ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ತಿಪಟೂರು ಜಿಲ್ಲೆ ಕೂಗು

ಮಂಡೇಕರ್ ವರದಿಯಲ್ಲಿಯೂ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಪ್ರಸ್ತಾವ
Published 13 ಸೆಪ್ಟೆಂಬರ್ 2023, 6:45 IST
Last Updated 13 ಸೆಪ್ಟೆಂಬರ್ 2023, 6:45 IST
ಅಕ್ಷರ ಗಾತ್ರ

ತಿಪಟೂರು: ತುಮಕೂರು ಜಿಲ್ಲೆಯಿಂದ ತಿಪಟೂರ ಅನ್ನು ಪ್ರತ್ಯೇಕಗೊಳಿಸಿ ಜಿಲ್ಲಾ ಕೇಂದ್ರವನ್ನಾಗಿಸುವ ಬಹುದಿನಗಳ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಈ ಬಾರಿ ರಾಜ್ಯ ಸರ್ಕಾರದಲ್ಲಿ ತಿಪಟೂರು ಪ್ರತ್ಯೇಕ ಜಿಲ್ಲೆಗೆ ಮಾನ್ಯತೆ ಸಿಗಲಿದೆಯೇ ಕಾದು ನೋಡಬೇಕಿದೆ.

ತುಮಕೂರು ಜಿಲ್ಲೆ 10 ತಾಲ್ಲೂಕು, 11 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಅತಿದೊಡ್ಡ ಜಿಲ್ಲೆ. ತಿಪಟೂರು ಸುಮಾರು 80ರಿಂದ 120ಕಿ.ಮೀ ದೂರದಲ್ಲಿದ್ದು ಅನೇಕ ಸೌಕರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ತೆರಳಲು ಸಾಧ್ಯವಾಗದೆ ಜನರು ತೊಂದರೆಗೆ ಸಿಲುಕಿದ್ದಾರೆ. ಸ್ವಾತಂತ್ರ್ಯ ನಂತರದಲ್ಲಿ 1960ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಸಂದರ್ಭದ ಮಂಡೇಕರ್ ವರದಿಯಲ್ಲಿಯೂ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಸೂಚಿಸಲಾಗಿತ್ತು. ಅನೇಕ ವರ್ಷಗಳಿಂದ ಅನೇಕ ಬಾರಿ ಜಿಲ್ಲೆಗಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಬೆಳವಣಿಗೆ ಕಂಡಿಲ್ಲ. ಅಲ್ಲದೇ ಅನೇಕ ಸಂಘ, ಸಂಸ್ಥೆಗಳು ಹೋರಾಟ ಮಾಡಿದರೂ ಯಾವುದೇ ಪ್ರಯೋಜನಾವಗಿಲ್ಲ. ಈ ಬಾರಿಯಾದರೂ ಪ್ರತ್ಯೇಕ 32ನೇ ಜಿಲ್ಲೆಯಾಗಿ ತಿಪಟೂರು ಮಾಡಲಾಗುವುದೇ ಎಂಬ ನಿರೀಕ್ಷೆ ಜನರದ್ದು.

ತಿಪಟೂರು ತಾಲ್ಲೂಕು ಸುಮಾರು 2.60ಲಕ್ಷ ಜನಸಂಖ್ಯೆ  ಹೊಂದಿದೆ. ನಗರದಲ್ಲಿ ಸುಮಾರು 90 ಸಾವಿರ ಜನಸಂಖ್ಯೆ ಇದೆ. ತಾಲ್ಲೂಕು 830.1ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಏಷ್ಯಾ ಖಂಡದಲ್ಲಿ ಅತಿದೊಡ್ಡ ಕೊಬ್ಬರಿ ಮಾರುಕಟ್ಟೆ ಹೊಂದಿದೆ. ತೆಂಗು ಮತ್ತು ಹೈನುಗಾರಿಕೆ ಜನರ ಆರ್ಥಿಕ ಮೂಲವಾಗಿದೆ.

ತಿಪಟೂರು ವಿಧಾನಸಭೆ ಕ್ಷೇತ್ರ ಉಪವಿಭಾಗವಾಗಿದೆ. ಜಿಲ್ಲಾ ಕೇಂದ್ರಕ್ಕೆ ಅಗತ್ಯವಿರುವ ಮೂಲ ಕಚೇರಿಗಳ ಸೌಕರ್ಯ ಹೊಂದಿದೆ. ಮುಖ್ಯ ಆಡಳಿತದ ಭವನ, ಮಿನಿ ವಿಧಾನಸೌಧ, ನಗರಸಭೆ ಕಚೇರಿ, ಆರ್.ಟಿ.ಒ ಕಚೇರಿ, ಪೊಲೀಸ್ ಅಧೀಕ್ಷಕ ಕಚೇರಿ, ಜಿಲ್ಲಾ ನ್ಯಾಯಾಲಯ ಸೇರಿದಂತೆ ಹಲವು ಕಚೇರಿ ಹೊಂದಿದೆ. ತಿಪಟೂರು ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮದೇ ಸಾಧನೆ ಮಾಡಿರುವ ಸಾಧಕರು ತಿಪಟೂರನ್ನು ಪ್ರತಿನಿಧಿಸಿದ್ದು ಕಲೆಗಾಗಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಭನವ, ಕ್ರೀಡೆಗಾಗಿ ಕಲ್ಪತರು ಕ್ರೀಡಾಂಗಣ ಸೇರಿದಂತೆ ಸಾಹಿತಿಗಳ ಮಹಾಸಂಗಮೇ ತುಂಬಿದೆ.

ಶೈಕ್ಷಣಿಕವಾಗಿಯೂ ಬೆಳೆದಿದ್ದು ಹತ್ತಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಎರಡು ಎಂಜಿನಿಯರಿಂಗ್ ಕಾಲೇಜು, ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇತಿಹಾಸ ಪ್ರಸಿದ್ಧ ಕಲ್ಪತರು ಕಾಲೇಜು ಇದೆ.  ಬೆಂಗಳೂರು-ಹೊನ್ನಾವರ 206 ರಾಷ್ಟ್ರೀಯ ಹೆದ್ದಾರಿ, ರೈಲ್ವೆ ನಿಲ್ದಾಣಗಳಂತಹ ಉತ್ತಮ ಸಾರಿಗೆ ಸಂಪರ್ಕ ಇದೆ.

ತಾಲ್ಲೂಕಿನಲ್ಲಿ ಹಲವು ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿವೆ. ಕೆರೆಗೋಡಿ ರಂಗಾಪುರ ಪರದೇಶೀಕೇಂದ್ರ ಮಠ, ದಸರೀಘಟ್ಟದ ಚೌಡೇಶ್ವರಿ ದೇವಾಲಯ, 12ನೇ ಶತಮಾನದಲ್ಲಿ ಗುರುಸಿದ್ಧರಾಮೇಶ್ವರರ ಹಠಯೋಗದ ಮೂಲಕ ತಪಸ್ಸು ಮಾಡಿ ಗಂಗೆ ಉದ್ಭವಿಸಿದ ಕ್ಷೇತ್ರ ಕಾರೇಕುರ್ಚಿ ದೊಣೆ ಗಂಗಾಕ್ಷೇತ್ರ, ಬೆಟ್ಟದ ಮೇಲ್ಭಾಗದಲ್ಲಿ ನೆಲೆಸಿದ ಧಾರ್ಮಿಕ ಕ್ಷೇತ್ರ ಹತ್ಯಾಳು ನರಸಿಂಹಸ್ವಾಮಿ ಉತ್ತಮ ನಿಸರ್ಗದ ಮಧ್ಯ ಭಾಗದಲ್ಲಿದೆ. ಅರಳಗುಪ್ಪೆಯಲ್ಲಿ 13ನೇ ಶತಮಾನದಲ್ಲಿ ಹೊಯ್ಸಳ ಶೈಲಿಯಲ್ಲಿ ನಿರ್ಮಾಣ ಮಾಡಿರುವ ದೇವಾಲಯ, ಚೋಳರ ಕಾಲದ ದೇವಾಲಯಗಳು ಇವೆ.

ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯಲ್ಲಿ ದ್ವಿಸಚಿವರನ್ನು ಹೊಂದಿದ್ದಾಗಲೇ ತಿಪಟೂರು ಜಿಲ್ಲೆ ಆಗಿ ಘೋಷಣೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದ ಜನರಿಗೆ ಕೋವಿಡ್‌ ಆಘಾತ ನೀಡಿತ್ತು. ರಾಜ್ಯದ ಆರ್ಥಿಕ ಸ್ಥಿತಿ ಹದಗೆಡಿಸಿತ್ತು.ಈ ನಿರೀಕ್ಷೆ ಹುಸಿಯಾಗಿತ್ತು. ಆದರೆ, ಈ ಬಾರಿ ಚುನಾವಣೆ ಪೂರ್ವದಿಂದಲೇ ತಿಪಟೂರಿನ ಜಿಲ್ಲಾ ಕೇಂದ್ರದ ಕೂಗು ಕೇಳಿ ಬಂದಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೂ ತರಲಾಗಿತ್ತು. ಆದರೆ, ಇದೀಗ ಮಧುಗಿರಿ, ಕೊರಟಗೆರೆ ಭಾಗದ ಗೃಹ ಸಚಿವರು ಹಾಗೂ ಸಚಿವರು ಮಧುಗಿರಿ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವಂತೆ ಮನವಿ ಮಾಡಿದ್ದಾರೆ. ತಿಪಟೂರಿನ ಶಾಸಕ ಕೆ.ಷಡಕ್ಷರಿ ಈಗಾಗಲೇ ಜಿಲ್ಲೆ ಮಾಡಲು ಯಾವ ತ್ಯಾಗಕ್ಕಾದರೂ ಸಿದ್ಧನಿದ್ದೇನೆ ಎಂಬ ಹೇಳಿಕೆ ನೀಡಿರುವುದು ಗಮನ ಸೆಳೆದಿದೆ.

 ಕೆ.ಷಡಕ್ಷರಿ ಶಾಸಕ 
 ಕೆ.ಷಡಕ್ಷರಿ ಶಾಸಕ 
ಪೋಟೋ : ತೆಂಗು
ಪೋಟೋ : ತೆಂಗು

ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಲು ರಾಜ್ಯದ ಸರ್ಕಾರದ ಗಮನಕ್ಕೆ ತರಲಾಗಿದೆ. ಯಾವುದೇ ಕಾರಣಕ್ಕೂ ಇತರ ತಾಲ್ಲೂಕುಗಳನ್ನು ಜಿಲ್ಲೆ ಮಾಡಲು ಬೆಂಬಲ ನೀಡುವುದಿಲ್ಲ. ತಿಪಟೂರು ಜಿಲ್ಲಾ ಕೇಂದ್ರ ಘೋಷಣೆಗಾಗಿ ಯಾವ ತ್ಯಾಗಕ್ಕಾದರೂ ಸಿದ್ಧವಾಗಿದ್ದೇನೆ.

-ಕೆ.ಷಡಕ್ಷರಿ ಶಾಸಕ ತಿಪಟೂರು

ಹೋರಾಟ ತೀವ್ರಗೊಳಿಸಲು ಸಜ್ಜು

ತಿಪಟೂರು ತಾಲ್ಲೂಕನ್ನು ಜಿಲ್ಲೆ ಮಾಡಲೇಬೇಕು ಎಂಬ ಕೂಗು ಅನೇಕ ಬಾರಿ ಶಾಂತಿಯುತವಾಗಿ ಕೇಳುತ್ತಿರುವ ಜನರು ಮುಂದಿನ ದಿನಗಳಲ್ಲಿ ಹೋರಾಟದ ತೀವ್ರತೆ  ಹೆಚ್ಚಿಸಲು ಚಿಂತನೆ ನಡೆಸಿದೆ. ತಿಪಟೂರು ಅಥವಾ ಮಧುಗಿರಿಯಲ್ಲಿ ಯಾವುದು ಜಿಲ್ಲೆ ಆಗಿ ಘೋಷಣೆ ಆಗುತ್ತದೆ ಕಾದು ನೊಡಬೇಕಿದೆ. ತಿಪಟೂರಿಗೆ ಐತಿಹಾಸಿಕವಾಗಿ ಹೆಸರು ಬರಲು ಕಾರಣ ಇಲ್ಲಿನ ನೊಣವಿನಕೆರೆಯಲ್ಲಿನ ಕಲ್ಲೇಶ್ವರ ದೇಗುಲದಲ್ಲಿ ನೊಳಂಬ ರಾಜರಿಗೆ ಅದರಲ್ಲಿಯೂ ಮೂರು ಜನ ರಾಜರಿಗೆ ಪಟ್ಟ ಕಟ್ಟಿದ ಹಿನ್ನೆಲೆಯಲ್ಲಿ ತ್ರಿಪಟ್ಟದೂರು ಎಂದಿದ್ದು ಬರುಬರುತ್ತಾ ತಿಪಟೂರು ಎಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT