ಗುಬ್ಬಿ: ತಾಲ್ಲೂಕಿನ ನಿಟ್ಟೂರಿನ ರಾಮಸ್ವಾಮಿ (45) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಮಸ್ವಾಮಿ ಅವರು ಸ್ಥಳೀಯರೊಬ್ಬರಿಂದ ಸಾಲ ಪಡೆದಿದ್ದರು. ಮೂರು ವರ್ಷ ಶೇ 10ರಂತೆ ಬಡ್ಡಿಯನ್ನೂ ಕಟ್ಟಿದ್ದರು. ಆದಾಗ್ಯೂ ಇನ್ನೂ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿದ್ದರಿಂದ ಬೇಸತ್ತು ನೇಣು ಹಾಕಿಕೊಂಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಹಣಕ್ಕಾಗಿ ಒತ್ತಡ ಹೆಚ್ಚಿದ್ದರಿಂದ ಬಡ್ಡಿ ಕಟ್ಟಲಾಗದೆ, ವ್ಯವಹಾರವನ್ನೂ ಸರಿಯಾಗಿ ನಡೆಸಲಾಗದೆ ಮನನೊಂದಿದ್ದ ಅವರು ಮಂಗಳವಾರ ಮನೆಗೆ ಬಂದು ಕೊಠಡಿಯಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಸುಮಾರು ಹೊತ್ತಾದರೂ ಕೊಠಡಿ ಬಾಗಿಲು ತೆರೆಯದಿರುವುದರಿಂದ ಅನುಮಾನಗೊಂಡ ಮೃತರ ಪತ್ನಿ ಕೂಗಾಡಿದ್ದಾರೆ. ಅಕ್ಕಪಕ್ಕದವರು ಬಂದು ಬಾಗಿಲು ಒಡೆದಾಗ ನೇಣು ಹಾಕಿಕೊಂಡಿರುವುದು ತಿಳಿದಿದೆ.
‘ಮೀಟರ್ ಬಡ್ಡಿಗಾಗಿ ಒತ್ತಾಯಿಸಿದ್ದರಿಂದಲೇ ಪತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡ್ಡಿಗಾಗಿ ಒತ್ತಾ ಯಿಸಿದವರ ವಿರುದ್ಧ ಕ್ರಮ ಕೈಗೊಳ್ಳ ಬೇಕು’ ಎಂದು ಮೃತರ ಪತ್ನಿ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.