ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಟ್ರಾಫಿಕ್‌ ನಿವಾರಣೆಗೆ ಸ್ಮಾರ್ಟ್‌ ಸಿಗ್ನಲ್‌

13 ಕಡೆಗಳಲ್ಲಿ ಸಿಗ್ನಲ್‌ ಅಳವಡಿಕೆ, ಸುಗಮ ಸಂಚಾರಕ್ಕೆ ಸಹಾಯ
Last Updated 18 ಜನವರಿ 2023, 14:39 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿನ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಸ್ಮಾರ್ಟ್‌ ಸಿಟಿಯಿಂದ ಸೆನ್ಸಾರ್‌ ನಿಯಂತ್ರಿತ ‘ಸ್ಮಾರ್ಟ್‌ ಸಿಗ್ನಲ್‌’ ಅಳವಡಿಸಿದ್ದು, ವಾಹನ ಸವಾರರು ಸಿಗ್ನಲ್‌ನಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಿದೆ.

ಬಟವಾಡಿ, ಬಿಜಿಎಸ್‌ ವೃತ್ತ, ಎಸ್‌.ಎಸ್‌.ವೃತ್ತ, ರಿಂಗ್‌ ರಸ್ತೆ ಸೇರಿದಂತೆ ನಗರ ಹಾಗೂ ರಿಂಗ್ ರಸ್ತೆಯಲ್ಲಿ ಒಟ್ಟು 13 ಕಡೆಗಳಲ್ಲಿ ಸ್ಮಾರ್ಟ್‌ ಸಿಗ್ನಲ್‌ ಅಳವಡಿಸಲಾಗಿದೆ. ಈ ಹಿಂದಿನಂತೆ ಟ್ರಾಫಿಕ್‌ನಲ್ಲಿ ಕಾಯುವುದನ್ನು ತಪ್ಪಿಸುವ ಉದ್ದೇಶದಿಂದ ಹೊಸ ಯೋಜನೆ ರೂಪಿಸಲಾಗಿದೆ. ರಸ್ತೆಯಲ್ಲಿ ನಿಂತಿರುವ ವಾಹನಗಳ ಸಂಖ್ಯೆಯನ್ನು ಗಮನಿಸಿ, ಅದಕ್ಕೆ ಅನುಗುಣವಾಗಿ ಸಿಗ್ನಲ್‌ ಕೆಲಸ ಮಾಡಲಿದೆ.

ಹೊಸದಾಗಿ ‘ಅಡೆಪ್ಟಿವ್‌ ಟ್ರಾಫಿಕ್‌ ಕಂಟ್ರೋಲ್‌ ಸಿಸ್ಟಮ್‌’ ಅಳವಡಿಸಲಾಗಿದೆ. ಈ ಹಿಂದೆ ಒಂದು ಮಾರ್ಗದಲ್ಲಿ ವಾಹನಗಳು ಬರದೇ ಇದ್ದರೂ, ಮತ್ತೊಂದು ಬದಿಯಲ್ಲಿ ಇದ್ದವರು ನಿಗದಿತ ಸಮಯದವರೆಗೂ ಕಾಯಬೇಕಿತ್ತು. ಆದರೆ, ಸೆನ್ಸಾರ್‌ ಮಾದರಿಯಿಂದಾಗಿ ಇದಕ್ಕೆ ಕಡಿವಾಣ ಹಾಕಲಾಗಿದೆ. ವಾಹನ ದಟ್ಟಣೆ ಇಲ್ಲದ ಕಡೆ ಕೂಡಲೇ ‘ರೆಡ್‌ ಸಿಗ್ನಲ್‌’ ಬೀಳುತ್ತದೆ. ಇದರಿಂದ ಇನ್ನೊಂದು ಬದಿಯಿಂದ ಬರುವವರಿಗೆ ಅನುಕೂಲವಾಗಲಿದೆ. ಕ್ಯಾತ್ಸಂದ್ರದ ಬಳಿ ಹೊರತುಪಡಿಸಿ, ನಗರದ ಎಲ್ಲ ಕಡೆಗಳಲ್ಲಿ ಈ ಸಿಗ್ನಲ್‌ ಕಾರ್ಯ ನಿರ್ವಹಿಸುತ್ತಿದೆ.

ಎರಡು ಹಂತದಲ್ಲಿ ಸಿಗ್ನಲ್‌ ಅಳವಡಿಸುವ ಕಾರ್ಯ ನಡೆದಿತ್ತು. ಮೊದಲ ಹಂತದಲ್ಲಿ ಯಶಸ್ವಿಯಾಗಿ, ಟ್ರಾಫಿಕ್‌ ನಿಯಂತ್ರಣಕ್ಕೆ ಬಂದ ನಂತರ ಎರಡನೇ ಹಂತದಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲಾಗಿದೆ. ಪ್ರತಿ ಸಿಗ್ನಲ್‌ನಲ್ಲಿ ಎರಡು ಸೆನ್ಸಾರ್‌ಗಳು ಕೆಲಸ ಮಾಡಲಿದ್ದು, ಕ್ಯಾಮೆರಾ ಮೂಲಕ ಒಂದು ಸೆನ್ಸಾರ್‌ ಕಾರ್ಯನಿರ್ವಹಿಸುತ್ತದೆ.

ಸುಮಾರು ₹40 ಕೋಟಿ ವೆಚ್ಚದಲ್ಲಿ ಸಿಗ್ನಲ್‌, ಸಿ.ಸಿ ಕ್ಯಾಮೆರಾ ಅಳವಡಿಕೆ ಮತ್ತು ಐದು ವರ್ಷದ ನಿರ್ವಹಣೆಯನ್ನು ಸ್ಮಾರ್ಟ್‌ ಸಿಟಿಯಿಂದ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ವಿವಿಧ ಸಿಗ್ನಲ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಕೂಡಲೇ ಸ್ಥಳಕ್ಕೆ ತೆರಳಿ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಸಂಪೂರ್ಣ ನಿರ್ವಹಣೆ ಖಾಸಗಿ ಸಂಸ್ಥೆ ನೋಡಿಕೊಳ್ಳುತ್ತಿದೆ.

ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ‘ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್’ ರಚಿಸಲಾಗಿದೆ. ಇಲ್ಲಿಂದ ವಿವಿಧೆಡೆ ಅಳವಡಿಸಿರುವ ಸಿ.ಸಿ ಟಿ.ವಿಗಳ ಮೂಲಕ ಸಂಚಾರ ದಟ್ಟಣೆ ವೀಕ್ಷಿಸಿ, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸೆಂಟರ್‌ನಲ್ಲಿ 33 ಜನ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ಹೊಸ ಸಿಗ್ನಲ್‌ ಅಳವಡಿಕೆಯಿಂದಾಗಿ ವಾಹನ ಸವಾರರಿಗೆ ಸಮಯದ ಉಳಿತಾಯ ಆಗುತ್ತಿದೆ. ಈ ಹಿಂದೆ ಅನಗತ್ಯವಾಗಿ ಟ್ರಾಫಿಕ್‌ನಲ್ಲಿ ಕಾಯಬೇಕಾಗಿತ್ತು. ಹೊಸ ವಿಧಾನದಿಂದಾಗಿ ಹಲವು ರೀತಿಯಲ್ಲಿ ಪ್ರಯೋಜನವಾಗಲಿದೆ. ವಾಹನ ಸವಾರರಿಗೆ ಟ್ರಾಫಿಕ್‌ ಕಿರಿಕಿರಿ ಕಡಿಮೆಯಾಗಿದೆ.

312 ಕಡೆ ಸಿ.ಸಿ ಟಿ.ವಿ ಕ್ಯಾಮೆರಾ

ನಗರದ 312 ಕಡೆಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರಿಗೆ ಇವು ಸಹಾಯಕವಾಗಲಿವೆ. ಸದ್ಯ ಯಾವುದೇ ಅನಾಹುತ ಸಂಭವಿಸಿದರೂ ಕ್ಯಾಮೆರಾಗಳ ಮೂಲಕ ತ್ವರಿತ ಗತಿಯಲ್ಲಿ ತಿಳಿಯಬಹುದಾಗಿದೆ. ಕಳ್ಳತನ ಸೇರಿದಂತೆ ಇತರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಪತ್ತೆಗೂ ನೆರವಾಗುತ್ತಿವೆ.

ನಗರದ 41 ಕಡೆಗಳಲ್ಲಿ ತುರ್ತು ಸಮಯಕ್ಕೆ ಸ್ಪಂದಿಸುವ ಸಿಗ್ನಲ್‌ ಕೂಡ ಅಳವಡಿಸಲಾಗಿದೆ. ತುರ್ತು ವೇಳೆಯಲ್ಲಿ 112 ಮತ್ತು ಪೊಲೀಸರಿಗೆ ಸಿಗ್ನಲ್‌ ಮೂಲಕ ಮಾಹಿತಿ ನೀಡಬಹುದಾಗಿದೆ. ಅಪಘಾತ, ಬೆಂಕಿ ಅವಘಡ ಒಳಗೊಂಡಂತೆ ಇತರೆ ಸಂದರ್ಭಗಳಲ್ಲಿ ಕೂಡಲೇ ಮಾಹಿತಿ ರವಾನಿಸಬಹುದಾಗಿದೆ. ಈ ಬಗ್ಗೆ ಎಲ್ಲರಿಗೆ ಮಾಹಿತಿ ನೀಡುವ ಕೆಲಸವೂ ನಡೆಯುತ್ತಿದೆ.

1.41 ಲಕ್ಷ ಜನರಿಗೆ ನೋಟಿಸ್‌

ಸಂಚಾರದ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸಿದವರನ್ನು ಸೆನ್ಸಾರ್‌ ಮೂಲಕ ಕಂಡು ಹಿಡಿಯಲಾಗುತ್ತಿದೆ. ಒಂದು ಬೈಕ್‌ನಲ್ಲಿ ಮೂರು ಜನ ಹೋಗುವುದು, ಹೆಲ್ಮೆಟ್‌ ಹಾಕದಿರುವುದು, ಸಿಗ್ನಲ್‌ ಇದ್ದಾಗಲೇ ರಸ್ತೆ ದಾಟುವ ಕೆಲಸ ಮಾಡಿದವರನ್ನು ಗುರುತಿಸಿ ಅಂತಹವರಿಗೆ ನೋಟಿಸ್‌ ನೀಡಲಾಗುತ್ತಿದೆ. ಪೊಲೀಸರ ಮೂಲಕ ದಂಡ ವಿಧಿಸಿ, ವಸೂಲಿ ಮಾಡಲಾಗುತ್ತಿದೆ.

ಕಳೆದ ಒಂದು ವರ್ಷದಿಂದ ಇದೇ ರೀತಿಯಾಗಿ ನಗರದಲ್ಲಿ ಟ್ರಾಫಿಕ್‌ ನಿಯಂತ್ರಿಸಲಾಗುತ್ತಿದೆ. ಈ ಅವಧಿಯಲ್ಲಿ ನಗರದ ವಿವಿಧೆಡೆ ಸಂಚಾರ ನಿಯಮ ಉಲ್ಲಂಘಿಸಿದ 1.41 ಲಕ್ಷಕ್ಕೂ ಹೆಚ್ಚು ಜನರಿಗೆ ನೋಟಿಸ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT