ಶುಕ್ರವಾರ, ಜೂನ್ 18, 2021
28 °C
ಕೈಚೆಲ್ಲಿ ಕುಳಿತ ಗ್ರಾಮ ಪಂಚಾಯಿತಿಗಳು l ಅನುದಾನಕ್ಕಾಗಿ ಜಿಲ್ಲಾ ಆಡಳಿತದ ಮೊರೆ

ಸ್ಯಾನಿಟೈಸ್ ಮಾಡಲೂ ಹಣವಿಲ್ಲ

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ 121 ಗ್ರಾಮ ಪಂಚಾಯಿತಿಗಳನ್ನು ಕೋವಿಡ್–19 ಹಾಟ್‌ಸ್ಪಾಟ್ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಳ್ಳಿಗಳು ಬರಲಿದ್ದು, ಇಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆದರೆ ಅದಕ್ಕೆ ಗ್ರಾ.ಪಂ.ಗಳ ಬಳಿ ಹಣವಿಲ್ಲ ಎಂದು ಕೈಚೆಲ್ಲಿ ಕುಳಿತಿದ್ದಾರೆ.

ಕೊರೊನಾ ಸೊಂಕಿತರು ಹೆಚ್ಚಿರುವ ಪ್ರದೇಶಗಳಲ್ಲಿ ಹಾಗೂ ಹಾಟ್‌ಸ್ಪಾಟ್ ಪ್ರದೇಶಗಳೆಂದು ಗುರುತಿಸಿರುವ ಕಡೆಗಳಲ್ಲಿ ಪ್ರಮುಖವಾಗಿ ಸ್ಯಾನಿಟೈಸ್ ಮಾಡಿಸಿ, ಸ್ವಚ್ಛತೆ ಕಾಪಾಡಬೇಕಾಗಿದೆ. ಇಂತಹ ಹಾಟ್‌ಸ್ಪಾಟ್ ಪ್ರದೇಶಗಳಲ್ಲೂ ಸರಿಯಾಗಿ ಸ್ಯಾನಿಟೈಸ್ ಮಾಡುತ್ತಿಲ್ಲ. ಕೇಳಿದರೆ ಗ್ರಾ.ಪಂ.ನಲ್ಲಿ ಹಣವಿಲ್ಲ ಎಂಬ ಮಾತು ಕೇಳಿಬರುತ್ತಿದೆ ಎಂದು ಗ್ರಾ.ಪಂ ಸದಸ್ಯರೇ ಆರೋಪಿಸುತ್ತಿದ್ದಾರೆ.

‘ಗ್ರಾ.ಪಂ ಸ್ವಂತ ನಿಧಿ ಹಾಗೂ 15ನೇ ಹಣಕಾಸು ನಿಧಿಯನ್ನು ಬಳಸಿಕೊಂಡು ಸ್ಯಾನಿಟೈಸ್ ಮಾಡಿಸಿ, ಸ್ವಚ್ಛತೆ ಕಾಪಾಡಬೇಕು. ಸೋಂಕಿತರು ಹೆಚ್ಚಿರುವ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು. ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಗಳು ಗ್ರಾ.ಪಂ.ಗಳಿಗೆ ನಿರ್ದೇಶನ ನೀಡಿದ್ದಾರೆ.

ಸಾಕಷ್ಟು ಗ್ರಾ.ಪಂ.ಗಳಲ್ಲಿ ಸ್ವಂತ ನಿಧಿಯನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಸ್ಥಳೀಯವಾಗಿ ಸಂಪನ್ಮೂಲ ಕ್ರೋಡೀಕರಣ, ತೆರೆಗೆ ಸಂಗ್ರಹ ಮತ್ತಿತರ ಆದಾಯದ ಮೂಲಕ ಈ ನಿಧಿಯನ್ನು ತುಂಬಿಸಬೇಕಿದೆ. ಬಹುತೇಕ ಗ್ರಾ.ಪಂ.ಗಳಲ್ಲಿ ಸ್ವಂತ ನಿಧಿ ಖಾಲಿಯಾಗಿದೆ. ಇಲ್ಲವೆ ಅಲ್ಪಸ್ವಲ್ಪ ಹಣ ಉಳಿದಿದೆ. ಸಂಪನ್ಮೂಲ ಕ್ರೋಡೀಕರಿಸಿದ್ದರೂ ಅನಗತ್ಯ ಕೆಲಸಗಳಿಗೆ ಖರ್ಚುಮಾಡಿ ಬರಿಗೈಯಲ್ಲಿ ಕುಳಿತಿದ್ದಾರೆ.

ಇನ್ನೂ 15ನೇ ಹಣಕಾಸು ಯೋಜನೆಯಲ್ಲಿ ಗ್ರಾಮ ನೈರ್ಮಲ್ಯಕ್ಕೆ ಹಣ ಮೀಸಲಿಡಬಹುದು. ಹಲವು ಗ್ರಾ.ಪಂ.ಗಳು ಈ ನಿಧಿಯಲ್ಲೂ
ಕೋವಿಡ್ ಎದುರಿಸಲು ಹಣ ಮೀಸಲಿಟ್ಟಿಲ್ಲ. ಹಾಗಾಗಿ ಕೋವಿಡ್ ಕೆಲಸಗಳಿಗೆ ಹಣವೇ ಇಲ್ಲವಾಗಿದೆ ಎಂದು ಕೈಕಟ್ಟಿ ಕುಳಿತಿವೆ. ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ
ಬಂದಿವೆ. ಆದರೆ ಕೆಲವು ಗ್ರಾ.ಪಂ.ಗಳು ಈ ಕೆಲಸವನ್ನು ಸಾಕಷ್ಟು ಆಸಕ್ತಿ ಹಾಗೂ ಎಚ್ಚರ ವಹಿಸಿ ಮಾಡುತ್ತಿವೆ.

‘ನಮ್ಮ ಹಣವನ್ನು ಇಂತಹ ಕೆಲಸಕ್ಕೆ ಖರ್ಚು ಮಾಡಿದರೆ ಗ್ರಾ.ಪಂ ಕಾಮಗಾರಿಗಳಿಗೆ ಅನುದಾನದ ಕೊರತೆಯಾಗುತ್ತದೆ. ಅದಕ್ಕಾಗಿ ಸರ್ಕಾರವೇ ಹಣ ನೀಡಲಿ’ ಎಂದು ಹೆಸರು ಹೇಳಲು ಬಯಸದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರತಿಕ್ರಿಯಿಸಿದರು.

ಗ್ರಾ.ಪಂ ಹಣ ಬಳಸಿದರೆ ಜೇಬಿಗೆ ಬರುವ ಹಣಕ್ಕೆ ಕತ್ತರಿ ಬೀಳುತ್ತದೆ ಎಂಬ ಕಾರಣಕ್ಕೆ ಹಲವು ಗ್ರಾ.ಪಂ ಅಧಿಕಾರಿಗಳು ಸ್ವಂತ ನಿಧಿ ಬಳಸಲು ಅವಕಾಶ ನೀಡುತ್ತಿಲ್ಲ. ಇಂತಹ ತುರ್ತು ಸಂದರ್ಭದಲ್ಲೂ ಇಂತಹ ‘ಲೆಕ್ಕಾಚಾರ’ ಬೇಕೆ ಎಂದು ನಾಗವಲ್ಲಿ ಗ್ರಾ.ಪಂ ಸದಸ್ಯರೊಬ್ಬರು ಪ್ರಶ್ನಿಸಿದರು.

ಗ್ರಾ.ಪಂ ಸ್ವಂತ ನಿಧಿ ಬಳಕೆ: ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸ್ಯಾನಿಟೈಸ್ ಮಾಡಲು ಗ್ರಾ.ಪಂ ಸ್ವಂತ ನಿಧಿ ಬಳಕೆಗೆ ಸೂಚಿಸಲಾಗಿದೆ. 15ನೇ ಹಣಕಾಸು ನಿಧಿಯನ್ನೂ ಗ್ರಾಮ ನೈರ್ಮಲ್ಯಕ್ಕೆ ಬಳಸಿಕೊಳ್ಳಬಹುದು. ಈಗಾಗಲೇ ಸ್ವಚ್ಛತೆಗೆ ಹಣ ಮೀಸಲಿಟ್ಟಿದ್ದರೆ ಬಳಸಿಕೊಳ್ಳಬಹುದು. ಇಲ್ಲವೆ ಕಾಮಗಾರಿಗೆ ಹಂಚಿಕೆ ಮಾಡಿದ್ದರೂ, ತುರ್ತು ಅಗತ್ಯ ಇಲ್ಲದ ಕೆಲಸ ಕೈಬಿಟ್ಟು ಇದಕ್ಕೆ ಬಳಸಬಹುದು ಎಂದು ತುಮಕೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೈಪಾಲ್ ಹೇಳಿದರು.

ಸ್ಯಾನಿಟೈಸ್ ಮಾಡಲು ಸಾಕಷ್ಟು ಕಡೆಗಳಲ್ಲಿ ಹಿಂದಿನ ಸಲವೇ ಪಂಪ್ ಕೊಂಡುಕೊಳ್ಳಲಾಗಿದೆ. ಕೆಲವು ಕಡೆಗಳಲ್ಲಿ ದಾನಿಗಳು ಕೊಟ್ಟಿದ್ದಾರೆ. ತೀರ ಅಗತ್ಯವಿದ್ದರೆ ಖರೀದಿಸಬಹುದು. ಇಲ್ಲವೆ ಬಾಡಿಗೆ ಪಡೆದುಕೊಂಡು ಕೆಲಸ ನಿರ್ವಹಿಸಬಹುದು ಎನ್ನುತ್ತಾರೆ.

ಗ್ರಾ.ಪಂ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದರೆ ಹಾಟ್‌ಸ್ಪಾಟ್ ಪ್ರದೇಶಗಳೆಂದು ಫಲಕ ಹಾಕಬೇಕು. ಅಂತಹ ಗ್ರಾಮದಲ್ಲಿ ಜನರು ಮನೆಯಿಂದ ಹೊರಗೆ ಬರದಂತೆ ನೋಡಿಕೊಳ್ಳಬೇಕು. ಕೊರೊನಾ ಸೊಂಕಿತರ ಮನೆಗಳ ಸುತ್ತಮುತ್ತ ಪದೇಪದೇ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.