ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ಮಂಜೂರಾತಿ ಕೊಟ್ಟರೂ ಮದಲೂರು ಕೆರೆಗೆ ಹರಿಯದ ನೀರು

ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಕುಟುಕಿದ ಎಚ್‌. ಡಿ. ಕುಮಾರಸ್ವಾಮಿ
Last Updated 1 ಅಕ್ಟೋಬರ್ 2020, 8:52 IST
ಅಕ್ಷರ ಗಾತ್ರ

ಶಿರಾ: ‘ಮದಲೂರು ಕೆರೆಗೆ ನೀರು ಹರಿಸುವ ಯೋಜನೆಗೆ ಮಂಜೂರಾತಿ ನೀಡಿದ್ದು ನಾನು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಇದುವರೆಗೆ ನೀರು ಹರಿಸಲು ಸಾಧ್ಯವಾಗಿಲ್ಲ. ತಾಲ್ಲೂಕಿಗೆ ನೀರು ಹರಿಯುವ ಭದ್ರಾ ಮೇಲ್ಡಂಡೆ ಯೋಜನೆಗೆ ಮಂಜೂರಾತಿ ನೀಡಿದ್ದು ನಾನು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಇಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದರು.

‘ಬಿ.ಸತ್ಯನಾರಾಯಣ ಶಾಸಕರಾಗಿದ್ದಾಗ ತಾಲ್ಲೂಕಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ₹ 281 ಕೋಟಿ ಅನುದಾನ ನೀಡಲಾಗಿತ್ತು. ಆದರೆ ನಂತರ ಬಿಜೆಪಿ ಸರ್ಕಾರ ಅದನ್ನು ಹಿಂಪಡೆಯಿತು. ಉಪಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸುವ ಮೂಲಕ ಸತ್ಯನಾರಾಯಣ ಆತ್ಮಕ್ಕೆ ಶಾಂತಿ ನೀಡಬೇಕು’ ಎಂದರು.

ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಸ್ಥಾಪನೆಯಿಂದ ಯಾವುದೇ ಪ್ರಯೋಜನ ಇಲ್ಲ. ರಾಜ್ಯದಲ್ಲಿ ಹಲವು ಸಮುದಾಯ ನಿಗಮಗಳಿವೆ. ಭೋವಿ ನಿಗಮದಿಂದ ಎಷ್ಟು ಕುಟುಂಬಗಳು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದು ಪ್ರಶ್ನಿಸಿದರು.

ಹಿಂದುಳಿದ ವರ್ಗ, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ನಾವು ನೀಡಿದಷ್ಟು ಸೌಲಭ್ಯ ಬೇರೆ ಯಾರೂ ನೀಡಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಸಮಯ ಸಾಧಕತನವನ್ನು ಜನರು ಆರ್ಥ ಮಾಡಿಕೊಳ್ಳಬೇಕು ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿರುವ ಮನೆಗಳ ಕಾಮಗಾರಿ ಮುಗಿಯಲು ಇನ್ನೂ 10 ವರ್ಷ ಬೇಕು. ವಸತಿ ಯೋಜನೆಗೆ ₹ 10,000 ಕೋಟಿ ಮಂಜೂರು ಮಾಡಿರುವುದಾಗಿ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಹಣ ಎಲ್ಲಿದೆ ಎಂದು ಪ್ರಶ್ನಿಸಿದರು.

ಭುವನಹಳ್ಳಿ ಗ್ರಾಮದಲ್ಲಿರುವ ಶಾಸಕ ಬಿ.ಸತ್ಯನಾರಾಯಣ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಎಚ್.ಡಿ ಕುಮಾರಸ್ವಾಮಿ ವೇದಿಕೆ ಪ್ರವೇಶಿಸಿದರು.

ಕುಂಚಿಟಿಗ ಸಮುದಾಯವನ್ನು ಒಬಿಸಿಗೆ ಸೇರಿಸುವಂತೆ ಕುಂಚಿಟಿಗರ ಸಂಘದ ಗೋವಿಂದರಾಜು ಹಾಗೂ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮುಖಂಡ ಚಂಗಾವರ ಮಾರಣ್ಣ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದ ಪ್ರಜ್ವಲ್
ರೇವಣ್ಣ ಅವರಿಗೆ ಮನವಿ ಸಲ್ಲಿಸಿದರು.

ಶಾಸಕರಾದಎಚ್.ಕೆ.ಕುಮಾರಸ್ವಾಮಿ, ವೀರಭದ್ರಯ್ಯ, ಶ್ರೀನಿವಾಸ್, ವಿಧಾನ ಪರಿಷತ್‌ ಸದಸ್ಯರಾದ ತಿಪ್ಪೇಸ್ವಾಮಿ, ಬೆಮೆಲ್ ಕಾಂತರಾಜು, ಚೌಡರೆಡ್ಡಿ ತೂಪಲ್ಲಿ, ಮುಖಂಡರಾದ ಡಿ.ನಾಗರಾಜಯ್ಯ, ಸುರೇಶ್ ಬಾನು, ಎಚ್.ನಿಂಗಪ್ಪ, ಸುಧಾಕರ್ ಲಾಲ್, ತಿಮ್ಮರಾಯಪ್ಪ, ಎಂ.ಟಿ.ಕೃಷ್ಣಪ್ಪ, ಆರ್.ಉಗ್ರೇಶ್, ಕಲ್ಕೆರೆ ರವಿಕುಮಾರ್, ಸಿ.ಆರ್.ಉಮೇಶ್, ಸತ್ಯಪ್ರಕಾಶ್, ಮುಡಿಮಡು ರಂಗಶ್ವಾಮಯ್ಯ, ಚಂಗಾವರ ಮಾರಣ್ಣ, ಎಸ್.ರಾಮಕೃಷ್ಣ ಇದ್ದರು.

‘ಹಾಸನದವರು ಎಂದೂ ನೀರಿಗೆ ಅಡ್ಡಿಪಡಿಸಿಲ್ಲ’
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘ಜಿಲ್ಲೆಗೆ ಹರಿಯುವ ಹೇಮಾವತಿ ನೀರನ್ನು ಹಾಸನದವರು ತಡೆಯುತ್ತಾರೆ ಎನ್ನುವ ಆರೋಪ ನಮ್ಮ ಕುಟುಂಬದ ಮೇಲಿದೆ. ಆದರೆ ನಾವು ನೀರು ತಡೆದಿಲ್ಲ. ಮರಗಳು ಬೆಳೆದಿದ್ದ ಹೇಮಾವತಿ ನಾಲೆ ನವೀಕರಿಸಲು ಕುಮಾರಸ್ವಾಮಿ ಬರಬೇಕಾಯಿತು. ಜಿಲ್ಲೆಗೆ ನೀರು ಬಿಡಲಿಲ್ಲ ಎಂದು ದೇವೇಗೌಡರನ್ನು ಸೋಲಿಸಿದವರಿಗೆ ದೇವರೇ ಶಿಕ್ಷೆ ನೀಡುತ್ತಾನೆ’ ಎಂದರು.

ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿ, ‘₹ 600 ಕೋಟಿ ವೆಚ್ಚದಲ್ಲಿ ನಾಲೆ ನವೀಕರಿಸಿ ಜಿಲ್ಲೆಗೆ ಹೇಮಾವತಿ ಹರಿಸಲು ಕುಮಾರಸ್ವಾಮಿ ಕಾರಣ. ಹಾಸನ ಜಿಲ್ಲೆಯವರು ನೀರಿಗೆ ಎಂದು ವಿರೋಧ ಮಾಡಿಲ್ಲ. ಮತಕ್ಕಾಗಿ ಸುಳ್ಳು ಹೇಳುವುದು ತಪ್ಪು. ಇದು ಹೆಚ್ಚು ದಿನ ಉಳಿಯುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT