ಸೋಮವಾರ, ಜನವರಿ 20, 2020
18 °C
ಗುಬ್ಬಿ ತಾಲ್ಲೂಕಿನ ಎಂ.ಎನ್. ಕೋಟೆಯ ದೇವಾಲಯ

ಎಂ.ಎನ್. ಕೋಟೆಯ ಪಾಳೇಗಾರ ಪರಂಪರೆಯ ಲಕ್ಷ್ಮಿ ರಂಗನಾಥ

ಜಯಣ್ಣ ಎಸ್.ಎಚ್. Updated:

ಅಕ್ಷರ ಗಾತ್ರ : | |

prajavani

ಗುಬ್ಬಿ: ನಿಟ್ಟೂರು ಹೋಬಳಿಯ ಎಂ.ಎನ್. ಕೋಟೆಯಲ್ಲಿರುವ ಲಕ್ಷ್ಮಿರಂಗನಾಥ ಸ್ವಾಮಿ ದೇವಾಲಯವು 600 ವರ್ಷಗಳ ಹಿಂದೆ ಹಾಗಲವಾಡಿ ಪಾಳೇಗಾರರ ಕಾಲದಲ್ಲಿ ನಿರ್ಮಾಣವಾಗಿದೆ. ದೇವಸ್ಥಾನದ ಗರ್ಭಗುಡಿ ನವರಂಗ ಸಭಾಮಂಟಪ ಪ್ರದಕ್ಷಿಣಾ ಪಥ ಹೊಂದುವ ಜತೆಗೆ ಉತ್ತರಾಭಿಮುಖವಾಗಿದ್ದು ಪಾಳೇಗಾರರ ಕಾಲದ ದೈವ ಪರಂಪರೆ ಸಾರುತ್ತದೆ.

ಎಂ.ಎನ್.ಕೋಟೆ ಗ್ರಾಮದಿಂದ 2 ಕಿಲೋಮೀಟರ್ ದೂರದಲ್ಲಿರುವ ಗುಡ್ಡದಲ್ಲಿ ಉದ್ಭವಮೂರ್ತಿ ಇತ್ತು. ಅಂದಿನ ಅರ್ಚಕರ ಕನಸಿನಲ್ಲಿ ರಂಗನಾಥ ಸ್ವಾಮಿ ಬಂದು ಊರಿನೊಳಗೆ ದೇಗುಲ ನಿರ್ಮಿಸಿ ವಿಗ್ರಹ ಪ್ರತಿಷ್ಠಾಪಿಸಿ, ಕೆರೆಯೊಳಗೆ ಬಿದ್ದಿದ್ದ 160 ಕೆ.ಜಿ ತೂಕದ ಧನಸ್ಸನ್ನು ತಂದು ಸನ್ನಿಧಿಯಲ್ಲಿ ಪ್ರತಿಷ್ಠಾಪಿಸುವಂತೆ ಹೇಳಿದ್ದರಿಂದ ದೇಗುಲವನ್ನು ಊರಿನೊಳಗೆ ಸ್ಥಾಪಿಸಲಾಯಿತು ಎಂದು ಐತಿಹ್ಯವಿದೆ.

ದೇವಸ್ಥಾನದ ನಿರ್ಮಾಣಕ್ಕೆ ಸುತ್ತಲಿನ ಗ್ರಾಮದ ಭಕ್ತರು ಜಾತಿಮತದ ಭೇದವಿಲ್ಲದೆ ನೆರವು ನೀಡಿ ಹಂತ ಹಂತವಾಗಿ ನಿರ್ಮಿಸಲಾಗಿದೆ. ಪ್ರತಿವರ್ಷದ ಆಷಾಢ ಮಾಸದಂದು ಏಕಾದಶಿಯ ವಿಶೇಷವಾಗಿ ಬ್ರಹ್ಮರಥೋತ್ಸವ ನಡೆಯಲಿದೆ. ಧನಸ್ಸು, ಮುಳ್ಳಪಲ್ಲಕ್ಕಿ ಉತ್ಸವಗಳು ಮುಂಜಾನೆಯಿಂದ ರಾತ್ರಿ 9ಗಂಟೆವರೆಗೆ ಜರುಗುತ್ತವೆ.

ಆಷಾಢ ಮಾಸದಲ್ಲಿ 9 ದಿನಗಳವರೆಗೆ ಅದ್ಧೂರಿ ಜಾತ್ರಾ ಮಹೋತ್ಸವ ಜರುಗುತ್ತದೆ. ಶ್ರಾವಣದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಂತರ ರಥಸಪ್ತಮಿ ಉತ್ಸವ, ರಾಮನವಮಿ, ದೀಪಾವಳಿ, ಕಾರ್ತಿಕ ಮಾಸ, ಧನು
ರ್ಮಾಸದಲ್ಲಿ ವಿಶೇಷ ಪೂಜೆ, ಭಕ್ತರಿಂದ ಭಜನೆ ಸ್ತೋತ್ರ ಪಠಣ ಜರುಗುತ್ತವೆ.


ಮುಳ್ಳು ಪಲ್ಲಕ್ಕಿ

ವೈಷ್ಣವರ ನೆಲೆ: ಐತಿಹಾಸಿಕ ಪುರಾವೆಗಳ ಪ್ರಕಾರ ಲಕ್ಷ್ಮಿ ರಂಗನಾಥ ಸ್ವಾಮಿಯು ಇಲ್ಲಿನ ಪ್ರಮುಖ ದೇವರಾಗಿದ್ದು ವೈಷ್ಣವ ಪರಂಪರೆಯ ನೆಲೆಯಾಗಿತ್ತು ಎಂಬುದಕ್ಕೆ ಕುರುಹುಗಳಿವೆ. ಏಕಾದಶಿ ಉತ್ಸವ ಜಿಲ್ಲೆಯಲ್ಲಿ ಚಿಕ್ಕನಾಯಕನಹಳ್ಳಿ ನಂತರ ನಡೆಯುವುದು ಎಂ.ಎನ್.ಕೋಟೆಯಲ್ಲಿಯೇ ಎಂಬ ಹೆಗ್ಗಳಿಕೆಯೂ ಇದೆ. ವೈಕುಂಠ ಏಕಾದಶಿಯಂದು ವಿಶೇಷವಾಗಿ ಭಕ್ತರು ದಿನವಿಡೀ ಉಪವಾಸವಿದ್ದು ರಥೋತ್ಸವಕ್ಕೂ ಮುನ್ನ ರಥದ ಚಕ್ರಗಳಿಗೆ ತಂಗಿನಕಾಯಿ ಒಡೆಯುವರು.  ಮೊದಲ ತೆಂಗಿನ ಫಲ ಭಗವಂತನಿಗೆ ಅರ್ಪಿಸಿ ನಂತರ ಸೂರ್ಯಮಂಡಲೋತ್ಸವ, ಶಯನೋತ್ಸವ, ಪಲ್ಲಕ್ಕಿ ಉತ್ಸವ, ಸರ್ಪವಾಹನಗಳು, ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತವೆ ಎಂದು ಅರ್ಚಕ.ಎಂ.ವೆಂಕಟೇಶ್ ಮೂರ್ತಿ ತಿಳಿಸಿದ್ದಾರೆ.

ಲಕ್ಷ್ಮಿ ರಂಗನಾಥ ಸ್ವಾಮಿ ನಮ್ಮ ಮನೆದೇವರು. ಹಿರಿಯರ ಕಾಲದಿಂದ ಪೂಜಿಸಿಕೊಂಡು ಬಂದಿದ್ದೇವೆ. ಭಕ್ತರ ಬಯಕೆ ಇಡೇರಿಸುತ್ತಾನೆ ಎಂಬ ನಂಬಿಕೆ ಮತ್ತು ಪ್ರತೀತಿ ಇದೆ ಎನ್ನುತ್ತಾರೆ ಎಂ.ಎನ್. ಕೋಟೆಯ ಭಕ್ತ ಮೋಹನ್ ಗಾಣಿಗ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು