ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ | ಬಿತ್ತನೆ ಶೇಂಗಾ: ದರ ಕಡಿಮೆ ಮಾಡಲು ಒತ್ತಾಯ

ಸಹಾಯಧನ ಸಹಿತ ಕೆ.ಜಿ ಶೇಂಗಾ ಬೆಲೆ ₹80: ಮಾರುಕಟ್ಟೆಯಲ್ಲಿ ₹70
Published 23 ಮೇ 2024, 14:04 IST
Last Updated 23 ಮೇ 2024, 14:04 IST
ಅಕ್ಷರ ಗಾತ್ರ

ಪಾವಗಡ: ಸರ್ಕಾರ ರಿಯಾಯಿತಿ ದರದಲ್ಲಿ ಬಿತ್ತನೆಗಾಗಿ ವಿತರಿಸುತ್ತಿರುವ ಶೇಂಗಾ ಬೆಲೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿದೆ. ಶೀಘ್ರ ದರ ಕಡಿಮೆ ಮಾಡಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಸರ್ಕಾರ ಒಂದು ಕೆ.ಜಿ. ಬಿತ್ತನೆ ಶೇಂಗಾಕ್ಕೆ ₹95 ನಿಗದಿಪಡಿಸಿದ್ದು, ₹15 ಸಹಾಯಧನ ನೀಡುತ್ತಿರುವುದಾಗಿ ತಿಳಿಸಿದೆ. ಸಹಾಯಧನ ಸಹಿತ ಒಂದು ಕೆಜಿ ಶೇಂಗಾ ಬೆಲೆ ₹80 ಆಗುತ್ತದೆ. ಒಂದು ಕ್ವಿಂಟಲ್ ಬಿತ್ತನೆ ಶೇಂಗಾಕ್ಕೆ ₹8,000 ಆಗುತ್ತದೆ ಎಂದಿದ್ದಾರೆ.

ಮಾರುಕಟ್ಟೆಯಲ್ಲಿ ಗುಣಮಟ್ಟದ ಬಿತ್ತನೆ ಶೇಂಗಾ ಕೆ.ಜಿಗೆ ₹68ರಿಂದ ₹70ಕ್ಕೆ ಸಿಗುತ್ತಿದೆ. ಖಾಸಗಿ ಮಂಡಿಗಳಲ್ಲಿ ಕ್ವಿಂಟಲ್‌ಗೆ ₹6,800ರಿಂದ ₹7,000ಕ್ಕೆ ದೊರೆಯುತ್ತದೆ. ಹೀಗಾಗಿ ಸರ್ಕಾರ ವಿತರಿಸುತ್ತಿರುವ ಶೇಂಗಾ ದರ ಮಾರುಕಟ್ಟೆ ದರಕ್ಕಿಂತ ಹೆಚ್ಚಿದೆ ಎಂದು ಆರೋಪಿಸಿದ್ದಾರೆ.

ಬರದಿಂದ ತತ್ತರಿಸಿರುವ ರೈತರು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ಮಳೆ ಬಂದಿದ್ದು ಸಾಲ ಮಾಡಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ಖಾಸಗಿ ಮಳಿಗೆಗಳಲ್ಲಿ ಎಟುಕುವ ಬೆಲೆಗಿಂತ ಹೆಚ್ಚಿನ ದರವನ್ನು ಶೇಂಗಾಕ್ಕೆ ನಿಗದಿಪಡಿಸಿದಲ್ಲಿ ರೈತರಿಗೆ ಅನ್ಯಾಯವಾಗುತ್ತದೆ. ಇದು ರೈತರಿಗೆ ಹೊರೆಯಾಗುತ್ತದೆ. ಇದರಿಂದ ಬಿತ್ತನೆ ಪ್ರದೇಶದ ಮೇಲೂ ಪರಿಣಾಮ ಬೀರುತ್ತದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಶೇಂಗಾ ದರ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಬೇಡಿಕೆ ಈಡೇರಿಸದಿದ್ದಲ್ಲಿ ಕೃಷಿ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT