ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೇವಿನ ಬರ ನೀಗಿಸಿದ ಮಳೆ

Published 12 ಜೂನ್ 2024, 6:00 IST
Last Updated 12 ಜೂನ್ 2024, 6:00 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯಾಗುತ್ತಿರುವುದರಿಂದ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿರುವ ಜೊತೆಗೆ ದನಕರು, ಮೇಕೆ, ಕುರಿಗಳ ಮೇವಿನ ಬರ ನೀಗುತ್ತಿದೆ.

ಎಲ್ಲೆಡೆಯೂ ಹಸಿರು ಚಿಗುರಿ ಮೇಯಲು ಅನುಕೂಲವಾಗಿದೆ. ಹಳ್ಳ ಕೊಳ್ಳಗಳಲ್ಲಿ ನೀರು ನಿಂತಿರುವುದರಿಂದ ತಕ್ಷಣಕ್ಕೆ ರೈತರಿಗೆ ಯಾವುದೇ ತೊಂದರೆ ಇಲ್ಲವಾಗಿದೆ.

ಹೊಲ, ತೋಟ, ಬದು ಹಾಗೂ ಗದ್ದೆ ಬಯಲುಗಳಲ್ಲಿ ಹಸಿರು ಚಿಗುರಿರುವ ಜೊತೆಗೆ ರೈತರು ರಾಸುಗಳ ಮೇವನ್ನು ಬಿತ್ತನೆ ಮಾಡಿಕೊಂಡಿರುವುದರಿಂದ ಮೇವಿನ ಬರ ನೀಗಿದೆ. ಗಿಡ, ಮರಗಳು ಚಿಗುರಿರುವುದರಿಂದ ಕುರಿ ಮತ್ತು ಮೇಕೆಗಳಿಗೂ ಅನುಕೂಲವಾಗಿದೆ.

ಕಳೆದ ವರ್ಷ ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಈ ಬಾರಿ ಮುಂಗಾರು ಮಳೆ ಉತ್ತಮವಾಗಿರುವುದರಿಂದ ದನ ಕರುಗಳನ್ನು ಉಳಿಸಿಕೊಳ್ಳಬಹುದು ಎಂಬ ಆಶಯದಲ್ಲಿ ಇದ್ದಾರೆ.

ತಾಲ್ಲೂಕಿನ ಹಲವೆಡೆ ರೋಗಬಾಧೆಯಿಂದ ತೆಂಗಿನ ಬೆಳೆ ಇಲ್ಲವಾಗಿತ್ತು. ನೀರಿನ ಕೊರತೆಯಿಂದ ಅಡಿಕೆ ಬೆಳೆಗೂ ಕುತ್ತು ಬಂದಿದ್ದ ಸಮಯದಲ್ಲಿ ಮಳೆ ಬಂದಿರುವುದು ರೈತರಲ್ಲಿ ಸಂತಸ ತಂದಿದೆ.

ಬರಗಾಲದಿಂದ ಮೇವು ಹಾಗೂ ಕುಡಿಯುವ ನೀರಿಗೂ ತೊಂದರೆಯಾಗಿದ್ದರಿಂದ ಮನೆಯಲ್ಲಿದ್ದ ನಾಲ್ಕು ಹಸುಗಳಲ್ಲಿ ಎರಡನ್ನು ಮಾರಾಟ ಮಾಡಿದ್ದೆ. ಈಗ ಉತ್ತಮ ಮಳೆಯಾಗಿ ಮೇವಿನ ಬರ ಇಲ್ಲವಾಗುತ್ತಿದೆ. ಸಾಧ್ಯವಾದಲ್ಲಿ ಮತ್ತೆ ಎರಡು ಹಸುಗಳನ್ನು ಖರೀದಿಸಲು ಯೋಚಿಸುತ್ತಿದ್ದೇನೆ ಎನ್ನುತ್ತಾರೆ ರೈತ ಕೆಂಪರಾಜು.

ಅನೇಕ ವರ್ಷಗಳಿಂದ ಕುರಿಗಳನ್ನು ಸಾಕಿ ಬದುಕು ಕಟ್ಟಿಕೊಂಡಿದ್ದೆ. ಈ ಬಾರಿಯ ಬರಗಾಲದಿಂದಾಗಿ ಸಂಕಷ್ಟಕ್ಕೆ ಸಿಲುಕಿ ಕುರಿಗಳನ್ನು ಮಾರಲು ನಿರ್ಧರಿಸಿದ್ದೆ. ಈಗ ಮಳೆಯಾಗಿರುವುದರಿಂದ ಕುರಿ ಮೇಯಿಸಲು ಯಾವುದೇ ತೊಂದರೆಯಾಗುತ್ತಿಲ್ಲ ಎನ್ನುತ್ತಾರೆ ಕುರಿಗಾಹಿ ತಿಮ್ಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT