ಗುರುವಾರ , ಜುಲೈ 29, 2021
24 °C

ಬೇಡಿಕೆ ಈಡೇರಿಕೆಗೆ ಗ್ರಾ.ಪಂ ನೌಕರರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕಳೆದ 2 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ನೌಕರರ ವೇತನ ಪಾವತಿಗೆ ಬೇಕಾಗಿರುವ ಹಣವನ್ನು ಸರ್ಕಾರವೇ ಭರಿಸುವ ತೀರ್ಮಾನ ಮಾಡಿರುವುದು ಸ್ವಾಗತಾರ್ಹ. ಆದರೆ ಅನುದಾನವನ್ನೇ ನೀಡುತ್ತಿಲ್ಲ. ರಾಜ್ಯದ 6025 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6500 ಸಿಬ್ಬಂದಿಗೆ ₹900 ಕೋಟಿ ಬೇಕಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ಕೇವಲ ₹518 ಕೋಟಿ ಮಾತ್ರವೇ ಮಂಜೂರಾತಿ ನೀಡಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

2 ವರ್ಷಗಳಿಂದ ಸಿಬ್ಬಂದಿ ವೇತನ ಬಾಕಿ ಉಳಿದಿದೆ. 3 ತಿಂಗಳಿಗೊಮ್ಮೆ ಬಿಡುಗಡೆಯಾದ ಕಂತಿನ ಹಣದಲ್ಲಿ 2 ತಿಂಗಳ ವೇತನಕ್ಕೆ ಹಣ ಸಾಕಾಗುತ್ತದೆ. ಹಾಗಾಗಿ ಬಾಕಿ ಇರುವ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಅಲ್ಲದೆ, ಎಲ್ಲಾ ಸಿಬ್ಬಂದಿಯ ವೇತನಕ್ಕಾಗಿ ಕೊರತೆ ಇರುವ ₹382 ಕೋಟಿ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಮಂಜೂರಾತಿ ಕೊಡಿಸಬೇಕು, ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ, ಕರವಸೂಲಿಗಾರರ ಮತ್ತು ಕಂಪ್ಯೂಟರ್ ಆಪರೇಟರ್ ಬಡ್ತಿ ಪ್ರಮಾಣವನ್ನು ನೂರರಷ್ಟು ಹೆಚ್ಚಳ ಮಾಡಬೇಕು, ಎಲ್ಲಾ ಸಿಬ್ಬಂದಿಗೆ ಪಿಂಚಣಿ ನೀಡಬೇಕು, ವೈದ್ಯಕೀಯ ವೆಚ್ಚ ಭರಿಸುವುದೂ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಶೀಘ್ರವೇ ಬಗೆಹರಿಸುವಂತೆ ಆಗ್ರಹಿಸಿದರು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾ ಸಮಿತಿ ಅಧ್ಯಕ್ಷ ಎನ್.ಕೆ.ಸುಬ್ರಹ್ಮಣ್ಯ, ಖಜಾಂಚಿ ರಂಗನಾಥ್, ಪ್ರಧಾನ ಕಾರ್ಯದರ್ಶಿ ಎಚ್.ಡಿ.ನಾಗೇಶ್ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು