ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಕ್ ಕೆನಾಲ್ ಉದ್ದೇಶವೇ ಮಾಗಡಿಗೆ ನೀರು ಹರಿಸುವುದು

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಆರೋಪ
Published 11 ಜುಲೈ 2024, 6:08 IST
Last Updated 11 ಜುಲೈ 2024, 6:08 IST
ಅಕ್ಷರ ಗಾತ್ರ

ಕುಣಿಗಲ್: ‘ಲಿಂಕ್ ಕೆನಾಲ್ ತಾಲ್ಲೂಕಿನ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಲ್ಲ, ಶಾಶ್ವತ ಮರಣ ಶಾಸನ. ಶಾಸಕ ಡಾ.ರಂಗನಾಥ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ರಾಮನಗರ ಜಿಲ್ಲೆ ರೈತರ ಹಿತಾಸಕ್ತಿಯಿಂದ ಲಿಂಕ್ ಕೆನಾಕ್‌ಗೆ ಚಾಲನೆ ನೀಡಿದ್ದಾರೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಆರೋಪಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಲಾ ವಲಯದ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ತಾಲ್ಲೂಕಿಗೆ 3.03 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಮಾಗಡಿ ತಾಲ್ಲೂಕಿಗೆಂದೇ ಹೆಚ್ಚುವರಿ ನೀರು ಹಂಚಿಕೆ ಮಾಡಿಲ್ಲ. ಕುಣಿಗಲ್ ತಾಲ್ಲೂಕಿಗೆ ಹಂಚಿಕೆ ಮಾಡಿರುವ ನೀರಿನಲ್ಲಿ ಮಾಗಡಿಗೂ ಹಂಚಬೇಕಿದೆ. ರಾಮನಗರ ಜಿಲ್ಲೆಗೆ ನೀರು ಹರಿಸಲು ಲಿಂಕ್ ಕೆನಾಲ್ ಯೋಜನೆ ಜಾರಿಯಾಗಿದೆ ಎಂದು ದೂರಿದರು.

ಜಿಲ್ಲೆಯ ಯಾವ ಶಾಸಕರೂ ಕುಣಿಗಲ್‌ಗೆ ನೀರು ಹರಿಯುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಎಲ್ಲರ ಆಕ್ಷೇಪವಿರುವುದು ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗುವ ಬಗ್ಗೆ. ತಾಲ್ಲೂಕಿಗೆ ಅನುಕೂಲವಾಗುತ್ತಿದ್ದ ವಿತರಣಾ ನಾಲೆಯ 26ರನ್ನು ಕೈ ಬಿಟ್ಟು, ನೇರವಾಗಿ ನೀರನ್ನು ತೆಗೆದುಕೊಂಡು ಹೋಗುವ ಹುನ್ನಾರವಿದೆ ಎಂದರು.

ಲಿಂಕ್ ಕೆನಾಲ್‌ಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿಲ್ಲ. ತಾಲ್ಲೂಕಿನ ಪಾಲಿನ ನೀರು ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗುವ ಬಗ್ಗೆ ತೀವ್ರ ವಿರೋಧವಿದೆ. ಮಾಗಡಿಗಾಗಿ ಹೆಚ್ಚುವರಿ ನೀರನ್ನು ಅಧಿಕೃತವಾಗಿ ಹಂಚಿಕೆ ಮಾಡಿಸಿಕೊಳ್ಳಲಿ. ಯೋಜನೆಗೆ ವಿತರಣಾ ನಾಲೆ 26ರನ್ನು ಸೇರಿಸಬೇಕು. ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನೀಡಬೇಕು. ಕೊತ್ತಗೆರೆ ಕೆರೆಗೆ ನೀರು ಹರಿಸಿ ಕೊತ್ತಗೆರೆ ಹೋಬಳಿಯ ಕೆರೆಗಳಿಗೆ ಏತನೀರಾವರಿ ಯೋಜನೆ ಮೂಲಕ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನ ನೀರಾವರಿ ವಿಚಾರದಲ್ಲಿ ಶಾಸಕರು, ಮಾಜಿ ಸಂಸದರಿಂದಾಗಿರುವ ಅನ್ಯಾಯಗಳನ್ನು ತಡೆಯಲು ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ ನಂತರ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಗೋಷ್ಠಿಯಲ್ಲಿ ಜೆಡಿಎಸ್ ಹೋಬಳಿವಾರು ಅಧ್ಯಕ್ಷರಾದ ರಂಗಸ್ವಾಮಿ, ಜಯಣ್ಣ, ಜಗದೀಶ್, ನಿಡಸಾಲೆ ಯೋಗಿಶ್, ಅರೆಪಾಳ್ಯ ಮಂಜುನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT