ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಯಕನಹಳ್ಳಿ: ದ್ವಿಗುಣಗೊಳ್ಳುತ್ತಿದೆ ಅಡಿಕೆ ಬೆಳೆ ಕ್ಷೇತ್ರ

ಚಿಕ್ಕನಾಯಕನಹಳ್ಳಿ: ಸಿರಿಧಾನ್ಯದ ಕಣಜವೆಂಬ ಮೆರಗು ಮರೆಯಾಗುವ ಅತಂಕ
Last Updated 10 ಜನವರಿ 2022, 6:30 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಅದೊಂದು ಕಾಲವಿತ್ತು. ತಾಲ್ಲೂಕು ವ್ಯಾಪ್ತಿಯಲ್ಲಿ ರಾಗಿ, ನವಣೆ ಸೇರಿದಂತೆ ಸಿರಿಧಾನ್ಯಗಳದ್ದೇ ಕಾರುಬಾರು… ಒಂದು ರೀತಿಯಲ್ಲಿ ಸಿರಿಧಾನ್ಯದ ಕಣಜವೆಂದೇ ಹೆಸರಾಗಿತ್ತು. ಆದರೆ ಈಗ ಸನ್ನಿವೇಶ ಬದಲಾಗಿದ್ದು ಎಲ್ಲಿ ನೋಡಿದರೂ ಅಡಿಕೆ ತೋಟವೇ ಕಾಣಸಿಗುತ್ತದೆ. ತಾಲ್ಲೂಕಿನ ಶೇ 50ರಷ್ಟು ರೈತರು ಆಹಾರ ಧಾನ್ಯಗಳನ್ನು ಖರೀದಿಸುವ ಮಟ್ಟಿಗೆ ಬದಲಾಗಿದೆ.

ರಾಗಿ, ಜೋಳ, ನವಣೆಯನ್ನು ಯಾವುದೇ ನೀರಾವರಿ ಆಶ್ರಯವಿಲ್ಲದೆ ಮಳೆಗಾಲದಲ್ಲಿ ಸಲೀಸಾಗಿ ಬೆಳೆದು ಮನೆಗಾಗುವಷ್ಟು ಇಟ್ಟುಕೊಂಡು ಉಳಿದದ್ದನ್ನು ಮಾರಾಟ ಮಾಡಿ ಜನರ ಹೊಟ್ಟೆ ತುಂಬಿಸುತ್ತಿದ್ದರು. ದಶಕದಿಂದ ಕೃಷಿ ತನ್ನ ಮಗ್ಗುಲು ಬದಲಿಸಿದ್ದು, ಆರ್ಥಿಕ ಬೆಳೆಯ ಬಲವಾದ ಬೇರು ರೈತರ ಎದೆಯೊಳಗೆ ಹರಡಿಕೊಳ್ಳುತ್ತಿವೆ. ಆಹಾರ ಅಭದ್ರತೆಯ ಸವಾಲನ್ನು ತಂದೊಡ್ಡುವ ಲಕ್ಷಣಗಳು ಗೋಚರಿಸುತ್ತಿವೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಒಂದು ಕಡೆ ಮಲೆನಾಡಿನ ಸೆರಗಾದರೆ ಮತ್ತೊಂದೆಡೆ ಬಯಲುಸೀಮೆಯ ನೆರಳು. ಅರೆಮಲೆನಾಡು ಪ್ರದೇಶವೆನಿಸಿ ತಗ್ಗು ಪ್ರದೇಶಗಳಲ್ಲಿ ಮಾತ್ರ ತೆಂಗು ಕಂಗೊಳಿಸುತ್ತಿತ್ತು. ತೆಂಗು ಇಲ್ಲಿನ ಹವಾಮಾನಕ್ಕೆ ಹೊಂದಿಕೊಂಡು ರೈತರ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ 20 ವರ್ಷದ ಹಿಂದೆ ಕೊಳವೆಬಾವಿ ಸಂಸ್ಕೃತಿ ಬಂದ ಮೇಲೆ ತೆಂಗಿನ ಆಗರವೇ ಆಗಿ ಬಿಟ್ಟಿದೆ. ಜೊತೆಗೆ ಅಧಿಕ ನೀರು ಬೇಡುವ ಅಡಿಕೆ ಬೆಳೆಯುವ ಮಹದಾಸೆ ರೈತರಲ್ಲಿ ಹೆಚ್ಚಿದೆ.

10 ವರ್ಷದ ಹಿಂದೆ ಒಂದು ಹೆಕ್ಟೇರ್‌ ಕೂಡ ಇರದಿದ್ದ ಅಡಿಕೆ ವ್ಯಾಪ್ತಿ ಈಗ 6,568 ಹೆಕ್ಟೇರ್‌ಗೆ ವ್ಯಾಪಿಸಿದೆ. ಪ್ರತಿ ವರ್ಷ 200 ಹೆಕ್ಟೇರ್‌ ಅಡಿಕೆ ಪ್ರದೇಶ ವಿಸ್ತರಣೆಯಾಗುತ್ತಿದೆ ಎಂದು ರೈತರ ಅಂಕಿ ಅಂಶಗಳು ಹೇಳುತ್ತಿವೆ. ರಾಗಿ, ನವಣೆ, ಸಾಮೆ ಬೆಳೆಯುತ್ತಿದ್ದ ಪ್ರದೇಶಗಳೆಲ್ಲ ಅಡಿಕೆಮಯವಾಗುತ್ತಿದೆ.

ಕಳೆದ ವರ್ಷ ಹೇಮಾವತಿ ಕಾಲಿಟ್ಟ ನಂತರ ಒಂದಷ್ಟು ಅಡಿಕೆ ಬೆಳೆಯುವ ಆಸೆ ಚಿಗುರೊಡೆದಿತ್ತು. ಪ್ರಸಕ್ತ ವರ್ಷ ಹೇಮಾವತಿ ಜತೆ ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿ ಹಲವು ಕೆರೆ, ಕಟ್ಟೆಗಳು ತುಂಬಿರುವ ಕಾರಣ ಮತ್ತಷ್ಟು ರೈತರು ಅಡಿಕೆ ಬೆಳೆಯಲು ಉತ್ಸುಕರಾಗಿದ್ದಾರೆ. ಬತ್ತಿ ಹೋಗಿದ್ದ ಎಷ್ಟೋ ಕೊಳವೆಬಾವಿಗಳು ಮರುಜೀವ ಪಡೆದುಕೊಂಡಿರುವುದು ಸಹ ಅಡಿಕೆ ಬೆಳೆಯುವ ಆಸೆಗೆ ಕಸುವು ತುಂಬಿದೆ.

‘‌ಹಲವು ವರ್ಷಗಳಿಂದಲೂ ಬರಪೀಡಿತ ಪ್ರದೇಶವೆಂದೇ ಘೋಷಿಸಲ್ಪಡುತ್ತಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಧಿಕ ಅಡಿಕೆ ನಾಟಿಯಿಂದ ಮತ್ತಷ್ಟು ಸಂಕಷ್ಟದ ಕೂಪಕ್ಕೆ ಜಾರುತ್ತಿದೆ. ವರ್ಷದಿಂದ ವರ್ಷಕ್ಕೆ ಸಿರಿಧಾನ್ಯದ ಕಣಜವಾಗಿದ್ದ ತಾಲ್ಲೂಕು ವ್ಯಾಪ್ತಿ ತೆಂಗು-ಅಡಿಕೆಯ ಕಣಜವಾಗುತ್ತಿದೆ’ ಎನ್ನುತ್ತಾರೆ ನಿವೃತ್ತ ಶಿಕ್ಷಕ ರಾಮಕೃಷ್ಣಪ್ಪ.

ಸಿರಿಧಾನ್ಯ ಬೆಳೆಗೆ ಉತ್ತೇಜನ ಅಗತ್ಯ
ಇತ್ತೀಚಿನ ಕೃಷಿ ಬದುಕು ಹೆಚ್ಚು ಯಾಂತ್ರೀಕರಣಗೊಳ್ಳುತ್ತಿರುವ ಕಾರಣ ಹೆಚ್ಚು ಖರ್ಚು ತಗುಲುತ್ತಿದೆ. ಅದರಲ್ಲೂ ರಾಗಿ, ನವಣೆ, ಸಾಮೆಯಂತಹ ಬೆಳೆ ಬೆಳೆಯಲು ಕೂಲಿಗಳ ಕೊರತೆಯಿಂದ ಭೂಮಿಗೆ ಹಾಕಿದ ಬಂಡವಾಳ ವಾಪಸ್‌ ಬರುತ್ತಿಲ್ಲ. ಇದರಿಂದ ಬಹಳಷ್ಟು ರೈತರು ಆಹಾರ ಧಾನ್ಯ ಬೆಳೆಯುವುದನ್ನು ಬಿಟ್ಟು ಆರ್ಥಿಕ ಬೆಳೆಗಳತ್ತ ವಾಲುತ್ತಿದ್ದಾರೆ. ಸರ್ಕಾರ ಸಿರಿಧಾನ್ಯಗಳನ್ನು ಬೆಳೆಯಲು ಉತ್ತೇಜಿಸುವ ಯೋಜನೆಗಳನ್ನು ಜಾರಿಗೆ ತರಬೇಕು.
-ಎಸ್.ಶಿವರಾಜು, ರೈತ ಅಗ್ರಿ ಕ್ಲಿನಿಕ್‌, ಹುಳಿಯಾರು

ಆಹಾರ ಭದ್ರತೆಗೆ ಸವಾಲು
ಸಿರಿಧಾನ್ಯಗಳನ್ನು ಬಳಸುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಹೆಚ್ಚು ಖರ್ಚು ಮಾಡಿ ಬೆಳೆದರೂ ತಿನ್ನುವವರಿಲ್ಲದೆ ಬೆಲೆ ಸಿಗುತ್ತಿಲ್ಲ. ಬೆಳೆದ ಒಂದೆರೆಡು ಚೀಲಗಳನ್ನು ಮಾರಾಟ ಮಾಡಿ ಸುಮ್ಮನಾಗಿ ಬಿಡುತ್ತಾರೆ. ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಿರಿಧಾನ್ಯಗಳು ಬರುವುದು ಶೇ 80ರಷ್ಟು ಕಡಿಮೆಯಾಗಿದೆ. ಮುಂದೆ ಇದು ಆಹಾರ ಅಭದ್ರತೆ ತರುವ ಸಾಧ್ಯತೆಯಿದೆ.
-ಎನ್.ಇಂದಿರಮ್ಮ, ಸುಹಾಸ್‌ ಸಿರಿಧಾನ್ಯ ಸಂಸ್ಕರಣಾ ಘಟಕ, ಕಂದೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT