ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಅಧಿಕಾರಿಗಳಿಗೆ ದಂಡ ವಿಧಿಸಿದ ಆಯೋಗ

Published 18 ಫೆಬ್ರುವರಿ 2024, 6:00 IST
Last Updated 18 ಫೆಬ್ರುವರಿ 2024, 6:00 IST
ಅಕ್ಷರ ಗಾತ್ರ

ತುಮಕೂರು: ಸೇವಾ ನ್ಯೂನತೆ, ಕರ್ತವ್ಯ ಲೋಪವೆಸಗಿರುವ ಆರೋಪದ ಮೇಲೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮೂವರು ಅಧಿಕಾರಿಗಳಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಎಸ್‌ಬಿಐ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆ ಶಾಖೆಯ ವ್ಯವಸ್ಥಾಪಕ, ತುಮಕೂರಿನ ವಿಭಾಗೀಯ ವ್ಯವಸ್ಥಾಪಕ, ಬೆಂಗಳೂರಿನ ಪ್ರಾದೇಶಿಕ ವ್ಯವಸ್ಥಾಪಕರು ಈ ದಂಡ ಮೊತ್ತವನ್ನು ಕಟ್ಟಿಕೊಡಬೇಕಿದೆ.

ದೂರುದಾರರಾದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆ ಹೋಬಳಿ ಸಾಸಲು ಗ್ರಾಮದ ಎಸ್.ಗಣೇಶ್ ಅವರಿಗೆ ಬ್ಯಾಂಕ್ ಅಧಿಕಾರಿಗಳು ವೈಯಕ್ತಿಕವಾಗಿ ಅಥವಾ ಒಟ್ಟಾಗಿ ದಂಡ ಪಾವತಿಸುವಂತೆ ಆಯೋಗ ಈಚೆಗೆ ನೀಡಿದ ಆದೇಶದಲ್ಲಿ ತಿಳಿಸಿದೆ.

ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯದಿದ್ದರೂ ಬೇರೆಯವರಿಗೆ ಹಣ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟ ದಿನದಿಂದ ಈವರೆಗೆ ಶೇ 9ರ ಬಡ್ಡಿಯನ್ನು ಸೇರಿಸಿ ₹46,500 ಪಾವತಿಸಬೇಕು. ಬ್ಯಾಂಕ್ ಖಾತೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಹಣವಿದ್ದರೂ ಪಿಎಂಜೆಜೆಬಿವೈ ವಿಮಾ ಪಾಲಿಸಿಗೆ ಪ್ರೀಮಿಯಂ ಮೊತ್ತ ಕಡಿದ ಮಾಡಿ ಪಾವತಿಸದ ಕಾರಣಕ್ಕೆ ₹2 ಲಕ್ಷ ಪರಿಹಾರವನ್ನು 2023 ಜನವರಿ 31ರಿಂದ ಶೇ 9ರಷ್ಟು ಬಡ್ಡಿ ಸೇರಿಸಿ ನೀಡಬೇಕು. ₹50 ಸಾವಿರ ಪರಿಹಾರ, ದಂಡನಾತ್ಮಕ ಹಾನಿಗಾಗಿ ₹25 ಸಾವಿರ, ಕೋರ್ಟ್ ವೆಚ್ಚವಾಗಿ ₹10 ಸಾವಿರ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಹಿನ್ನೆಲೆ: ಗಣೇಶ್ ಅವರ ತಾಯಿ ಜಯಮ್ಮ ಅವರು ಬನಶಂಕರಿದೇವಿ ಸ್ವಸಹಾಯ ಸಂಘದ ಸದಸ್ಯರಾಗಿದ್ದರು. ಸಂಘದ ಹೆಸರಿನಲ್ಲಿ ₹6.50 ಲಕ್ಷ ಸಾಲವನ್ನು ಬ್ಯಾಂಕ್ ಮಂಜೂರು ಮಾಡಿತ್ತು. ಅದರಲ್ಲಿ ಜಯಮ್ಮ ಖಾತೆಗೆ ₹50 ಸಾವಿರ ಜಮೆ ಮಾಡಲಾಗಿತ್ತು. ಬ್ಯಾಂಕ್ ಖಾತೆಯಿಂದ ಅವರು ಹಣ ಪಡೆದುಕೊಳ್ಳದಿದ್ದರೂ ಮತ್ತೊಬ್ಬರು ವಿವಿಧ ಹಂತಗಳಲ್ಲಿ ₹46,500 ಹಣವನ್ನು ಡ್ರಾ ಮಾಡಿಕೊಂಡಿರುವುದು ಪತ್ತೆಯಾಗಿತ್ತು. ಈ ಬಗ್ಗೆ ದೂರು ನೀಡಿದ್ದರೂ ಬ್ಯಾಂಕ್ ಅಧಿಕಾರಿಗಳು ಸ್ಪಂದಿಸಿ, ಹಣ ವಾಪಸ್ ಕೊಡಿಸಲಿಲ್ಲ ಎಂದು ಜಯಮ್ಮ ಪುತ್ರ ಗಣೇಶ್ ಆಯೋಗದ ಮೆಟ್ಟಿಲೇರಿದ್ದರು.

‘ಬ್ಯಾಂಕ್ ಖಾತೆ ತೆರೆದ ಸಮಯದಲ್ಲಿ ತಮ್ಮ ತಾಯಿ ಪಿಎಂಜೆಜೆಬಿವೈ ವಿಮೆ ಮಾಡಿಸಿದ್ದರು. ವಿಮೆ ಪ್ರೀಮಿಯಂ ಮೊತ್ತವನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತ ಮಾಡಿ ಪಾವತಿಸಲು ಅವಕಾಶ ನೀಡಲಾಗುತಿತ್ತು. 2022 ನವೆಂಬರ್ 19ರಂದು ತಮ್ಮ ತಾಯಿ ಜಯಮ್ಮ ನಿಧನ ಹೊಂದಿದರು. ನಂತರ ವಿಮೆ ಹಣ ಪಡೆದುಕೊಳ್ಳಲು ಮುಂದಾದಾಗ ಬ್ಯಾಂಕ್‌ನಿಂದ ಹಣ ಕಡಿತ ಮಾಡಿ ಪಾವತಿಸದಿರುವುದು ತಿಳಿಯಿತು. ತಾಯಿ ಖಾತೆಯಲ್ಲಿ ಅಗತ್ಯ ಪ್ರಮಾಣದ ಹಣ ಇದ್ದರೂ ಪ್ರೀಮಿಯಂ ಮೊತ್ತವನ್ನು ಕಡಿತ ಮಾಡದೆ ಬ್ಯಾಂಕ್ ಅಧಿಕಾರಿಗಳು ಲೋಪವೆಸಗಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದರು.

ದೂರುದಾರರ ಮನವಿ ಹಾಗೂ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗವು ಬ್ಯಾಂಕ್ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪರಿಹಾರಕ್ಕೆ ಆದೇಶಿಸಿದೆ. ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯರಾದ ಎನ್.ಕುಮಾರ, ನಿವೇದಿತಾ ರವೀಶ್ ನೇತೃತ್ವದ ಪೀಠ ಈ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT