ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಎಂಡಿಎನ್ ರೈತ ಹೋರಾಟದ ನೆನಪು

Last Updated 14 ಫೆಬ್ರುವರಿ 2021, 4:06 IST
ಅಕ್ಷರ ಗಾತ್ರ

ತುಮಕೂರು: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಬದುಕಿದ್ದರೆ ಕೃಷಿ ಕಾಯ್ದೆ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಹೋರಾಟದ ನೇತೃತ್ವ ವಹಿಸುತ್ತಿದ್ದರು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ನೆನಪು ಮಾಡಿಕೊಂಡರು.

ವಿಜ್ಞಾನ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ರೈತ ಸಂಘದ ಸಂಸ್ಥಾಪಕ ಪ್ರೊ.ನಂಜುಂಡಸ್ವಾಮಿ 85ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆ ವಿರುದ್ಧ ದೊಡ್ಡ ಮಟ್ಟದ ಹೋರಾಟ ರೂಪಿಸುತ್ತಿದ್ದರು ಎಂದರು.

ವಿದೇಶದಲ್ಲಿ ವಿದ್ಯಾಭ್ಯಾಸ ಪಡೆದು ಭಾರತಕ್ಕೆ ಹಿಂದಿರುಗಿದ ಸಮಾಜವಾದಿ ಚಿಂತಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅನೇಕ ಚಳವಳಿಯಲ್ಲಿ ಭಾಗವಹಿಸಿದರು. 1975ರಲ್ಲಿ ರೈತ ಸಂಘ ಸ್ಥಾಪಿಸಿ, ತಮ್ಮ ವೈಚಾರಿಕ ಚಿಂತನೆಗಳ ಮೂಲಕ ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಸಾವಿರಾರು ಹೋರಾಟಗಳನ್ನು ಸಂಘಟಿಸಿ, ರೈತರ ಸಮಸ್ಯೆಗಳಿಗೆ ಪರಿಹಾರ ರೂಪಿಸಿದ್ದರು ಎಂದು ಅಭಿಪ್ರಾಯಪಟ್ಟರು.

ವಿಜ್ಞಾನ ಪರಿಷತ್ ಅಧ್ಯಕ್ಷ ಸಿ.ಯತಿರಾಜು, ‘ದೇಶದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ದೇಶ, ವಿದೇಶಗಳ ಗಮನ ಸೆಳೆದಿದೆ. ರೈತರ ಇಂತಹ ಪರಿಸ್ಥಿತಿಯನ್ನು ಮೊದಲೇ ಗ್ರಹಿಸಿದ್ದ ಪ್ರೊ.ನಂಜುಂಡಸ್ವಾಮಿ, ಗ್ಯಾಟ್ ಒಪ್ಪಂದದ ವಿರುದ್ಧ ದೇಶ, ವಿದೇಶದಲ್ಲಿ ರೈತರನ್ನು ಸಂಘಟಿಸುವ ಕೆಲಸ ಮಾಡಿದ್ದರು. ಕೃಷಿ ಕಾರ್ಪೋರೇಟ್‍ನಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಮನಗಂಡು, ಎಚ್ಚರಿಸಿದ್ದರು. ಅವರ ಹೋರಾಟದ ದಾರಿಯಲ್ಲೇ ನಾವು ಸಾಗಿಸಬೇಕಿದೆ’ ಎಂದು ಹೇಳಿದರು.

ಕೇಂದ್ರ, ರಾಜ್ಯದ ಕರಾಳ ಕೃಷಿ ಕಾನೂನಿನ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ಇನ್ನಷ್ಟು ಸಂಘಟಿತವಾಗಬೇಕಿದೆ. ವಿಸ್ತಾರವಾಗಿ ಹೋರಾಟ ಕಟ್ಟುವ ಮೂಲಕ ಹಿಮ್ಮೆಟ್ಟಿಸುವ ಪ್ರಯತ್ನ ಮಾಡಬೇಕಿದೆ ಎಂದರು.

ಜನಸಂಗ್ರಾಮ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪಂಡಿತ್ ಜವಾಹರ್, ರೈತ ಸಂಘಟನೆ ಮುಖಂಡರಾದ ಚಿರತೆ ಚಿಕ್ಕಣ್ಣ, ರವೀಶ್, ಶಂಕರಪ್ಪ, ರಾಜಣ್ಣ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT