ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಹೊಸ ಕ್ಯಾಂಪಸ್‌ಗಿಲ್ಲ ಬಿಡಿಗಾಸು!

ತುಮಕೂರು ವಿ.ವಿ: ಹಣ ಮಂಜೂರಾದರೂ ಬಿಡುಗಡೆಯಾಗಿಲ್ಲ
Last Updated 22 ಮೇ 2020, 5:10 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಬಿದರಕಟ್ಟೆ ಬಳಿ ತುಮಕೂರು ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಗ್ರಹಣ ಬಡಿದಿದೆ.

ಸರ್ಕಾರದ ನಿರಾಸಕ್ತಿಯ ಕಾರಣ ವಿ.ವಿ ಹೊಸ ಕ್ಯಾಂಪಸ್ ನಿರ್ಮಾಣ ಕಾಮಗಾರಿಗಳಿಗೆ ತನ್ನ ಆಂತರಿಕ ಸಂಪನ್ಮೂಲ ಬಳಸಿಕೊಳ್ಳಲು ಮುಂದಾಗಿದೆ.

240 ಎಕರೆ ವಿಸ್ತೀರ್ಣದಲ್ಲಿ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ 2017ರಲ್ಲಿ ಚಾಲನೆ ದೊರೆಯಿತು. ಆಗ ಆರಂಭದ ಕೆಲಸಗಳಿಗೆ ರಾಜ್ಯ ಸರ್ಕಾರ ₹5 ಕೋಟಿ ನೀಡಿತು. ವಸತಿನಿಲಯ ನಿರ್ಮಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ₹17.5 ಕೋಟಿ ಮಂಜೂರು ಮಾಡಿತ್ತು.

ಎರಡು ಹಂತಗಳಲ್ಲಿ ಕ್ಯಾಂಪಸ್ ನಿರ್ಮಾಣಕ್ಕೆ ಅಂದಿನ ಕುಲಪತಿ ಪ್ರೊ.ರಾಜಾಸಾಬ್ ಅಭಿವೃದ್ಧಿ ಯೋಜನೆ ಸಿದ್ಧಗೊಳಿಸಿದ್ದರು. ರಾಜ್ಯ ಸರ್ಕಾರ ಹಂತ ಹಂತವಾಗಿ ಹಣ ಮಂಜೂರು ಮಾಡುತ್ತದೆ ಎನ್ನುವ ವಿಶ್ವಾಸವನ್ನು ವಿ.ವಿ ಹೊಂದಿತ್ತು. ಆದರೆ ಕಾಮಗಾರಿಗೆ ಚಾಲನೆ ಕೊಟ್ಟ ನಂತರ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಹಣ ಬಿಡುಗಡೆ ಆಗದಿದ್ದರೆ ಸಹಜವಾಗಿ ನಿರ್ಮಾಣದ ಹಂತದ ಕಾಮಗಾರಿಗಳು ಸ್ಥಗಿತವಾಗುತ್ತವೆ. ಹೊಸ ಕ್ಯಾಂಪಸ್ ನಿರ್ಮಾಣ ವಿಳಂಬವಾಗುತ್ತದೆ.

ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಈಗಾಗಲೇ ₹ 28 ಕೋಟಿ ವ್ಯಯವಾಗಿದೆ. ಸರ್ಕಾರದಿಂದ 2017–18ನೇ ಸಾಲಿನಲ್ಲಿ ₹10 ಕೋಟಿ, 2018–19ನೇ ಸಾಲಿನಲ್ಲಿ ₹15 ಕೋಟಿ, 2019-20ನೇ ಸಾಲಿನಲ್ಲಿ ₹15 ಕೋಟಿ ಅನುದಾನ ಮಂಜೂರಾಗಿದೆ. ಆದರೆ ಹಣ ಬಿಡುಗಡೆಯಾಗಿಲ್ಲ!

ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹130 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ₹80 ಕೋಟಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿ‌ದ್ಯಾರ್ಥಿನಿಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ವರ್ಷ ಒಂದಿಷ್ಟು ಕೋರ್ಸ್‌ಗಳನ್ನು ಅಲ್ಲಿ ಪ್ರಾರಂಭಿಸುವ ಗುರಿ ಹೊಂದಿದ್ದೇವೆ ಎಂದು 2019ರ ಫೆಬ್ರುವರಿಯಲ್ಲಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದರು.

ಕಾಮಗಾರಿಗಳು ಅರ್ಧಕ್ಕೆ ನಿಂತರೆ ಹವಾಮಾನದ ವೈಪರೀತ್ಯದಿಂದ ಗುಣಮಟ್ಟ ಕಳಪೆ ಆಗುತ್ತದೆ. ಈಗಾಗಲೇ ಆಗಿರುವ ಕೆಲಸಗಳು ನಿರರ್ಥಕವಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರದ ಆದೇಶದಂತೆ, ವಿಶ್ವವಿದ್ಯಾನಿಲಯದ ಆಂತರಿಕ ಸಂಪನ್ಮೂಲವನ್ನು ಬಳಸಿಕೊಂಡು ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಪ್ರಸ್ತಾಪ ಮಾಡಲಾಗಿದೆ ಎನ್ನುತ್ತವೆ ವಿ.ವಿ ಮೂಲಗಳು.

ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ಕ್ಯಾಂಪಸ್‍ನಲ್ಲಿ ಕಲಾ ಮತ್ತು ವಿಜ್ಞಾನ ಕಾಲೇಜುಗಳಿಗೆ ತರಗತಿಗಳನ್ನು ನಡೆಸಲು ಜಾಗದ ಕೊರತೆ ಇದೆ. ಸಾವಿರಾರು ವಿದ್ಯಾರ್ಥಿಗಳು ಪಾಳಿ ಆಧಾರದಲ್ಲಿ ತರಗತಿಗಳಿಗೆ ಹಾಜರಾಗಬೇಕಿದೆ. ಈ ಸಮಸ್ಯೆ ನಿವಾರಣೆಗೆ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ವೇಗ ನೀಡುವುದು ಅನಿವಾರ್ಯ ಎಂದು ವಿ.ವಿ ಪ್ರತಿಪಾದಿಸುತ್ತಿದೆ.

ವಿ.ವಿ ಆಂತರಿಕ ಸಂಪನ್ಮೂಲ ಬಳಕೆಗೆ ಕೆಲ ಸಿಂಡಿಕೇಟ್ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಹಣ ಬಳಕೆ ಮಾಡಿಕೊಳ್ಳುವ ಬದಲು ಮಂಜೂರಾಗಿರುವ ಹಣ ಬಿಡುಗಡೆಗೆ ಕುಲಪತಿ ಸರ್ಕಾರದ ಮೇಲೆ ಪ್ರಭಾವ ಬೀರಬೇಕು ಎಂದು ಸಿಂಡಿಕೇಟ್ ಸದಸ್ಯರೊಬ್ಬರು ನುಡಿದರು.

ಆಂತರಿಕ ಸಂಪನ್ಮೂಲ; ವೇತನಕ್ಕೆ ಬಳಕೆಯಿಲ್ಲ
ವಿಶ್ವವಿದ್ಯಾನಿಲಯದ ಸಿಬ್ಬಂದಿಯ ವೇತನವು ಸರ್ಕಾರದ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಗೆ (ಎಚ್‍ಆರ್‌ಎಂಎಸ್) ಒಳಪಟ್ಟಿದೆ. ವೇತನಗಳನ್ನು ಆ ವ್ಯವಸ್ಥೆಯಲ್ಲೇ ನಿರ್ವಹಿಸಬೇಕಾಗುತ್ತದೆ. ವಿಶ್ವವಿದ್ಯಾನಿಲಯದ ಆಂತರಿಕ ಸಂಪನ್ಮೂಲವನ್ನು ಬಳಸಿಕೊಳ್ಳಲು ಅವಕಾಶ ಇಲ್ಲ ಎಂದು ವಿ.ವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಸ್ಪಷ್ಟಪಡಿಸಿದ್ದಾರೆ.

ಆರ್ಥಿಕ ಸಂಕಷ್ಟ ಎದುರಾದರೆ ಆ ಸಂಪನ್ಮೂಲ ಬಳಸಿಕೊಳ್ಳಬಹುದು ಎಂಬ ತರ್ಕ ಸಕಾರಣವಲ್ಲ. ವಿ.ವಿ ಆಂತರಿಕ ಸಂಪನ್ಮೂಲವನ್ನು ಆಯಾ ಶೀರ್ಷಿಕೆಯ ಅನುಸಾರ ವಿನಿಯೋಗಿಸಬೇಕೇ ಹೊರತು ವೇತನ ನೀಡಲು ಬಳಸುವಂತಿಲ್ಲ ಎಂದು ಅವರು ಹೇಳಿದ್ದಾರೆ.

‘ಕುಲಪತಿ ಪಟ್ಟಿಗೂ ಸಿಗದ ಅನುಮತಿ’ ಎಂದು ಪತ್ರಿಕೆಯಲ್ಲಿ ಮೇ 21ರಂದು ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT