ಮಂಗಳವಾರ, ನವೆಂಬರ್ 30, 2021
21 °C

ಗಗನ ಮುಟ್ಟಿದ ತರಕಾರಿ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಳೆದ ವಾರ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಈ ವಾರ ಬಹುತೇಕ ತರಕಾರಿಗಳ ಧಾರಣೆ ಗಗನ ಮುಟ್ಟಿದೆ. ಹಾಗಲಕಾಯಿ ಹೊರತುಪಡಿಸಿದರೆ ಎಲ್ಲಾ ತರಕಾರಿ ಹಾಗೂ ಸೊಪ್ಪಿನ ಬೆಲೆ ದುಬಾರಿಯಾಗಿದೆ.

ಬೀನ್ಸ್ ಕೆ.ಜಿ ₹30–35 ಇದ್ದದ್ದು, ಒಮ್ಮೆಲೆ ₹60ಕ್ಕೆ ಜಿಗಿದಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲೇ ಧಾರಣೆ ದುಪ್ಪಟ್ಟಾಗಿದ್ದರೆ, ಚಿಲ್ಲರೆಯಾಗಿ ಕೆ.ಜಿ ₹80–100ಕ್ಕೆ ಮಾರಾಟವಾಗುತ್ತಿದೆ. ಕ್ಯಾರೇಟ್, ಬೀಟ್ರೂಟ್, ಗೆಡ್ಡೆಕೋಸು, ಹೂ ಕೋಸು ಸೇರಿದಂತೆ ಸಾಕಷ್ಟು ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಈರುಳ್ಳಿ, ಟೊಮೆಟೊ ಹಿಂದಿನ ವಾರಕ್ಕಿಂತ ಮತ್ತಷ್ಟು ಏರಿಕೆ ಕಂಡಿದೆ.

ಸೊಪ್ಪು ಸಹ ತರಕಾರಿ ಹಿಂಬಾಲಿಸಿದ್ದು, ಬೆಲೆ ಎರಡು ಪಟ್ಟು ಹೆಚ್ಚಳವಾಗಿದ್ದು, ಮತ್ತೂ ದುಬಾರಿಯಾಗುತ್ತಲೇ ಸಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ.ಗೆ ₹40 ಹೆಚ್ಚಳವಾಗಿದ್ದು, ಕೆ.ಜಿ ₹80ಕ್ಕೆ, ಸಬ್ಬಕ್ಕಿ ಸೊಪ್ಪು ಸಹ ಕೆ.ಜಿ.ಗೆ ₹30 ಏರಿಕೆಯಾಗಿದ್ದು, ₹60ಕ್ಕೆ ತಲುಪಿದೆ. ಪಾಲಕ್ ಸೊಪ್ಪು ಕೆ.ಜಿ ₹50ಕ್ಕೆ, ಮೆಂತ್ಯ ಸೊಪ್ಪು ಕೆ.ಜಿ ₹80ಕ್ಕೆ ಏರಿಕೆ ಕಂಡಿದೆ. ಚಿಲ್ಲರೆಯಾಗಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಕಳೆದ ಎಂಟತ್ತು ದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು, ತರಕಾರಿಗಳು ಗಿಡದಲ್ಲೇ ಕೊಳೆಯುತ್ತಿವೆ. ಗಿಡದಿಂದ ಬಿಡಿಸಿ ಮಾರುಕಟ್ಟೆಗೆ ಸಾಗಿಸುವುದು ಕಷ್ಟಕರವಾಗಿದೆ. ಸೊಪ್ಪು ಕೊಳೆತು ಹಾಳಾಗಿದ್ದು, ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ಹಾಗಾಗಿ, ಬೆಲೆ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.

ಧಾನ್ಯಗಳ ಬೆಲೆಯಲ್ಲಿ ಅತ್ಯಲ್ಪ ಏರಿಳಿತವಾಗಿದೆ. ಕಡಲೆ ಬೀಜ ಕೆ.ಜಿ.ಗೆ ₹10 ಹೆಚ್ಚಳವಾಗಿದ್ದು, ಉದ್ದಿನ ಬೇಳೆ ಅಲ್ಪ ಏರಿಕೆಯಾಗಿದ್ದರೆ, ಹೆಸರು ಕಾಳಿನ ಬೆಲೆ ಕೊಂಚ ಇಳಿಕೆಯಾಗಿದೆ. ಹಣ್ಣುಗಳ ಧಾರಣೆ ಬಹುತೇಕ ಸ್ಥಿರವಾಗಿದ್ದು, ಸೇಬಿನ ಬೆಲೆ ಅಲ್ಪ ಕಡಿಮೆಯಾಗಿದ್ದರೆ, ದಾಳಿಂಬೆ, ಸಪೋಟ ದರ ಸಹ ತಗ್ಗಿದೆ. ಇತರ ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಕೋಳಿ ಬೆಲೆ ಸ್ಥಿರ: ಕೋಳಿ ಧಾರಣೆ ಬಹುತೇಕ ಸ್ಥಿರವಾಗಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹160ಕ್ಕೆ, ರೆಡಿ ಚಿಕನ್ ₹250ಕ್ಕೆ, ಮೊಟ್ಟೆ ಕೋಳಿ ಕೆ.ಜಿ ₹130ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು