ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ಜಾಗಕ್ಕೆ ಕುತ್ತು ?

Published 28 ಮೇ 2023, 20:30 IST
Last Updated 28 ಮೇ 2023, 20:30 IST
ಅಕ್ಷರ ಗಾತ್ರ

ಕೋರ: ಇಂದಿನಿಂದ ಪ್ರಾಥಮಿಕ ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ನಿವೇಶನ ಗೊಂದಲ ಬಗೆಹರಿಯುವ ಮೂಲಕ ನಮ್ಮೂರಿನ ಶಾಲೆ ಆರಂಭವಾಗುತ್ತದೆಯೋ ಇಲ್ಲವೋ ಎನ್ನುವ ಆತಂಕ ಪೋಷಕರಲ್ಲಿ ಮನೆ ಮಾಡಿದೆ.

ತಾಲ್ಲೂಕಿನಲ್ಲಿ ಒಟ್ಟು 349 ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿವೆ. 30 ರಿಂದ 40 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಹಲವು ಶಾಲಾ ಕಟ್ಟಡಗಳು ಖಾಸಗಿ ಜಮೀನಿನಲ್ಲಿವೆ. ಭೂ ದಾಖಲೆಗಳನ್ನು ಸಂಬಂಧಪಟ್ಟ ಶಾಲೆ ಅಥವಾ ತಾಲ್ಲೂಕು ಶಿಕ್ಷಣ ಅಧಿಕಾರಿಗಳ ಹೆಸರಿಗೆ ಮಾಡಿಸಿಕೊಳ್ಳದೆ ಇರುವುದು ಪ್ರಸ್ತಕ ವರ್ಷದ ಶಾಲೆಗಳ ಆರಂಭಕ್ಕೆ ವಿಘ್ನವಾಗಿ ಕಾಡುತ್ತಿದೆ.

’ನಾವು ಹೇಳಿದವರಿಗೆ ಶಾಲಾ ಅಡುಗೆ ಜವಾಬ್ದಾರಿ ನೀಡಬೇಕು. ಯಾವುದೇ ಸಂದರ್ಭದಲ್ಲೂ ಬದಲಾಯಿಸಬಾರದು. ಇದು ವಂಶಪರಾಂಪರ್ಯವಾಗಿ ಮುಂದುವರಿಸಬೇಕು ಎನ್ನುತ್ತಿರುವ ಶಾಲಾ ಕಟ್ಟಡ ಇರುವ ಖಾಸಗಿ ಭೂ ಮಾಲೀಕರು ಬೇಡಿಕೆಗೆ ಒಪ್ಪಿದರೆ ಮಾತ್ರ ಶಾಲೆ ಆರಂಭ ಮತ್ತು ಶೈಕ್ಷಣಿಕೆ ಚಟುವಟಿಕೆಗೆ ಅವಕಾಶ ನೀಡುತ್ತೇವೆ. ನಿವೇಶನವನ್ನು ಶಾಲೆ ಹೆಸರಿಗೆ ವರ್ಗಾವಣೆ ಮಾಡಿ ಕೊಡುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.

ಹಲವೆಡೆ ಶಾಲಾ ನಿವೇಶನ ಇರುವ ಭೂಮಿಯನ್ನು ಈಚೆಗೆ ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದು, ಶಾಲಾ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಗುಸುಗುಸು ಸುದ್ದಿ ಪೋಷಕರಲ್ಲಿ ಗೊಂದಲ ಮೂಡಿಸಿದೆ.

ಭೂ ಮಾಲೀಕರಿಂದ ಯಾವುದೇ ರೀತಿ ಪತ್ರಗಳನ್ನು ಪಡೆದುಕೊಳ್ಳದೆ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪವೂ ಇದೆ. ಇನ್ನು ಕೆಲ ಶಾಲೆಗಳಲ್ಲಿ ಇದ್ದ ದಾಖಲೆಗಳು ಶಿಥಿಲಗೊಂಡಿರುವುದು, ನಾಶವಾಗಿರುವುದು ಶಿಕ್ಷಣ ಇಲಾಖೆ ಆತಂಕಕ್ಕೆ ಕಾರಣವಾಗಿದೆ.

ಶಿಕ್ಷಣ ಇಲಾಖೆ ನಿರ್ಲಕ್ಷ್ಯ

ತಾಲ್ಲೂಕಿನ ಗ್ರಾಮೀಣ ಭಾಗದ ಬಹುತೇಕ ಶಾಲೆಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಸ್ತೆ ಸಮೀಪದ ಜಾಗದಲ್ಲಿ ಪ್ರಾರಂಭಿಸಲಾಗಿದೆ. ಭೂ ಮಾಲೀಕರಿಂದ ಪಡೆದುಕೊಂಡಿರುವ ದಾನಪತ್ರ, ಕ್ರಯಪತ್ರ, ಅನುಮತಿ ಪತ್ರಗಳನ್ನ ಸಂಬಂಧಪಟ್ಟ ಕಂದಾಯ ಇಲಾಖಾ ಅಧಿಕಾರಿಗಳಿಗೆ ಹಾಜರುಪಡಿಸಿ ಖಾತೆ ಮಾಡಿಸಿಕೊಳ್ಳುವಲ್ಲಿ ಅಧಿಕಾರಿಗಳು ತೋರಿರುವ ನಿರ್ಲಕ್ಷ್ಯ, ವಿಳಂಬದಿಂಗಾಗಿ ಗ್ರಾಮೀಣ ಪ್ರದೇಶದ ಹಲವು ಶಾಲಾ ನಿವೇಶನ ಖಾಸಗಿ ವ್ಯಕ್ತಿಗಳ ಹೆಸರಿನಲ್ಲೇ ಉಳಿದುಕೊಂಡಿದೆ.

ಬದಲಾದ ನಿಯಮ

ಈ ಹಿಂದೆ 30, 40 ವರ್ಷಗಳ ಹಿಂದೆ ಇದ್ದ ಭೂಮಾರಾಟ, ದಾನ ಪತ್ರ, ಕ್ರಮಪತ್ರಗಳ ನಮೂನೆ, ವಿಧಾನ ಹಾಗೂ ನಿಯಮಗಳು ಬದಲಾಗಿವೆ. ಹಳೆಯ ದಾಖಲೆಗಳ ನೋಂದಣಿ ಮಾಡಲು ಹಾಗೂ ಖಾತೆ, ಪಹಣಿ ಬದಲಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ವಾರಾಸುದಾರ ಅನುಮತಿ ಕಡ್ಡಾಯವಾಗಿರುವುದು ತಲೆನೋವಾಗಿ ಪರಿಣಮಿಸಿದೆ.

ನಿವೇಶನ ಖರೀದಿಗೆ ಕ್ರಮವಹಿಸಲಿ: ಕ್ರಯಪತ್ರ, ದಾನಪತ್ರ ಮಾಡಿಸಿಕೊಂಡಿರುವ ಖಾಸಗಿ ಭೂ ಮಾಲೀಕರ ಹೆಸರಿನಲ್ಲಿರುವ ಶಾಲೆ ನಿವೇಶನ ದಾಖಲೆ ವರ್ಗಾವಣೆ ಜತೆಗೆ ಯಾವುದೇ ದಾಖಲೆ ಪಡೆದುಕೊಳ್ಳದೆ ಶಾಲಾ ಕಟ್ಟಡ ನಿರ್ಮಾಣ ಮಾಡಿರುವ ನಿವೇಶನಗಳನ್ನು ಇಂದಿನ ಮಾರುಕಟ್ಟೆ ಬೆಲೆಗಾದರೂ ಖರೀದಿಸುವ ನಿಟ್ಟಿನಲ್ಲಿ ಸರ್ಕಾರ , ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಶೀಘ್ರವೇ ಕ್ರಮಕೈಗೊಳ್ಳತ್ತೇವೆ

ತಾಲ್ಲೂಕಿನಲ್ಲಿ ಒಟ್ಟು 349 ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಿವೆ. ಇದರಲ್ಲಿ 6 ನಿವೇಶನಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿವೆ. 12 ಶಾಲಾ ನಿವೇಶನಗಳ ಖಾತೆ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದ್ದು 9 ನಿವೇಶನಗಳ ಖಾತೆ ಪಹಣೆ ಬದಲಾವಣೆಗೆ ಬಾಕಿಯಿವೆ. ಶೀಘ್ರದಲ್ಲೇ ಪ್ರಕ್ರಿಯೇ ಪೂರ್ಣಗೊಳ್ಳಲಿದೆ ಎಂದು ಬಿಇಒ ಹನುಮಾನಾಯಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT