ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಸಂಖ್ಯೆಯಲ್ಲಿ ಪಿಎಚ್.ಡಿ

ತುಮಕೂರು ವಿಶ್ವವಿದ್ಯಾಲಯ ಘಟಿಕೋತ್ಸವ ನಾಳೆ
Last Updated 4 ಮಾರ್ಚ್ 2021, 4:07 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ವಿಶ್ವವಿದ್ಯಾಲಯ 14ನೇ ಘಟಿಕೋತ್ಸವ ಮಾರ್ಚ್ 5ರಂದು ನಡೆಯಲಿದ್ದು, ದಾಖಲೆಯ 145 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುತ್ತದೆ.

ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 73 ವಿದ್ಯಾರ್ಥಿಗಳಿಗೆ 92 ಚಿನ್ನದ ಪದಕ ಹಾಗೂ ಆರು ನಗದು ಬಹುಮಾನಗಳನ್ನು ನೀಡಲಾಗುತ್ತಿದೆ. 1,716 ವಿದ್ಯಾರ್ಥಿಗಳು ಸ್ನಾತಕೋತ್ತರ, 7,992 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ. ಒಟ್ಟು 9,853 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ.

ವಿಶ್ವವಿದ್ಯಾಲಯ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕುಲಾಧಿಪತಿ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದು, ವಿಜ್ಞಾನಿ ಕೆ.ಕಸ್ತೂರಿರಂಗನ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಬಿದರೆಕಟ್ಟೆಗೆ ಸ್ಥಳಾಂತರ: ಹೊಸ ಕ್ಯಾಂಪಸ್ ನಿರ್ಮಾಣವಾಗುತ್ತಿರುವ ಬಿದರೆಕಟ್ಟೆಗೆ ನಾಲ್ಕು ವಿಭಾಗಗಳನ್ನುಇನ್ನೆರಡು ತಿಂಗಳಲ್ಲಿ ಸ್ಥಳಾಂತರಿಸಲಾಗುವುದು. ಮೈಕ್ರೊಬಯಾಲಜಿ, ಬಯೊಟೆಕ್ನಾಲಜಿ, ಪರಿಸರ ವಿಜ್ಞಾನ, ಸಮಾಜಕಾರ್ಯ ವಿಭಾಗಗಳನ್ನು ಸ್ಥಳಾಂತರಿಸಲು ಸಿದ್ಧತೆಗಳು ನಡೆದಿವೆ. ಹೊಸ ಕ್ಯಾಂಪಸ್‌ನಲ್ಲಿ ಕಲಾಭವನ, ವಿಜ್ಞಾನ ಕೇಂದ್ರ, ಗ್ರಂಥಾಲಯ, ಪರೀಕ್ಷಾ ಪೂರ್ವ ತರಬೇತಿ ಕೇಂದ್ರಗಳ ನಿರ್ಮಾಣ ಕೆಲಸ ನಡೆದಿದೆ ಎಂದು ಸಿದ್ದೇಗೌಡ ತಿಳಿಸಿದರು.

ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಂದಿಲ್ಲ. ವಿ.ವಿ.ಯಲ್ಲಿ ಇರುವ ಹಣವನ್ನೇ ಬಳಸಿಕೊಂಡು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಶಾಲೆಗಳ ದತ್ತು: ಜಿಲ್ಲೆಯಲ್ಲಿ 10 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುತ್ತಿದೆ. ಬಿದರೆಕಟ್ಟೆ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಶೇ 28ರಷ್ಟು ಇದ್ದ ಪದವಿ ಫಲಿತಾಂಶ ಶೇ 78ಕ್ಕೆ ಹೆಚ್ಚಳವಾಗಿದೆ. ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

‘ವಿ.ವಿ.ಯಲ್ಲಿ ಪಿಎಚ್.ಡಿ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅದಕ್ಕೆ ಅವಕಾಶ ನೀಡಿಲ್ಲ. ನಿರ್ದಿಷ್ಟವಾಗಿ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT