ಶನಿವಾರ, ಡಿಸೆಂಬರ್ 3, 2022
26 °C

ಆಡಳಿತಾಧಿಕಾರಿ ವಜಾಕ್ಕೆ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಒಕ್ಕಲಿಗರ ಸಂಘಕ್ಕೆ ಷೇರು ಹಣ ಕಟ್ಟಿದ ಎಲ್ಲರಿಗೂ ಸದಸ್ಯತ್ವ ನೀಡಬೇಕು, ಸಂಘದ ಆಡಳಿತಾಧಿಕಾರಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿ ಒಕ್ಕಲಿಗ ಸಮುದಾಯದ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಂಘದ ಚುನಾವಣೆ ವಿಚಾರದಲ್ಲಿ ಆಡಳಿತಾಧಿಕಾರಿ ಪಕ್ಷಪಾತದಿಂದ ನಡೆದುಕೊಳ್ಳುತ್ತಿದ್ದಾರೆ. 2022ರ ಮಾರ್ಚ್‌ 31ಕ್ಕೆ ಸಂಘದ ಆಡಳಿತಾವಧಿ ಪೂರ್ಣಗೊಂಡಿದ್ದು, ಸಹಕಾರ ಇಲಾಖೆಯು ಆಡಳಿತಾಧಿಕಾರಿಯನ್ನು ನೇಮಿಸಿದೆ. ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್‌ ಆದೇಶ ಮಾಡಿದೆ. ಆದರೆ ಈ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಷೇರು ಹಣ ಹೂಡಿಕೆ ಮಾಡಿ, 2008-09ನೇ ಸಾಲಿನಿಂದಲೂ ಸದಸ್ಯತ್ವಕ್ಕಾಗಿ ಕಾಯುತ್ತಿರುವ ಸುಮಾರು 22 ಸಾವಿರ ಜನರಿಗೆ ಸದಸ್ಯತ್ವ ಕೊಟ್ಟಿಲ್ಲ. ಬದಲಾಗಿ ಕೆಲವು ವ್ಯಕ್ತಿಗಳು ಶಿಫಾರಸು ಮಾಡಿರುವ, ಈಚೆಗೆ ಷೇರು ಶುಲ್ಕ ಪಾವತಿಸಿರುವ 500 ಜನರಿಗೆ ಮಾತ್ರ ಸದಸ್ಯತ್ವ ನೀಡುವ ಮೂಲಕ ಅವರನ್ನೇ ಮತದಾರರೆಂದು ಘೋಷಿಸಿ, ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ದೂರಿದರು.

ಆಡಳಿತಾಧಿಕಾರಿ ಕೆಲವರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಹಣ ಕಟ್ಟಿದ ಎಲ್ಲರಿಗೂ ಸದಸ್ಯತ್ವ ನೀಡಬೇಕು. ಮತದಾನ ಮಾಡಲು ಅರ್ಹರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ವಾಗ್ವಾದ: ಸಹಕಾರ ಇಲಾಖೆಯ ಎನ್.ವೆಂಕಟೇಶ್‌ ಮತ್ತು ಮುಖಂಡರ ಮಧ್ಯೆ ವಾಗ್ವಾದ ನಡೆಯಿತು. ಆಡಳಿತಾಧಿಕಾರಿ ಜತೆ ಸೇರಿ ಅರ್ಹರಿಗೆ ಸದಸ್ಯತ್ವ ನೀಡುವುದನ್ನು ತಪ್ಪಿಸುತ್ತಿದ್ದೀರಿ ಎಂದು ಜೋರು ಧ್ವನಿಯಲ್ಲಿ ಮಾತನಾಡಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ವಿ.ಅಜಯ್‌ ವಾತಾವರಣ ತಿಳಿಗೊಳಿಸಿದರು.

ಮುಖಂಡ ಬ್ಯಾಟರಂಗೇಗೌಡ, ಬೆಳ್ಳಿ ಲೋಕೇಶ್, ದೇವಪ್ರಕಾಶ್, ರವಿಗೌಡ, ಚಿಕ್ಕರಂಗಣ್ಣ, ಕೆಂಪರಾಜು, ಕೈದಾಳ ರಮೇಶ್, ಸತ್ಯಪ್ಪ, ವಿಜಯಕುಮಾರ್, ಮಂಜುನಾಥ ಗೌಡ, ಶ್ರೀನಿವಾಸಕುಮಾರ್, ಮನೋಹರಗೌಡ, ಲಕ್ಕೇಗೌಡ, ಕುಣಿಗಲ್ ಶ್ರೀನಿವಾಸಗೌಡ, ಚಿಕ್ಕಸಾರಂಗಿ ಕುಮಾರ್‌, ಪಾಲಿಕೆ ಸದಸ್ಯ ಧರಣೇಂದ್ರಕುಮಾರ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು