬರಪೀಡಿತ ಪ್ರದೇಶವಾಗಿದ್ದು, ಮುಂದಿನ 3 ವರ್ಷದೊಳಗೆ ತಾಲ್ಲೂಕಿನ 1,100 ಎಕೆರೆ ಪ್ರದೇಶದಲ್ಲಿ ₹85 ಸಾವಿರ ಕೋಟಿ ವೆಚ್ಚದಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಜಿ.ಎಸ್.ಬಸವರಾಜು ಭರವಸೆ ನೀಡಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲ್ಲೂಕಿನಿಂದ ಪ್ರತಿದಿನ ಸಾವಿರಾರು ಕಾರ್ಮಿಕರು ಉದ್ಯೋಗ ಅರಸಿ ದೊಡ್ಡಾಬಳ್ಳಾಪುರ, ಬೆಂಗಳೂರು ಸೇರಿದಂತೆ ಸುತ್ತಮುತ್ತಲ ನಗರಗಳಿಗೆ ಹೋಗುತ್ತಿದ್ದಾರೆ. ಇದನ್ನು ಮನಗಂಡು ತಾಲ್ಲೂಕಿಗೆ ಉದ್ಯೋಗ ಒದಗಿಸಿ ಕೊಡುವ ಉದ್ದೇಶದಿಂದ ಜವಳಿ ಪಾರ್ಕ್‌ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗಿದೆ. ಮುಂದಿನ 3 ವರ್ಷದೊಳಗೆ ಯೋಜನೆಗೆ ಚಾಲನೆ ನೀಡಲಾಗುವುದು. ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಸುಮಾರು 75 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಈಗಾಗಲೇ ಸ್ಥಳ ಗುರುತಿಸಲಾಗಿದೆ ಎಂದರು.
ಅಸಂಘಿಟಿತ ಕಾರ್ಮಿಕರಿಗೆ ₹1 ಲಕ್ಷ ಕೋಟಿ ಅನುದಾನ ನೀಡಿ 85 ಕೋಟಿ ಕಾರ್ಮಿಕರು, ಮಧ್ಯಮ ವರ್ಗದವರಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಕಾರ್ಮಿಕ ಇಲಾಖೆಯಿಂದ ಜಿಲ್ಲೆಗೆ 7 ಸಾವಿರ ದಿನಸಿ ಕಿಟ್ ನೀಡಿದ್ದು, ಅದರಲ್ಲಿ ಮಧುಗಿರಿಗೆ 3 ಸಾವಿರ ಕಿಟ್ ನೀಡಿದ್ದೇನೆ. ಎತ್ತಿನ ಹೊಳೆ ಯೋಜನೆಯ ಮೂಲಕ ತಾಲ್ಲೂಕಿನ ಕೆರೆಗಳಿಗೆ 1.5 ಟಿಎಂಸಿ ನೀರು ಹರಿಯಲಿದ್ದು, ಇದರ ಜೊತೆಗೆ ಗೂಬಲಗುಟ್ಟೆ ಸಮೀಪ ಡ್ಯಾಂ ನಿರ್ಮಿಸಿ ವಿವಿಧ ಮೂಲಗಳಿಂದ 3 ಟಿಎಂಸಿ ನೀರು ತಂದು ಒಟ್ಟು 4.5 ಟಿಎಂಸಿ ನೀರು ಸಂಗ್ರಹಿಸಿ ಪುರವರ ಬಳಿ ಕೆರೆ ವಿಸ್ತರಿಸಿದ್ದಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.

ಕಾರ್ಮಿಕ ಇಲಾಖೆಯ ಕಲ್ಯಾಣಾಧಿಕಾರಿ ಸುಭಾಷ್, ಪುರಸಭಾಧ್ಯಕ್ಷ ತಿಮ್ಮರಾಜು, ಉಪಾಧ್ಯಕ್ಷ ರಾಧಿಕಾ ಆನಂದಕೃಷ್ಣ, ಕೇಂದ್ರದ ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಪ್ರಸಾದ್, ಉಪತಹಶೀಲ್ದಾರ್ ವರದರಾಜ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ, ಪುರಸಭೆ ಸದಸ್ಯರಾದ ಲಾಲಪೇಟೆ ಮಂಜುನಾಥ್, ಸುಜಾತ, ನಟರಾಜು, ಆಸಿಯಾ ಬಾನು, ಮುಖಂಡರಾದ ಎಂ.ಎಸ್. ಶಂಕರನಾರಾಯಣ್, ಎಂ.ಜಿ. ಉಮೇಶ್, ಎಂ.ವಿ. ಮಂಜುನಾಥ್, ಎಂ.ಜಿ. ಶ್ರೀನಿವಾಸ್ ಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು