ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆವಳುತ್ತಾ ಸಾಗುತ್ತಿದೆ ರಸ್ತೆ ವಿಸ್ತರಣೆ ಕಾಮಗಾರಿ

ನಾಲ್ಕು ವರ್ಷವಾದರೂ ಪೂರ್ಣಗೊಳ್ಳದ ದಬ್ಬೇಘಟ್ಟ ರಸ್ತೆ ವಿಸ್ತರಣೆ ಕಾಮಗಾರಿ l ಪರಿಹಾರ ನೀಡುವಂತೆ ಕಟ್ಟಡ ಮಾಲೀಕರ ಒತ್ತಾಯ
Last Updated 13 ಸೆಪ್ಟೆಂಬರ್ 2021, 4:19 IST
ಅಕ್ಷರ ಗಾತ್ರ

ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆ ವಿಸ್ತರಣೆ ಕಾಮಗಾರಿ ನಾಲ್ಕು ವರ್ಷದಿಂದ ತೆವಳುತ್ತಾ ಸಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ದಬ್ಬೇಘಟ್ಟ ರಸ್ತೆ ಮಾರ್ಗದಲ್ಲಿ ಶಾಲೆ, ಕಾಲೇಜು, ಬಸ್‍ ನಿಲ್ದಾಣ, ನ್ಯಾಯಾಲಯ, ಎಪಿಎಂಸಿ, ಬ್ಯಾಂಕ್, ಅಂಗಡಿ, ಅಗ್ನಿಶಾಮಕ, ತಾಲ್ಲೂಕು ಪಂಚಾಯಿತಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳು ಇರುವುದರಿಂದ ಜನಸಂದಣಿ ದಟ್ಟವಾಗಿದೆ. ಇದರಿಂದ ವಾಹನ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಶಾಸರಾಗಿದ್ದ ಅವಧಿಯಲ್ಲಿ ದಬ್ಬೇಘಟ್ಟ ರಸ್ತೆ ವಿಸ್ತರಣೆಗೆಂದು 2016-17ನೇ ಸಾಲಿನಲ್ಲಿ ಕೇಂದ್ರೀಯ ರಸ್ತೆ ನಿಧಿಯಿಂದ ತಿಪಟೂರು ವೃತ್ತದಿಂದ ಬಸ್‍ ಡಿಪೊವರೆಗಿನ 1.9 ಕಿ.ಮೀ ಡಾಂಬರ್ ರಸ್ತೆ, ತಿಪಟೂರು ವೃತ್ತದಿಂದ ಕೊಟ್ಟರು ಕೊಟ್ಟಿಗೆವರೆಗಿನ ಪೆಟ್ರೋಲ್‍ ಬಂಕ್‌ವರೆಗೆ ರಸ್ತೆಯ ಎರಡೂ ಕಡೆ 450 ಮೀಟರ್ ಒಳಚರಂಡಿ ಮತ್ತು ರಸ್ತೆ ವಿಭಜಕ ನಿರ್ಮಾಣಕ್ಕಾಗಿ ಮೊದಲ ಕಂತಿನಲ್ಲಿ ₹2 ಕೋಟಿ ಅನುದಾನ ಮಂಜೂರಾಗಿತ್ತು.

ಮಸಾಲ ಜಯರಾಂ ಶಾಸಕರಾದ ಮೇಲೆ ದಬ್ಬೇಘಟ್ಟ ರಸ್ತೆ ವಿಸ್ತರಣೆ ಕಾಮಗಾರಿಗೆ ಭೂಮಿಪೂಜೆ ನಡೆಸಿದರು. ಇದೇ ಕಾಮಗಾರಿಗೆ ಮತ್ತೆ ₹2 ಕೋಟಿ ಹೆಚ್ಚುವರಿ ಹಣ ಬಿಡುಗಡೆಯಾಗಿ ಒಟ್ಟು ₹4 ಕೋಟಿ ಅನುದಾನ ಬಂದಿದೆ.

ರಸ್ತೆ ಮಧ್ಯೆದಿಂದ ಎರಡೂ ಕಡೆ 50 ಅಡಿಗೆ ಒತ್ತುವರಿ ಕಟ್ಟಡ ತೆರವು ಮಾಡುವ ತೀರ್ಮಾನವಿತ್ತು. ಈ ಬಗ್ಗೆ ಹಲವರಿಂದ ಅಪಸ್ವರಗಳೆದ್ದವು. ಹಾಗಾಗಿ ರಸ್ತೆಯ ಇಬ್ಬದಿಯ ವರ್ತಕರು, ಅಂಗಡಿ ಮಾಲೀಕರು ತಮಗಾಗುವ ನಷ್ಟದ ಬಗ್ಗೆ ಶಾಸಕರ ಬಳಿ ಮನವಿ ಮಾಡಿದ ಕಾರಣ ಶಾಸಕರು 50ರಿಂದ 35 ಅಡಿಗೆ ಇಳಿಸಿ ಕಟ್ಟಡಗಳನ್ನು ಒಡೆಯಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಕೆಎಸ್‍ಆರ್‌ಟಿಸಿ ಬಸ್‍ ಡಿಪೊದಿಂದ ತಿಪಟೂರು ರಸ್ತೆವರೆಗೆ ಮಾರ್ಕಿಂಗ್ ಮಾಡಿ ಕಟ್ಟಡ ತೆರವಿಗೆ ಮುಂದಾದ ವೇಳೆ ರಸ್ತೆ ಎಡ ಭಾಗದ ಹೊಸ ಬಸ್‍ ನಿಲ್ದಾಣದಿಂದ ತಿಪಟೂರು ರಸ್ತೆ ವೃತ್ತದ ತನಕ ಕಟ್ಟಡ ತೆರವುಗೊಳಿಸಲು ಕೆಲ ತಾಂತ್ರಿಕ ಸಮಸ್ಯೆಗಳಾಗಿ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಅರೆ ಬರೆ ಕಾಮಗಾರಿ, ಆರೋಪ: ಕೆಎಸ್‍ಆರ್‌ಟಿಸಿ ಬಸ್‍ ಡಿಪೊದಿಂದ ಎಸ್‍.ಬಿ.ಎಂ ಎಟಿಎಂವರೆಗಿನ ಬಲ ರಸ್ತೆಯಲ್ಲಿ ಹಾಗೂ ಎಡ ರಸ್ತೆಯ ರಾಘವೇಂದ್ರ ದೇವಸ್ಥಾನದವರೆಗೆ ಬಾಕ್ಸ್‌ ಚರಂಡಿ ಕಾಮಗಾರಿ ಮಾಡಲಾಗಿದೆ. ಅದೂ ಕಳಪೆಯಿಂದ ಕೂಡಿದ್ದು, ಕ್ರಮಬದ್ಧವಾಗಿಲ್ಲ. ಜೊತೆಗೆ ಬೆಸ್ಕಾಂ ಇಲಾಖೆಯವರು ಕೆಲವರ ಹಿತಾಸಕ್ತಿಗೆ ಅನುಗುಣವಾಗಿ ವಿದ್ಯುತ್ ಕಂಬ ತೆರವು ಮಾಡುವುದು ಮತ್ತು ಹಾಕುವುದನ್ನು ಮಾಡಿದ್ದಾರೆ. ಶಾಸಕರು ಗಟ್ಟಿ ನಿರ್ಧಾರ ತೆಗೆದುಕೊಂಡು ಅಧಿಕಾರಿಗಳಿಂದ ಕೆಲಸ ಮಾಡಿಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ತಿಪಟೂರು ವೃತ್ತದಿಂದ ಹೊಸ ಬಸ್‍ ನಿಲ್ದಾಣದವರೆಗೆ ಎಡ ರಸ್ತೆಯಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರವಾಗಿಲ್ಲ. ಇನ್ನೂ ಕೆಲವೆಡೆ ಪಟ್ಟಣದ ಕೊಳಚೆ ನೀರು ಮತ್ತು ಮಳೆ ನೀರು ಚರಂಡಿಗೆ ತುಂಬಿಕೊಂಡು ದುರ್ನಾತ ಹೊಡೆಯುತ್ತಿದೆ. ಬಸ್‍ ಡಿಪೊದಿಂದ ಕೊಟ್ಟೂರನ ಕೊಟ್ಟಿಗೆಯ ಪೆಟ್ರೋಲ್‌ ಬಂಕ್‌ವರೆಗೂ ರಸ್ತೆಗೆ ಜಲ್ಲಿ ಹಾಕಲಾಗಿದೆ.

ಪಟ್ಟಣ ಪಂಚಾಯಿತಿಯವರು ಏನಂತಾರೆ: ‘ಬಿಲ್ಡಿಂಗ್ ಒಡೆಯುವ ಸಂಬಂಧ ಆಕ್ಷೇಪಿತ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದು ಪರಿಹಾರ ಕೇಳುತ್ತಿದ್ದಾರೆ. ಆದರೆ ಆಕ್ಷೇಪಿತರು ಲೋಕೋಪಯೋಗಿ ರೋಡ್‍ ಮಾರ್ಜಿನ್ ಒಳಗೆ ಕಟ್ಟಡ ಕಟ್ಟಿರುವುದರಿಂದ ಯಾವುದೇ ಪರಿಹಾರ ಕೊಡಲು ಬರುವುದಿಲ್ಲ. ಶಾಸಕರ ಸಭೆಯಲ್ಲಿ ಆಕ್ಷೇಪಿತರೇ ನಮಗೆ ಪರಿಹಾರ ಬೇಡ ಎಂದಿದ್ದರು. ಈಗ ಉಲ್ಟಾಹೊಡೆಯುತ್ತಿದ್ದಾರೆ. ಈ ಬಗ್ಗೆ ಶಾಸಕರೇ ಸೂಕ್ತ ಕ್ರಮ ತೆಗೆದುಕೊಳ್ಳಲಿ ಎನ್ನುವುದು ಪಟ್ಟಣ ಪಂಚಾಯಿತಿಯವರ ವಾದ.

ದಬ್ಬೇಘಟ್ಟ ರಸ್ತೆಯಲ್ಲಿ ತೆರವು ಕಾರ್ಯ ಮುಗಿದಿರುವ ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಉಳಿದೆಡೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜಾಗವನ್ನು ಬಿಡಿಸಿಕೊಟ್ಟರೆ ಕೆಲಸ ಬೇಗ ಮುಗಿಯುತ್ತದೆ. ಇಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿ ಟೆಂಡರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ. ಅದು ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿಗೆಸೇರಿದ್ದು, ಅವರೇ ಪರಿಹಾರ ಕೊಡಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೇಳಿದರು.

ಮುನಿಸಿಫಲ್ ಹರಾಜಿನಲ್ಲಿ ಖರೀ
ದಿಸಿದ ಜಾಗದಲ್ಲಿ ಕಾನೂನು ರೀತಿ ಕಟ್ಟಡ ಕಟ್ಟಿದ್ದೇವೆ. ಹೀಗಿರುವಾಗ ಬಿಲ್ಡಿಂಗ್ ಒಡೆಯುವುದರಿಂದ ಆಗುವ ನಷ್ಟ
ವನ್ನು ಪರಿಹಾರದ ರೂಪದಲ್ಲಿ ಕೊಡಲಿ. ರಸ್ತೆ ಮಾಡಲು ನಮ್ಮದೇನೂ ಅಭ್ಯಂ
ತರವಿಲ್ಲ ಎನ್ನುವುದು ಆಕ್ಷೇಪಿತರ ತರ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT