ಗುರುವಾರ , ಮೇ 26, 2022
26 °C
ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಹೆಚ್ಚು ಜನ ಸೇರಿದ್ದಕ್ಕೆ ತರಾಟೆ

ತುಮಕೂರು: ಐಜಿಪಿ, ಡಿವೈಎಸ್‌ಪಿ ವಿರುದ್ಧ ಸಿ.ಎಂ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಸೀನಿಯರ್ ಆಫೀಸರ್ ಇದ್ದೀಯಾ. ಕೋವಿಡ್ ನಿಯಮ ಕಾಪಾಡೋದು ಗೊತ್ತಿಲ್ವ. ಇಷ್ಟು ಜನರನ್ನು ಯಾಕೆ ಸೇರಿಸಿದ್ದೀಯಾ. ನಿಮಗೆ ಬುದ್ಧಿ ಇಲ್ವ. ಹೋಗಿ ಎಲ್ಲಾದ್ರು ದೂರ ನಿಂತುಕೊಳ್ಳಿ’

ಹೀಗೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್‌ ಮತ್ತು ಡಿವೈಎಸ್‌ಪಿ ಶ್ರೀನಿವಾಸ್‌ ಅವರನ್ನು ತರಾಟೆಗೆ ತೆಗೆದುಕೊಂಡರು. 

ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು. ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಗದ್ದುಗೆ ಪೂಜೆ ಹೊರತುಪಡಿಸಿ ಉತ್ಸವ, ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು. 

ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡರೆ ಮಠದ ವಿದ್ಯಾರ್ಥಿಗಳು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಮುಂಜಾಗ್ರತೆಯಾಗಿ ಸಿದ್ಧಲಿಂಗ ಸ್ವಾಮೀಜಿ ಅವರೇ ಈ ನಿರ್ಧಾರ ಕೈಗೊಂಡಿದ್ದರು.

ಬೆಳಿಗ್ಗೆ 10.11ಗಂಟೆಗೆ ಮುಖ್ಯಮಂತ್ರಿ ಬೊಮ್ಮಾಯಿ ಮಠಕ್ಕೆ ಭೇಟಿ ನೀಡಿದರು. ಅವರೊಟ್ಟಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಇದ್ದರು. ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಸಂಸದ ಜಿ.ಎಸ್‌. ಬಸವರಾಜ್‌, ಶಾಸಕ ಜ್ಯೋತಿ ಗಣೇಶ್‌, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಸುರೇಶ್‌ ಗೌಡ ಸ್ಥಳದಲ್ಲಿದ್ದರು. ಮುಖ್ಯಮಂತ್ರಿ ಆಗಮನದ ಸುದ್ದಿ ತಿಳಿದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಕ್ತಿಗತ ಅಂತರ ಮರೆತು  ನೆರೆದಿದ್ದರು. 

ಕಾರಿನಿಂದ ಇಳಿದ ತಕ್ಷಣವೇ ಬೊಮ್ಮಾಯಿ ಅವರು ಸ್ವಾಮೀಜಿಯ ಗದ್ದುಗೆ ದರ್ಶನ ಪಡೆಯಲು ಮುಂದಾದರು. ಆಗ ಅವರ ನೋಟ ಮಾರ್ಗಸೂಚಿ ಉಲ್ಲಂಘಿಸಿ ನೆರೆದಿದ್ದ ಜನರತ್ತ ನೆಟ್ಟಿತು. ಮೊದಲೇ ಸೂಚನೆ ನೀಡಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ಕಂಡ ಅವರು ಮೊದಲು ಡಿವೈಎಸ್‌‍ಪಿ ವಿರುದ್ಧ  ಸಿಡಿಮಿಡಿಗೊಂಡರು.

ಬಳಿಕ ಅಲ್ಲಿಯೇ ನಿಂತಿದ್ದ ಐಜಿಪಿ ಅವರಿಗೆ, ‘ನೀವು ಹಿರಿಯ ಅಧಿಕಾರಿಯಾಗಿದ್ದೀರಿ. ನಿಮಗೆ ಗೊತ್ತಾಗುವುದಿಲ್ಲವೇ. ನಿಯಮ ಉಲ್ಲಂಘಿಸಿದ ಮೇಲೆ ಈಗೇನು ಕ್ರಮಕೈಗೊಳ್ಳುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು.

‘ಹೆಚ್ಚು ಜನರನ್ನು ಸೇರಿಸಬೇಡಿ ಅಂತ ಮೊದಲೇ ಹೇಳಿದ್ದೀನಿ. ಯಾಕೆ ಇಷ್ಟು ಜನರನ್ನು ಸೇರಿಸಿದ್ದೀರಿ’ ಎಂದು ಅಸಮಾಧಾನಗೊಂಡ ಅವರು ಗದ್ದುಗೆ ದರ್ಶನಕ್ಕೆ ತೆರಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು