ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಹೆಚ್ಚಿದ ಕಳ್ಳತನ- ರಸ್ತೆಗಿಳಿಯದ ಸ್ಮಾರ್ಟ್‌ ಬೈಕ್‌

ಇದುವರೆಗೆ 50 ಬ್ಯಾಟರಿ ಕಳವು, ಒಂದೇ ವಾರದಲ್ಲಿ ಗ್ಯಾರೇಜ್‌ ಸೇರಿದ 30 ಬೈಕ್‌
ಮೈಲಾರಿ ಲಿಂಗಪ್ಪ
Published 1 ಜೂನ್ 2024, 7:54 IST
Last Updated 1 ಜೂನ್ 2024, 7:54 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಪರಿಚಯಿಸಿದ್ದ ಇ–ಬೈಕ್‌ಗಳ ಬ್ಯಾಟರಿ ಕಳ್ಳತನ ಹೆಚ್ಚಾಗುತ್ತಿದ್ದು, ಇದುವರೆಗೆ 50 ಬ್ಯಾಟರಿ ಕಳವು ಮಾಡಲಾಗಿದೆ. ಕಳ್ಳರಿಗೆ ಹೆದರಿ ಬೈಕ್‌ಗಳನ್ನು ರಸ್ತೆಗೆ ಇಳಿಸುತ್ತಿಲ್ಲ.

ಜನರ ಬಳಕೆಗಾಗಿ ತಂದಿದ್ದ ಬೈಕ್‌ಗಳು ಗೋದಾಮಿನಲ್ಲಿ ದೂಳು ಹಿಡಿಯುತ್ತಿವೆ. ಕಳೆದ ಒಂದೇ ವಾರದಲ್ಲಿ 5 ಬ್ಯಾಟರಿ ಕಳ್ಳತನ ಮಾಡಿದ್ದಾರೆ. 30ಕ್ಕೂ ಹೆಚ್ಚು ಬೈಕ್‌ಗಳು ಹಾನಿಯಾಗಿ ಗ್ಯಾರೇಜ್‌ ಸೇರಿವೆ. ಬೈಕ್‌ಗಳನ್ನು ಸರಿಪಡಿಸಿ ರಸ್ತೆಗೆ ಬಿಡುವುದು, ಮತ್ತೆ ಹಾನಿಯಾದ ಸ್ಥಿತಿಯಲ್ಲಿ ಬೈಕ್‌ಗಳನ್ನು ಗ್ಯಾರೇಜ್‌ಗೆ ತರುವುದು. ಇದೇ ಇಲ್ಲಿನ ಸಿಬ್ಬಂದಿಯ ನಿತ್ಯದ ಕಾಯಕವಾಗಿದೆ. ಬೈಕ್‌ಗಳ ನಿರ್ವಹಣೆಗೆ ಗುತ್ತಿಗೆ ಪಡೆದ ಸಂಸ್ಥೆಯವರು ಪರದಾಡುತ್ತಿದ್ದಾರೆ. ಯೋಜನೆಯ ಪ್ರಾರಂಭದಲ್ಲಿ ಉತ್ಸಾಹ ತೋರಿದವರು, ಈಗ ಇದರ ಸಹವಾಸವೇ ಬೇಡ ಎಂದುಕೊಳ್ಳುತ್ತಿದ್ದಾರೆ.

‘ಯಾನ’ ಆ್ಯಪ್‌ ಮೂಲಕ ಬೈಕ್‌ಗಳನ್ನು ಬಳಕೆಗೆ ಪಡೆಯುತ್ತಿದ್ದಾರೆ. ಯೋಜನೆಯ ಪ್ರಾರಂಭದಲ್ಲಿ ನಗರದ ಜನರು ಬೈಕ್‌, ಸೈಕಲ್‌ಗಳನ್ನು ಮನಸ್ಸಿಗೆ ಬಂದಂತೆ ಬಳಸಿದರು. ಆರಂಭದ 14 ತಿಂಗಳಲ್ಲಿ ಒಟ್ಟು ₹4.50 ಲಕ್ಷ ಹಣ ಸಂಗ್ರಹವಾಗಿತ್ತು. ಜನರು ಅಷ್ಟೇ ಪ್ರಮಾಣದಲ್ಲಿ ವಾಹನಗಳಿಗೆ ಹಾನಿ ಮಾಡಿದ್ದರು. ಬೈಕ್‌ ಬಳಸಿ ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದರು. ಹಲವಾರು ಬೈಕ್‌ಗಳು ಚಾಲನೆ ಮಾಡಲು ಆಗದಂತಹ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದವು. ನಂತರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೈಕ್‌ಗಳನ್ನು ಮೊದಲಿನ ಸ್ಥಿತಿಗೆ ತರಲಾಯಿತು.

ಮಕ್ಕಳು ಬೈಕ್‌ ಪಡೆದು ಓಡಿಸುತ್ತಿದ್ದರು. ಯದ್ವಾತದ್ವ ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಬೈಕ್‌ ಓಡಿಸಲು ಚಾಲನಾ ಪರವಾನಗಿ ಕಡ್ಡಾಯಗೊಳಿಸಲಾಯಿತು. ಲೈಸೆನ್ಸ್‌ ಇದ್ದವರು ಮಾತ್ರ ಬೈಕ್‌ ಓಡಿಸಲು ಅವಕಾಶ ನೀಡಲಾಯಿತು. ಇದರಿಂದ ಬಳಕೆ ಕಡಿಮೆಯಾಗಿದ್ದು ಬಿಟ್ಟರೆ, ಬೈಕ್‌ಗಳಿಗೆ ಹಾನಿ ಮಾಡುವುದು ಮಾತ್ರ ನಿಂತಿಲ್ಲ.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ₹2 ಕೋಟಿ ವೆಚ್ಚದಲ್ಲಿ 120 ಪರಿಸರ ಸ್ನೇಹಿ ಬೈಕ್‌ಗಳನ್ನು ಖರೀದಿಸಲಾಗಿತ್ತು. ಅವುಗಳಲ್ಲಿ ಸದ್ಯ 28 ಬೈಕ್‌ಗಳು ಮಾತ್ರ ರಸ್ತೆಗೆ ಇಳಿದಿವೆ. 30 ಬೈಕ್‌ಗಳ ರಿಪೇರಿ ಕಾರ್ಯ ನಡೆಯುತ್ತಿದ್ದು, ಉಳಿದ ಬೈಕ್‌ಗಳು ಉತ್ತಮ ಸ್ಥಿತಿಯಲ್ಲಿ ಇದ್ದರೂ ಜನರ ಬಳಕೆಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಬೈಕ್‌ನಲ್ಲಿ ಸುಮಾರು 70 ಕೆ.ಜಿ ತೂಕದ ಅಲ್ಯುಮಿನಿಯಂ ಬ್ಯಾಟರಿ ಇರುತ್ತದೆ. ಕೆಲವೊಬ್ಬರು ಬ್ಯಾಟರಿ ಖಾಲಿಯಾದ ತಕ್ಷಣಕ್ಕೆ ರಸ್ತೆಯ ಬದಿಯಲ್ಲಿಯೇ ಬೈಕ್‌ ಬಿಟ್ಟು ಹೋಗುತ್ತಿದ್ದಾರೆ. ಇನ್ನೂ ಕೆಲವರು ಬೈಕ್‌ಅನ್ನು ಎರಡು ಭಾಗ ಮಾಡಿ ಬ್ಯಾಟರಿ ಕದಿಯುತ್ತಿದ್ದಾರೆ. ಇಂತಹ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಯಾರೂ ಇಲ್ಲದ ನಿರ್ಜನ ಪ್ರದೇಶಕ್ಕೆ ಬೈಕ್‌ ತೆಗೆದುಕೊಂಡು ಹೋಗಿ ಅಲ್ಲಿಂದಲೇ ಬ್ಯಾಟರಿ ಕದಿಯುತ್ತಿದ್ದಾರೆ. ನಂತರ ಸ್ಮಾರ್ಟ್‌ ಸಿಟಿ ಸಿಬ್ಬಂದಿ ಬೈಕ್‌ನಲ್ಲಿರುವ ಜಿಪಿಎಸ್‌ ಆಧಾರದ ಮೇಲೆ ಬೈಕ್‌ ನಿಲ್ಲಿಸಿದ ಜಾಗ ಹುಡುಕಿಕೊಂಡು ಹೋಗಿ ವಾಪಸ್‌ ತರುತ್ತಿದ್ದಾರೆ.

ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ

ಕಳ್ಳರನ್ನು ಪತ್ತೆ ಹಚ್ಚುವ ಮತ್ತು ಕಳ್ಳತನ ತಡೆಯುವ ಉದ್ದೇಶದಿಂದ ನಗರದ ಪ್ರಮುಖ 10 ಸ್ಥಳಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಜಿಲ್ಲಾ ಕ್ರೀಡಾಂಗಣ ಸಿದ್ಧಗಂಗಾ ಆಸ್ಪತ್ರೆ ಮುಂಭಾಗ ವಿಶ್ವವಿದ್ಯಾಲಯ ಮುಂಭಾಗದಲ್ಲಿ ಕ್ಯಾಮೆರಾ ಕೆಲಸ ಮಾಡುತ್ತಿದೆ. ಕಳ್ಳರನ್ನು ಪತ್ತೆ ಹಚ್ಚಿ ಬ್ಯಾಟರಿ ವಾಪಸ್‌ ಕೊಡಿಸುವಂತೆ ಪೊಲೀಸ್‌ ಠಾಣೆಗೆ ದೂರು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಬೈಕ್‌ ಕಳ್ಳತನ ತಡೆಯಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಸ್ವಲ್ಪ ಗಮನ ಹರಿಸಿದರೆ ಇದಕ್ಕೆ ಕಡಿವಾಣ ಬೀಳಬಹುದು ಎಂದು ಸ್ಮಾರ್ಟ್‌ ಸಿಟಿ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಕುಸಿದ ಬಳಕೆ

ಈಗ ಬೈಕ್‌ ಸೈಕಲ್‌ ಬಳಕೆಯಿಂದ ಪ್ರತಿ ದಿನ ₹800ರಿಂದ ₹1 ಸಾವಿರ ಹಣ ಸಂಗ್ರಹವಾಗುತ್ತಿದೆ. ಪ್ರಾರಂಭದಲ್ಲಿ ಹೊಸದಾಗಿ ವಾಹನ ಬಳಕೆಗೆ ಜನರು ಆಸಕ್ತಿ ತೋರಿದರು. ದಿನ ಕಳೆದಂತೆ ಬೈಕ್‌ ಬಳಕೆ ಕಡಿಮೆಯಾಯಿತು. ಬೈಕ್‌ ಪಡೆಯಲು ಚಾಲನಾ ಪರವಾನಗಿ ಕಡ್ಡಾಯ ಮಾಡಿದ ಮೇಲೆ ಬೈಕ್‌ ಉಪಯೋಗಿಸುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT