ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನದೊಳಗೆ ಮಕ್ಕಳ ರಕ್ಷಣಾ ಸಮಿತಿ ಸಭೆ ನಡೆಸಿ: ಹೆಚ್ಚುವರಿ ಜಿಲ್ಲಾಧಿಕಾರಿ

Last Updated 12 ಜೂನ್ 2020, 14:50 IST
ಅಕ್ಷರ ಗಾತ್ರ

ತುಮಕೂರು: ಗುಬ್ಬಿ, ಕೊರಟಗೆರೆ, ಪಾವಗಡ, ಮಧುಗಿರಿ, ಕುಣಿಗಲ್ ತಾಲ್ಲೂಕುಗಳನ್ನು ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಭೆಗಳೇ ನಡೆದಿಲ್ಲ. ಸಭೆ ನಡೆಸದಿರುವ ತಾಲ್ಲೂಕುಗಳಲ್ಲಿ 15 ದಿನಗಳೊಳಗಾಗಿ ಸಭೆ ನಡೆಸಿ ವರದಿ ಸಲ್ಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಮತ್ತು ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು ಕಂಡುಬಂದರೆ ರಕ್ಷಿಸಿ ಪುನರ್ವಸತಿ ಕಲ್ಪಿಸಬೇಕು. 2019ರ ನವೆಂಬರ್‌ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಬಾಲ್ಯವಿವಾಹಗಳ ಬಗ್ಗೆ 58 ದೂರುಗಳು ದಾಖಲಾಗಿದ್ದು, 55 ವಿವಾಹ ತಡೆಯಲಾಗಿದೆ. ಬಾಲ್ಯವಿವಾಹ ತಡೆದು ಅರಿವು ಮೂಡಿಸಿದ ನಂತರವೂ ಮದುವೆ ಮಾಡುವ ಸಾಧ್ಯತೆ ಇದೆ. ಅಧಿಕಾರಿಗಳು ಇಂತಹ ಪ್ರಕರಣಗಳ ಬಗ್ಗೆ ಸೂಕ್ತ ಅನುಸರಣೆ ಮಾಡುತ್ತಿರಬೇಕು. ಕಣ್ತಪ್ಪಿಸಿ ಬಾಲ್ಯವಿವಾಹ ನಡೆದರೆ ಕೂಡಲೇ ಎಫ್‍ಐಆರ್ ದಾಖಲಿಸಬೇಕು ಎಂದು ಹೇಳಿದರು.

ಬಾಲ್ಯವಿವಾಹಕ್ಕಾಗಿಯೇ ಬಹುತೇಕ ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿರುತ್ತಾರೆ. ಎಸ್ಸೆಸ್ಸೆಲ್ಸಿಗೂ ಮುನ್ನ ಹಾಗೂ ನಂತರ ಶಾಲೆ ಬಿಟ್ಟ ಮಕ್ಕಳ ಪಟ್ಟಿ ತಯಾರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಲ್ಲಿಸಬೇಕು ಎಂದು ಶಿಕ್ಷಣ ಇಲಾಖೆಗೆ ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ‘ಮಕ್ಕಳ ಸಮಗ್ರ ರಕ್ಷಣೆಗಾಗಿ ಸಹಾಯವಾಣಿ 1098, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಾಯವಾಣಿ 080-47181177 ಸಂಖ್ಯೆಗಳು ಕಾರ್ಯನಿರ್ವಹಿಸುತ್ತಿವೆ. ಸಹಾಯವಾಣಿಗಳ ಮೂಲಕ ನವೆಂಬರ್– ಮಾರ್ಚ್ ನಡುವೆ 458 ಕರೆಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 316 ಸುಳ್ಳು ಕರೆಗಳಾಗಿವೆ’ ಎಂದು ಹೇಳಿದರು.

142 ಕರೆಗಳು ಮಕ್ಕಳಿಗೆ ಸಂಬಂಧಿಸಿದ ಬಾಲ್ಯವಿವಾಹ, ವೈದ್ಯಕೀಯ ನೆರವು, ದೈಹಿಕ ದೌರ್ಜನ್ಯ, ಭಿಕ್ಷಾಟನೆ, ಶಿಕ್ಷಕರು ಹೊಡೆಯುವ, ಅಸುರಕ್ಷಿತ ಸ್ಪರ್ಶ, ಸರ್ಕಾರಿ ಸೌಲಭ್ಯ, ಕಾಣೆಯಾಗಿರುವ, ಮಾನಸಿಕ ಕಿರುಕುಳ, ಬಾಲ ಕಾರ್ಮಿಕ ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿದ್ದು, ಪ್ರಕರಣಗಳ ವಿಲೇವಾರಿಗೆ ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಶಿಕ್ಷಣ ಇಲಾಖೆಯ ರಂಗಧಾಮಯ್ಯ, ರಂಗಶಾಮಯ್ಯ, ರಾಜ್‍ಕುಮಾರ್, ಮನೋವೈದ್ಯೆ ಡಾ.ಮಾಲಿನಿ, ಡಾ.ಅಮೀನಾ, ಬಾಲನ್ಯಾಯ ಮಂಡಳಿಯ ಸದಸ್ಯೆ ಶಾಲಿನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT