ಸೋಮವಾರ, ಜೂನ್ 14, 2021
20 °C
ಹಲವೆಡೆ ಧೂಳು, ಭಿತ್ತಿಪತ್ರಗಳನ್ನು ಅಂಟಿಸುವ ಜಾಹೀರಾತು ಫಲಕವಾಗಿ ರೂಪುಗೊಂಡ ನಗರದ ಬಸ್‌ ತಂಗುದಾಣಗಳು

ತುಮಕೂರು: ನಗರ ಪ್ರಯಾಣಿಕರ ತಂಗುದಾಣಕ್ಕೆ ಬೇಕಿದೆ ಕಾಯಕಲ್ಪ

ವಿಠಲ/ಪೀರ್‌ಪಾಷ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಬಿಸಿಲಿನಲ್ಲಿ ಬೇಯಬೇಕು, ಮಳೆಯಲ್ಲಿ ತೋಯಬೇಕು. ಕುಳಿತುಕೊಳ್ಳಲು ಸ್ವಚ್ಛವಾದ ಜಾಗವಿಲ್ಲ. ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯಂತೂ ಕೇಳಲೇಬೇಡಿ. ಕೆಲವೊಮ್ಮೆ ಬಸ್‌ಗಾಗಿ ನಡುರಸ್ತೆಯಲ್ಲಿ ನಿಂತು ಕಾಯಬೇಕು. ಬಸ್‌ ಹತ್ತುವ, ಇಳಿಯುವ ವೇಳೆ ಸ್ವಲ್ಪ ವ್ಯತ್ಯಾಸವಾದರೂ ಪ್ರಾಣಕ್ಕೆ ಬರುವುದು ಸಂಚಕಾರ...

ಇದು ಸ್ಮಾರ್ಟ್‌ ಸಿಟಿಯಾಗುವ ಹಾದಿಯಲ್ಲಿರುವ ತುಮಕೂರು ನಗರದ ಬಸ್‌ ಪ್ರಯಾಣಿಕರ ಪಾಡು. ನಗರ ಸಾರಿಗೆ ಬಸ್‌ ಸೇವೆ ಪಡೆಯಲು ನಗರದ ಬಹುತೇಕ ಪ್ರದೇಶಗಳಲ್ಲಿ ಸುಸಜ್ಜಿತವಾದ ತಂಗುದಾಣಗಳ ಸರಿಯಾದ ವ್ಯವಸ್ಥೆಯ ಕೊರತೆ ಇದೆ. ಹಾಗಾಗಿ ಪ್ರಯಾಣಿಕರು ತೊಂದರೆಗಳನ್ನು ಅನುಭವಿಸಬೇಕಾಗಿದೆ.

ಕಟ್ಟಿರುವ ತಂಗುದಾಣದ ಮೈತುಂಬ ದೂಳು ಮೆತ್ತಿಕೊಂಡಿದೆ. ಕೆಲವು ಕಡೆ ಕೂರಲು ಜೋಡಿಸಿರುವ ಕುರ್ಚಿ–ಬೆಂಚುಗಳೂ ಮುರಿದಿವೆ. ಬೆಳಕಿನ ವ್ಯವಸ್ಥೆಗಾಗಿ ಜೋಡಿಸಿದ ವೈರಿಂಗ್‌ ಕಿತ್ತು ಹೋಗಿದೆ. ಕೆಲವು ಕಡೆ ಅಳವಡಿಸಿರುವ ಟೂಬ್‌ಲೈಟ್‌ಗಳು ಮಾಯವಾಗಿವೆ. ತಂಗುದಾಣದ ರಚನೆಗಳು ಭಿತ್ತಿಪತ್ರಗಳನ್ನು ಅಂಟಿಸುವ ಜಾಹೀರಾತು ಫಲಕವಾಗಿ ಮಾರ್ಪಟ್ಟಿವೆ.

48.21 ಚದರ ಕಿ.ಮೀ. ವಿಸ್ತೀರ್ಣ ಇರುವ ತುಮಕೂರಿನಲ್ಲಿ ನಗರ ಸಾರಿಗೆಯ 50 ಬಸ್‌ಗಳು ನಿತ್ಯ 860 ಟ್ರಿಪ್‌ಗಳ ಸಾರಿಗೆ ಸೌಲಭ್ಯ ನೀಡುತ್ತವೆ. ಇದನ್ನು ಪಡೆಯಲು ವ್ಯವಸ್ಥಿತ ತಂಗುದಾಣಗಳ ವ್ಯವಸ್ಥೆ ನಗರದಲ್ಲಿ ಇಲ್ಲ.

ಬಿ.ಎಚ್.ರಸ್ತೆಯ(ಮನೆತಿಂಡಿ ಹೋಟೆಲ್‌ ಮುಂಭಾಗ) ಸ್ಕೈವಾಕ್‌ ಬಳಿ ತಂಗುದಾಣ ಕಟ್ಟಿಲ್ಲ. ಇಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಬಿಸಿಲಿನಲ್ಲೇ ನಿಂತು ಬಸ್‌ಗಾಗಿ ಕಾಯುತ್ತಾರೆ. ಇಲ್ಲವೇ ರಸ್ತೆ ಬದಿಯ ಅಂಗಡಿಗಳ ಮುಂಭಾಗದ ನೆರಳನ್ನು ಆಶ್ರಯಿಸುತ್ತಿದ್ದಾರೆ. ಬಹುತೇಕರು ಸ್ಕೈವಾಕ್‌ನ ಕೆಳಭಾಗದಲ್ಲಿ ನಿಂತು ಬಸ್‌ಗಳನ್ನು ಎದುರು ನೋಡುತ್ತಿರುತ್ತಾರೆ.

ಕಾಲ್‌ಟೆಕ್ಸ್‌ ವೃತ್ತದ ಸಮೀಪ(ಗುಬ್ಬಿ ಗೇಟ್‌ ರಸ್ತೆ) ಕೆ.ಲಕ್ಕಪ್ಪ ವೃತ್ತದಲ್ಲಿ ಬಸ್‌ ತಂಗುದಾಣ ಕಟ್ಟಲಾಗಿದೆ. ಆದರೆ, ಅಲ್ಲಿ ಬಸ್‌ಗಳ ನಿಲುಗಡೆ ಮಾಡುವುದಿಲ್ಲ. ಹಾಗಾಗಿ ಜನರು ವೃತ್ತದ ಬಂದಿಯಲ್ಲೆ ಟೀ ಅಂಗಡಿಯೊಬ್ಬರು ಬೆಳೆಸಿರುವ ಚೆರ್ರಿ ಗಿಡದ ನೆರಳಿನಲ್ಲಿ ನಿಂತುಕೊಂಡೆ ಬಸ್‌ಗಾಗಿ ಕಾಯುತ್ತಾರೆ. ನಿಂತು–ನಿಂತು ಸಾಕಾಗಿ, ಕಾಲುನೋವು ಬಂದರೆ, ರಸ್ತೆ ಬದಿಯಲ್ಲಿ ಗ್ರಿಲ್‌ ಅಳವಡಿಸಲು ಜೋಡಿಸಿರುವ ಕಲ್ಲುಗಳ ಮೇಲೆ ಕೂರುತ್ತಾರೆ. 

ಕೆ.ಲಕ್ಕಪ್ಪ ವೃತ್ತದ ತಂಗುದಾಣದ ಮುಂಭಾಗ ಬೈಕ್‌ಗಳ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ತಂಗುದಾಣದಲ್ಲಿನ ಬೆಂಚುಗಳವರೆಗೂ ಹೋಗಲು ಪ್ರಯಾಣಿಕರಿಗೆ ದಾರಿಯಿಲ್ಲದಂತಾಗುತ್ತದೆ.

ಗುಬ್ಬಿ ಗೇಟ್‌ನಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ತಂಗುದಾಣದ ಸ್ಥಿತಿಯೂ ಹೇಳಿಕೊಳ್ಳುವಂತೆ ಇಲ್ಲ. ಇಲ್ಲಿಯೂ ಕುರ್ಚಿಗಳು ತುಕ್ಕು ಹಿಡಿದ ಮುರಿದಿವೆ. ಚಾವಣಿಯ ರಚನೆಯೂ ಹಾಳಾಗಿದೆ. ಬೆಳಕಿಗಾಗಿ ಅಳವಡಿಸಿದ್ದ ಟೂಬ್‌ಲೈಟ್‌ಗಳು ಕಾಣೆಯಾಗಿವೆ. ವೈರ್‌ಗಳು ಜೋತು ಬಿದ್ದಿವೆ. ಇಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿರುವುದರಿಂದ ತಂಗುದಾಣದ ಸ್ವಚ್ಛತೆ, ಸೌಂದರ್ಯವೇ ಹಾಳಾಗಿದೆ.

ಕೇಂದ್ರ ಬಸ್‌ ನಿಲ್ದಾಣದಿಂದ ಅಂತರಸನಹಳ್ಳಿ ಮಾರುಕಟ್ಟೆಗೆ ಹೋಗುವ ದಾರಿಯ ಬದಿಯಲ್ಲಿ ಇರುವ ತಂಗುದಾಣಗಳು ಸುಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಇವುಗಳನ್ನು ಬಳಸುವ ಉಸಾಬರಿಗೆ ಜನರು ಹೋಗುತ್ತಿಲ್ಲ. ಹಾಗಾಗಿ ಇವು ಪಾಲು ಬಿದ್ದ ಜಾಗದಂತಾಗಿವೆ.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಹೊಂದಿಕೊಂಡಂತೆ ಇರುವ ತಂಗುದಾಣವನ್ನು ಬಳಸುವುದನ್ನೆ ಜನರು ಮರೆತ್ತಿದ್ದಾರೆ. ಇಲ್ಲಿಯೂ ದೂಳು ಎತ್ತೇಚ್ಚವಾಗಿದೆ. ಅಳವಡಿಸಿರುವ ಟೂಬ್‌ಲೈಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ.

ಪುರಭವನ ಮುಂಭಾಗದ ಸ್ಕೈವಾಕ್‌ ಕೆಳಗೂ ಬಸ್‌ಗಳನ್ನು ನಿಲ್ಲಿಸುತ್ತಾರೆ. ಆದರೆ, ಇಲ್ಲಿ ಕುಂತು ಕಾಯಲು ತಂಗುದಾಣದ ವ್ಯವಸ್ಥೆ ಇಲ್ಲ. ಜನರು ಸ್ಕೈವಾಕ್‌ನ ಸ್ತಂಭಗಳ ಆಧಾರಕ್ಕಾಗಿ ಕಟ್ಟಿರುವ ಕಟ್ಟಿಯ ಅಂಚಿನಲ್ಲೆ ಕೂರುತ್ತಾರೆ. ಇಲ್ಲವೇ ಸ್ಕೈವಾಕ್‌ನ ನೆರಳನ್ನು ಆಶ್ರಯಿಸುತ್ತಾರೆ. 

ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಿಂದ ಗುಬ್ಬಿ ಗೇಟ್‌ವರೆಗೆ ಬರುವ ಎಡಬದಿಯ ದಾರಿಯಲ್ಲಿ ತಂಗುದಾಣಗಳ ಸೌಕರ್ಯವಿಲ್ಲ. ಜನರು ರಸ್ತೆ ಬದಿ ಬೆಳೆದಿರುವ ಮರಗಳ ನೆರಳನ್ನು ಅವಲಂಬಿಸಿದ್ದಾರೆ. ಇಲ್ಲದಿದ್ದರೆ, ಅಂಗಡಿ–ಮುಂಗಟ್ಟುಗಳ ಮುಂಭಾಗದಲ್ಲಿ ನಿಂತು ಬಸ್‌ಗಾಗಿ ಕಾಯುತ್ತಾರೆ.

ನಗರದ ಸಿದ್ಧಗಂಗಾ ಪದವಿಪೂರ್ವ ಕಾಲೇಜು ಬಳಿಯಲ್ಲಿ ಎರಡು ಬಸ್‌ ಶೆಲ್ಟರ್‌ಗಳಿದ್ದರೂ ಒಂದು ಶೆಲ್ಟರ್‌ ಕುಡುಕರಿಗೂ ಮೀಸಲಿಟ್ಟಂತಿದ್ದು, ಬಸ್‌ಗಾಗಿ ಪ್ರಯಾಣಿಕರು ರಸ್ತೆಯಲ್ಲೇ ಕಾಯುವ ಸ್ಥಿತಿ ಕಂಡುಬರುತ್ತಿದೆ.

ಕುಣಿಗಲ್‌ ರಸ್ತೆ ಲೋಕೋಪಯೋಗಿ, ಬಂದರು ಮತ್ತು ಜಲಸಾರಿಗೆ ಕಚೇರಿ ಬಳಿಯಿರುವ ಕೆ.ಲಕ್ಕಪ್ಪ ವೃತ್ತದಲ್ಲಿನ ಶೆಲ್ಟರ್‌ಗಳು ಪ್ರಯಾಣಿಕರಿಂದ ದೂರವೇ ಉಳಿದಿದೆ. ಧೂಳು ಹಿಡಿದ, ಬೀಡಿ ಸಿಗರೇಟಿನ ತುಂಡುಗಳು ಅಲ್ಲಲ್ಲೇ ಬಿದ್ದಿದ್ದು ಕಂಡುಬರುತ್ತಿದೆ. ಪಕ್ಕದಲ್ಲೇ ಕಸದ ರಾಶಿಯೂ ಕಾಣುತ್ತಿದ್ದು, ಬಸ್‌ಗಳನ್ನು ಶೆಲ್ಟರ್‌ಗಿಂತ ಹಿಂದೆಯೇ ನಿಲ್ಲಿಸಲಾಗುತ್ತಿದೆ.

ಸದಾಶಿವ ನಗರದಲ್ಲಿನ ನಿಲ್ದಾಣದಲ್ಲಿ ಸಮಯ ತೋರಿಸುವ ನಾಮಫಲಕ ಕೆಟ್ಟು ಹೋಗಿದ್ದು, ಬಸ್‌ಗಾಗಿ ಜನರು ಕಾಯುತ್ತಿರುವುದು ಹೆಚ್ಚಾಗಿಯೇ ಕಾಣುತ್ತಿತ್ತು.

ಸದಾಶಿವನಗರದ ಬನಶಂಕರಿ ವೃತ್ತದಲ್ಲಿ ಬಸ್‌ ಶೆಲ್ಟರ್‌ ಪಕ್ಕದಲ್ಲೇ ಕೊಳಚೆ ನೀರು ಹರಿಯುತ್ತಿದ್ದು, ಅತ್ತ ಕಡೆಗೆ ಯಾರೂ ಸುಳಿಯುವುದು ಕಾಣುತ್ತಿಲ್ಲ. ನಿಲ್ದಾಣದಿಂದ ಬಹುದೂರದಲ್ಲೇ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ. ತಕ್ಷಣಕ್ಕೆ ಇಲ್ಲೊಂದು ನಿಲ್ದಾಣವಿದೆ ಎಂದು ಗುರುತಿಸುವುದೇ ಕಷ್ಟ. ಕಾರ್ಯನಿರ್ವಹಿಸದ ಸೂಚನಾ ಫಲಕಗಳು ನಿಲ್ದಾಣದ ಎರಡೂ ಕಡೆಗೂ ಇದ್ದು ನಿಲ್ದಾಣ ಗೋಚರವಾಗುವುದಿಲ್ಲ. ಸಮೀಪದಲ್ಲೇ ಇರುವ ಹೊಟೇಲ್‌ನ ನೀರು ನಿಲ್ದಾಣದ ಪಕ್ಕದಲ್ಲೇ ಹರಿದು ಹೋಗುತ್ತಿದೆ.

ತಂಗುದಾಣ ಇಲ್ಲಿ–ನಿಲ್ಲುವುದು ಅಲ್ಲಿ: ನಗರದಲ್ಲಿ ಕಟ್ಟಿರುವ ತಂಗುದಾಣಗಳಲ್ಲಿಯೇ ಬಸ್‌ಗಳನ್ನು ನಿಲುಗಡೆ ಮಾಡುವ ಪರಿಪಾಠವನ್ನು ಚಾಲಕರು ಮರೆತ್ತಿದ್ದಾರೆ. ಜನರು ಸಹ ಕೆಲವು ತಂಗುದಾಣದಿಂದ ಹತ್ತಾರು ಮೀಟರ್‌ ದೂರದಲ್ಲಿಯೇ ಬಸ್‌ಗಾಗಿ ಕಾಯುವ ಪರಿಪಾಠ ಬೆಳಸಿಕೊಂಡಿದ್ದಾರೆ. ಇದರಿಂದ ಇರ್ವರಿಗೂ ತೊಂದರೆ ಆಗುತ್ತಿದೆ.

***

ಒಂದು ತಂಗುದಾಣ ಕಟ್ಟಿಕೊಡಿ

ಬಸ್‌ಗಳು ಬೇಗ ಬರುವುದಿಲ್ಲ. ಹಾಗಾಗಿ ರಸ್ತೆ ಬದಿಯಲ್ಲೇ ನಿಂತುಕೊಂಡು, ಸ್ನೇಹಿತರೊಂದಿಗೆ ಹರಟೆ ಹೊಡಯುತ್ತ ಬಸ್‌ಗಾಗಿ ಕಾಯುತ್ತಿರುತ್ತೇವೆ. ನಿಂತು ಕಾಯಲು ಸುಸ್ತು ಆಗುತ್ತದೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರಿಗಂತು ಬಹಳಾನೆ ತೊಂದರೆ ಆಗುತ್ತಿದೆ. ವಿಶ್ವವಿದ್ಯಾನಿಲಯ ಎದುರಿನ ಮನೆತಿಂಡಿ ಹೊಟೆಲ್‌ ಮುಂಭಾಗ ತಂಗುದಾಣ ಬೇಕು.

ಜೆ.ಜಗದೀಶ್‌, ವಿದ್ಯಾರ್ಥಿ, ತುಮಕೂರು ವಿ.ವಿ.

***

ಸ್ವಚ್ಛತೆಯ ಕೊರತೆ

ಜನರು ತಂಗುದಾಣದಲ್ಲಿ ನಿಂತುಕೊಂಡು ಬಸ್‌ಗಾಗಿ ಕಾಯುವುದಿಲ್ಲ. ಚಾಲಕರು ಸಹ ತಂಗುದಾಣದಲ್ಲಿ ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಇಬ್ಬರದೂ ತಪ್ಪಿದೆ. ತಂಗುದಾಣದಲ್ಲಿ ಹೆಚ್ಚು ದೂಳು ಇರುತ್ತೆ, ಸ್ವಚ್ಛತೆಯ ಕೊರತೆ ಇದೆ. ಹಾಗಾಗಿ ಆ ಸೌಲಭ್ಯವನ್ನು ಬಳಸಿಕೊಳ್ಳಲು ಜನರು ಹಿದೇಟು ಹಾಕುತ್ತಿದ್ದಾರೆ.

ಡಿ.ಆರ್.ನಾಗರಾಜ್, ದೊಡ್ಡನಾರವಂಗಲ

***

ಜನರದ್ದೆ ತಪ್ಪು

ಮಹಾನಗರ ಪಾಲಿಕೆಯವರು ಸೂಕ್ತ ಜಾಗಗಳನ್ನು ಗುರುತಿಸಿಯೇ ತಂಗುದಾಣಗಳನ್ನು ಕಟ್ಟಿದ್ದಾರೆ. ತಂಗುದಾಣಗಳ ರಚನೆಯೂ ಚನ್ನಾಗಿದೆ. ಅದನ್ನು ಸಾರ್ವಜನಿಕರೆ ಸರಿಯಾಗಿ ಬಳಸುತ್ತಿಲ್ಲ. ಪ್ರಯಾಣಿಕರು ತಂಗುದಾಣದಲ್ಲಿ ನಿಂತುಕೊಂಡೆ ಬಸ್‌ಗಾಗಿ ಕಾಯಬೇಕು. ಚಾಲಕ ಒಂದು ವೇಳೆ ಬಸ್‌ ನಿಲ್ಲಿಸದಿದ್ದರೆ, ದೂರು ನೀಡುವ ಮಾರ್ಗವಂತೂ ಇದ್ದೇ ಇದೆ.

ಬಿ.ಆರ್.ಸುರೇಶ್ ಬಾಬು, ವಿನೋಬನಗರ

***

ಬಿಸಿಲು, ಮಳೆ, ಚಳಿ ತಡೆಯಬೇಕು

ಬಸ್‌ ತಂಗುದಾಣಗಳ ಕೊರತೆ ಇದೆ. ಬಹುತೇಕ ತಂಗುದಾಣಗಳಲ್ಲಿನ ಅವ್ಯವಸ್ಥೆಯಿಂದ ಜನರು ಬಿಸಿಲು, ಮಳೆ, ಚಳಿಯನ್ನೂ ಸಹಿಸಿಕೊಂಡು ಬಸ್‌ಗಾಗಿ ಕಾಯಬೇಕಿದೆ. ಗುಬ್ಬಿ ಗೇಟ್‌ ಸುತ್ತಮುತ್ತಲಿನ ತಂಗುದಾಣಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಎಸ್‌.ಪಿ.ಆಫೀಸ್‌ ಮುಂಭಾಗದ ಬಸ್‌ ನಿಲುಗಡೆಯಲ್ಲಿಯೂ ತಂಗುದಾಣ ನಿರ್ಮಿಸಬೇಕು.

ಬಿ.ಟಿ.ಗೋಪಾಲಕೃಷ್ಣ, ಎಸ್‌.ಐ.ಟಿ. ಎಕ್ಸ್‌ಟೆನ್ಷನ್‌

*

ಕುಡಿಯುವ ನೀರಿದ್ದರೂ ಉತ್ತಮ

ಬಸ್‌ ನಿಲುಗಡೆ ಇರುವ ಕಡೆ ತಂಗುದಾಣಗಳನ್ನು ಕಟ್ಟಲೇಬೇಕು. ಅಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಿದರೆ ಇನ್ನೂ ಉತ್ತಮ. ಟೌನ್‌ಹಾಲ್‌ ಸಮೀಪದ ಸ್ಕೈವಾಕ್‌ ಕೆಳಗೆಯೇ ಜನರು ನಿಂತುಕೊಂಡು ಬಸ್‌ಗಾಗಿ ಕಾಯುತ್ತಾರೆ. ಇಲ್ಲಿ ಬಸ್‌ ಶೆಲ್ಟರ್‌ ಇದ್ದರೆ, ಜನರಿಗೆ ಅನುಕೂಲ ಆಗುತ್ತಿತ್ತು.

ಸಿಂಧೂ ಎಚ್.ಜಿ., ಮೇಳೆಕೋಟೆ

***

ದಿನಂಪ್ರತಿ ನೂರಾರು ಜನರು ಬಸ್‌ಗಾಗಿ ಕಾಯುವ ಶೆಲ್ಟರ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಿಲ್ದಾಣಗಳಲ್ಲೇ ಬಸ್‌ ನಿಲ್ಲಿಸುವಂತಾಗಬೇಕು. ಜೊತೆಗೆ ಸಿಸಿ ಕ್ಯಾಮರಾಗಳನ್ನೂ ಅಳವಡಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಗಮನ ಕೊಟ್ಟರೆ ಬಸ್‌ಗಾಗಿ ರಸ್ತೆಯಲ್ಲಿ ನಿಲ್ಲುವ ಬದಲಿಗೆ ನಿಲ್ದಾನಗಳಲ್ಲೇ ನಿಲ್ಲಲು ಹೆಚ್ಚು ಅನುಕೂಲವಾಗುತ್ತದೆ.

ಆಶಾ, ವಿದ್ಯಾರ್ಥಿನಿ

*

ಬಸ್‌ ಶೆಲ್ಟರ್‌ ಮರು ನಿರ್ಮಾಣ

ಭದ್ರಮ್ಮ ವೃತ್ತದಿಂದ ಬಟವಾಡಿ ವೃತ್ತದವರೆಗೆ 9 ಬಸ್‌ ಶೆಲ್ಟರ್‌, ಟುಡಾದ 1 ಬಸ್‌ಶೆಲ್ಟರ್‌ ಮರುನಿರ್ಮಾಣಕ್ಕೆ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ಒಟ್ಟು 10 ನಿಲ್ದಾಣಗಳಿಗೆ ₹ 20ಲಕ್ಷ ಖರ್ಚು ಆಗಲಿದೆ. ಬಣ್ಣ ಬಳಿಯುವುದು, ಹಾಳಾಗಿರುವ ಶೀಟ್‌ಗಳನ್ನು ತೆಗೆದು ಹೊಸ ಶೀಟ್‌ ಅಳವಡಿಸಲಾಗುವುದು. ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸ್ಥಳ ಗುರುತು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಅವಶ್ಯಕತೆ ಬಂದಾಗ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ರಶ್ಮಿ, ಸ್ಮಾರ್ಟ್‌ ಸಿಟಿ ಎಇಇ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.