ಶನಿವಾರ, ಸೆಪ್ಟೆಂಬರ್ 25, 2021
22 °C

ನಗರ ಸ್ಥಳೀಯ ಸಂಸ್ಥೆ: ತೆರಿಗೆ ಸಂಗ್ರಹ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ ಕುಸಿದಿದ್ದು, ಸಮರ್ಪಕವಾಗಿ ಸಂಗ್ರಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಬುಧವಾರ ಎಚ್ಚರಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆಸ್ತಿ ತೆರಿಗೆ, ವಾಣಿಜ್ಯ, ಕಟ್ಟಡ ಪರವಾನಗಿ ಸೇರಿದಂತೆ ವಿವಿಧ ವರ್ಗದಲ್ಲಿ ಸರಿಯಾಗಿ ತೆರಿಗೆ ಸಂಗ್ರವಾಗಿಲ್ಲ. ಕೋವಿಡ್‌ನಿಂದಾಗಿ ವ್ಯಾಪಾರ ವಹಿವಾಟು ನಡೆಯದೆ ಜನರೂ ಸಮರ್ಪಕವಾಗಿ ತೆರಿಗೆ ಪಾವತಿ
ಸುತ್ತಿಲ್ಲ. ಕಟ್ಟುನಿಟ್ಟಾಗಿ ವಸೂಲಿ ಮಾಡು
ವಂತೆ ಸೂಚಿಸಲಾಗಿದೆ’ ಎಂದರು.

ಇದಕ್ಕೂ ಮುನ್ನ ಪ್ರಗತಿ ಪರಿಶೀಲನೆ ನಡೆಸಿ, ‘ಎಲ್ಲಾ ರೀತಿಯ ಕರವನ್ನು ಕಾಲಮಿತಿಯೊಳಗೆ ವಸೂಲಿ ಮಾಡಬೇಕು. ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ವ್ಯಾಪಾರಸ್ಥರ ಪರವಾನಗಿಯನ್ನು ಕಾಲ ಕಾಲಕ್ಕೆ ನವೀಕರಿಸಬೇಕು. ಪರವಾನಗಿ ಇಲ್ಲದೆ ವ್ಯಾಪಾರ ನಡೆಸುವವರ ವಿರುದ್ಧ ಕ್ರಮ ಜರುಗಿಸಬೇಕು. ತೆರಿಗೆ ಪಾವತಿಸದ ಸಾರ್ವಜನಿಕರಿಗೆ ನೋಟಿಸ್ ನೀಡಬೇಕು ಎಂದು ನಿರ್ದೇಶಿಸಿದರು.

ಜವಾಬ್ದಾರಿ ತೆಗೆದುಕೊಳ್ಳದೆ ಉದಾ
ಸೀನದಿಂದ ಕೆಲಸ ಮಾಡಿದರೆ ಅಭಿವೃದ್ಧಿ
ಹೇಗೆ ಸಾಧ್ಯವಾಗಲಿದೆ ಎಂದು ಪ್ರಶ್ನಿಸಿದರು. ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಎಲ್ಲಾ ಪೌರ ಕಾರ್ಮಿಕರಿಗೆ ಕೋವಿಡ್ ಲಸಿಕೆ ಹಾಕಿಸಬೇಕು. ಎರಡು ಡೋಸ್ ಹಾಕಿಸಿಕೊಂಡ ನಂತರವೂ ಕೋವಿಡ್ ದೃಢಪಟ್ಟಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ಮಾಧುಸ್ವಾಮಿ ಮಾತನಾಡಿ, ‘ತಿಪಟೂರು ನಗರಸಭೆ ವ್ಯಾಪ್ತಿಯಲ್ಲೇ ತೆರಿಗೆ ಸಂಗ್ರಹ ತೃಪ್ತಿದಾಯಕವಾಗಿಲ್ಲ. ಹೀಗಾದರೆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಕುಡಿಯುವ ನೀರಿನ ಯೋಜನೆಯಡಿ ಮನೆಗಳಿಗೆ ನಲ್ಲಿ ಸಂಪರ್ಕ ನೀಡುವ ಕಾರ್ಯವೂ ಕಾಲಮಿತಿಯೊಳಗೆ ಮುಗಿಸಬೇಕು’ ಎಂದು ತಿಪಟೂರು ನಗರ ಸಭೆ ಆಯುಕ್ತರಿಗೆ ಸೂಚಿಸಿದರು.

ಮಳಿಗೆ ಬಾಡಿಗೆಯನ್ನು ಸರಿಯಾಗಿ ವಸೂಲಿ ಮಾಡದ ಮಧುಗಿರಿ ಕಂದಾಯ ನಿರೀಕ್ಷಕ ಸಂತೋಷ್ ಅವರನ್ನು ಅಮಾನತು ಮಾಡುವುದಾಗಿ ಎಚ್ಚರಿಸಿದರು. ನಗರ ಪ್ರದೇಶದಲ್ಲಿ ಅನಧಿಕೃತವಾಗಿ ಒಳಚರಂಡಿ ಸಂಪರ್ಕ ಪಡೆದಿದ್ದರೆ ಅಂತಹವರಿಂದ ತೆರಿಗೆ ವಸೂಲಿ ಮಾಡುವಂತೆ ಸೂಚನೆ ನೀಡಿದರು. ಶಿರಾ ನಗರಸಭೆಯಲ್ಲಿ ಕೇವಲ ಶೇ 4ರಷ್ಟು ಮಾತ್ರ ವ್ಯಾಪಾರ ಪರವಾನಗಿ ನವೀಕರಣ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲಸ ಮಾಡದಿದ್ದರೆ ಅಮಾನತು ಮಾಡುವುದಾಗಿ ಅಧಿಕಾರಿಗಳನ್ನು ಎಚ್ಚರಿಸಿದರು.

15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡದಿದ್ದರೆ, ಮುಂದಿನ ವರ್ಷ ಈ ಯೋಜನೆಯಡಿ ಬಿಡುಗಡೆಯಾಗುವ ಹಣ ಕಡಿತವಾಗಲಿದೆ ಎಂದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ‘ಸಭೆಗೆ ಸಮರ್ಪಕ ಮಾಹಿತಿ ಒದಗಿಸದ ಅಧಿಕಾರಿಗಳು ಅಭಿವೃದ್ಧಿಗೆ ಆದ್ಯತೆ ನೀಡಿಲ್ಲವೆಂದು ಪರಿಗಣಿಸಿ, ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ, ‘ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1,26,257 ಆಸ್ತಿಗಳಿದ್ದು, ಹಿಂದಿನ ವರ್ಷದ ₹3.82 ಕೋಟಿ, ಪ್ರಸಕ್ತ ಸಾಲಿನಲ್ಲಿ ₹14.11 ಕೋಟಿ ಸೇರಿ ಒಟ್ಟು ₹17.93 ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಈ ಪೈಕಿ ₹8.30 ಕೋಟಿ ವಸೂಲಿಯಾಗಿದ್ದು, ₹9.63 ಕೋಟಿ ಬಾಕಿಯಿದೆ ಎಂದು ಮಾಹಿತಿ ಒದಗಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.