ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಹಣ ಮಾಡುತ್ತಿಲ್ಲ: ತುಮಕೂರು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್

Last Updated 13 ಸೆಪ್ಟೆಂಬರ್ 2020, 6:24 IST
ಅಕ್ಷರ ಗಾತ್ರ

ತುಮಕೂರು: ‘ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕೊರೊನಾ ಭಯ ಕಡಿಮೆಯಾಗಿದೆ. ಈ ಭಯವನ್ನೇ ಅಸ್ತ್ರ ಮಾಡಿಕೊಂಡು ಅಧಿಕಾರಿಗಳು, ರಾಜಕಾರಣಿಗಳು ಹಣಮಾಡುವ ದಂಧೆ ಮಾಡಿಕೊಂಡಿದ್ದಾರೆ ಎಂಬ ತಪ್ಪು ಅಭಿಪ್ರಾಯ ಮೂಡಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅಭಿಪ್ರಾಯಪಟ್ಟರು.

ಕರ್ನಾಟಕ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಅಸೋಸಿಯೇಷನ್, ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಾಜಿಸ್ಟ್ ಅಸೋಸಿಯೇಷನ್, ಸರ್ಕಾರಿ ವೈದ್ಯಕೀಯ ಪ್ರಯೋಗ ಶಾಲಾ ತಂತ್ರಜ್ಞರ ಸಂಘ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ ಪ್ರಯೋಗಾಲಯ ತಂತ್ರಜ್ಞರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸಾರ್ವಜನಿಕರಲ್ಲಿ ಮೂಡಿರುವ ತಪ್ಪು ಅಭಿಪ್ರಾಯ ಹೋಗಲಾಡಿಸಬೇಕಿದೆ. ಈ ನಿಟ್ಟಿನಲ್ಲಿ ಕೊರೊನಾ ತಡೆಗಟ್ಟುವಲ್ಲಿ ತೊಡಗಿಸಿಕೊಂಡಿರುವ ವಾರಿಯರ್ಸ್‌ಗಳು ಜಾಗೃತಿ ಮೂಡಿಸಬೇಕಿದೆ. ಇದೊಂದು ಭಯಾನಕ ಕಾಯಿಲೆ ಎಂಬುದು ಮನದಟ್ಟಾಗಬೇಕಿದೆ. ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಪ್ರಯೋಗಾಲಯ ತಂತ್ರಜ್ಞರ ಪಾತ್ರ ಬಹಳ ಮಹತ್ವದ್ದು. ಅವರ ಸೇವೆಯನ್ನು ಮರೆಯುವಂತಿಲ್ಲ ಎಂದು ಹೇಳಿದರು.

ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಆತಂಕ ಇತ್ತು. ತಂತ್ರಜ್ಞರ ಅಭಯ ಸಿಕ್ಕ ನಂತರ ಪ್ರಯೋಗಾಲಯಗಳನ್ನು ವಿಸ್ತರಿಸಿ, ಇಲ್ಲಿಯೇ ಗಂಟಲು ದ್ರವ ತೆಗೆದು ಪರೀಕ್ಷೆಗೆ ಒಳಪಡಿಸಲಾಯಿತು. ಪ್ರಸ್ತುತ ತಿಪಟೂರಿನಲ್ಲೂ ಪ್ರಯೋಗಾಲಯ ತೆರೆದು ಕೊರೊನಾ ಸೋಂಕು ಪರೀಕ್ಷಿಸಲಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ‘ಆರಂಭದಲ್ಲಿ ಕೋವಿಡ್ ಎದುರಿಸಲು ದೇಶ ಸಜ್ಜಾಗಿರಲಿಲ್ಲ. ಹಂತ ಹಂತವಾಗಿ ತಡೆಗಟ್ಟುವ ಸಾಮರ್ಥ್ಯ ಬೆಳೆಸಿಕೊಳ್ಳಲಾಯಿತು. ಎಲ್ಲಾ ಇಲಾಖೆಗಳ ಸಹಕಾರದಿಂದ ಜಿಲ್ಲೆ ರೇಡ್‍ ಜೋನ್‌ಗೆ ಹೋಗುವುದನ್ನು ತಡೆಯಲು ಸಾಧ್ಯವಾಯಿತು’ ಎಂದು ಹೇಳಿದರು.

ಪ್ರಯೋಗಾಲಯ ತಂತ್ರಜ್ಞರು, ಸಿಬ್ಬಂದಿಗೆ ವಾರಕ್ಕೆ ಒಂದು ದಿನ ರಜೆ ನೀಡುವ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗಿದೆ. ತುರ್ತು ಸೇವೆ ಎಂದು ಪರಿಗಣಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು.

ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರ ಸಂಘದ ಅಧ್ಯಕ್ಷ ಬೆಳ್ಳಿ ಲೋಕೇಶ್, ತಂತ್ರಜ್ಞರ ಸಂಘಟನೆಗಳ ಪದಾಧಿಕಾರಿಗಳಾದ ವೆಂಕಟಸ್ವಾಮಿ, ನಾರಾಯಣಸ್ವಾಮಿ, ಪದ್ಮಣ್ಣ, ನಾಗರಾಜು, ದ್ಯಾಮಣ್ಣ, ಸುರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT