ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಲಸಿಕೆ: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ

Last Updated 29 ಜೂನ್ 2021, 4:47 IST
ಅಕ್ಷರ ಗಾತ್ರ

ತುಮಕೂರು: ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ವಿದೇಶಕ್ಕೆ ತೆರಳುವವರಿಗೆ ಕೋವಿಡ್ ಲಸಿಕೆ ನೀಡಲು ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

ಮುಂದಿನ ತಿಂಗಳಿನಿಂದ ಕಾಲೇಜು ಪ್ರಾರಂಭಿಸಲು ಸರ್ಕಾರ ಉದ್ದೇಶಿಸಿದೆ. ಅದಕ್ಕೂ ಮೊದಲು ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ನಿರ್ಧರಿಸಲಾಗಿದೆ. ಒಂದು ದಿನ ಅಭಿಯಾನ ಏರ್ಪಡಿಸಿ ಲಸಿಕೆ ನೀಡಲು ಕ್ರಮವಹಿಸಲಾಗಿದೆ ಎಂದರು.

ಜಿಲ್ಲೆ ವ್ಯಾಪ್ತಿಯ ಪದವಿ, ಡಿಪ್ಲೊಮಾ, ಐಟಿಐ ಹಾಗೂ ಕಾಲೇಜಿನ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳ ವಿವರಗಳನ್ನು ಸಂಬಂಧಿಸಿದ ಕಾಲೇಜಿನ ಮುಖ್ಯಸ್ಥರು ಆರೋಗ್ಯ ಇಲಾಖೆಗೆ ಒದಗಿಸಬೇಕು. ಈ ಕೆಲಸಕ್ಕೆ ಕಾಲೇಜಿನ ಮುಖ್ಯಸ್ಥರು ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ನೋಡಲ್ ಅಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಿಯೊಂದಿಗೆ ಸಮನ್ವಯ ಸಾಧಿಸಿ ಲಸಿಕೆ ಹಾಕಿಸಬೇಕು ಎಂದು ಸೂಚಿಸಿದ್ದಾರೆ.

ಕಾಲೇಜು ಆವರಣದಲ್ಲಿ ಅಭಿಯಾನದ ಮಾದರಿಯಲ್ಲಿ ಲಸಿಕೆ ನೀಡಬೇಕು. ನೋಡಲ್ ಅಧಿಕಾರಿಗಳು ಅರ್ಹರಿಗೆ ಲಸಿಕೆ ಹಾಕಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳಬೇಕು. ಕೋವಿಡ್–19 ಮಾರ್ಗಸೂಚಿ ಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಿರ್ದೇಶಿಸಿದರು.

ವಿದೇಶಕ್ಕೆ ತೆರಳುವವರಿಗೆ ಲಸಿಕೆ: ವಿದ್ಯಾಭ್ಯಾಸ, ನೌಕರಿ ಸಲುವಾಗಿ ವಿದೇಶಕ್ಕೆ ತೆರಳುವವರಿಗೆ, ಒಲಿಂಪಿಕ್‌ಗಾಗಿ ಟೋಕಿಯೊಗೆ ತೆರಳುವ ಕ್ರೀಡಾಪಟುಗಳಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಅರ್ಹ ಫಲಾನುಭವಿಗಳಿಗೆ ಕೋವಿಶೀಲ್ಡ್ ಲಸಿಕೆಯ 2ನೇ ಡೋಸ್‍ ನೀಡಲು ಅನುಮತಿ ಇದ್ದು, ಲಸಿಕಾ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತದೆ. ಸಮರ್ಪಕ ದಾಖಲೆ ಪರಿಶೀಲಿಸಿ 84 ದಿನಗಳಿಗೆ ಮೊದಲು ಕೋವಿಶೀಲ್ಡ್ ಲಸಿಕೆಯ 2ನೇ ಡೋಸ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಲಸಿಕೆ ಪಡೆಯುವ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ದೃಢೀಕರಣ ಪತ್ರ ನೀಡಬೇಕು. ಈ ದೃಢೀಕರಣ ಪತ್ರವನ್ನು ಕೋವಿನ್ ಪೋರ್ಟಲ್‍ನಲ್ಲಿ ಎಸ್‍ಓಪಿಯಂತೆ ಅಪ್‍ಲೋಡ್ ಮಾಡಬೇಕು. ಈಗಾಗಲೇ, ಮೊದಲ ಡೋಸ್ ಲಸಿಕೆ ಪಡೆಯುವಾಗ ನೋಂದಣಿಗಾಗಿ ಪಾಸ್‍ಪೋರ್ಟ್ ನಂಬರ್ ಬಳಸದಿದ್ದರೆ ಅಂತಹವರಿಗೆ ಕೋವಿಶೀಲ್ಡ್‌ನ 2ನೇ ಡೋಸ್ ನೀಡಲು ಅನುಬಂಧ-5ರಲ್ಲಿ ಲಗತ್ತಿಸಿದ ಲಸಿಕಾ ಪ್ರಮಾಣ ಪತ್ರ ನೀಡಬೇಕು ಎಂದು ಸೂಚಿಸಿದ್ದಾರೆ.

ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‍ ಅಂತರವನ್ನು 12-16 ವಾರಗಳಿಗೆ (84 ದಿನಗಳು) ಪರಿಷ್ಕರಿಸಲಾಗಿತ್ತು. ಆದರೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನದಂತೆ ವಿದೇಶಕ್ಕೆ ತೆರಳುವವರಿಗೆ 28 ದಿನಗಳನ್ನು ಪೂರೈಸಿದ ನಂತರ ಲಸಿಕೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT